Advertisement

ಭಾವನಾತ್ಮಕ ಜೀವಿಗಳಾಗಿ ಆರೋಗ್ಯವಂತರಾಗಿರಿ

11:41 PM Nov 10, 2019 | Team Udayavani |

ಬದುಕೆಂಬುದು ಒಂದು ವರ.ಅದನ್ನು ಆನಂದಿಸಲು ಆರೋಗ್ಯದಿಂದಿರಬೇಕು.ಇಂದಿನ ತಾಂತ್ರಿಕ ಜಗತ್ತಿನಲ್ಲಿ ನಮ್ಮದೇ ಆದ ಮೌಲ್ಯಯುತ ಬದುಕನ್ನು ಯಾಂತ್ರಿಕವಾಗಿಸಿಕೊಂಡು ನರಳಾಡುವ ಬದಲು ಭಾವನಾತ್ಮಕ ಜೀವಿಗಳಾಗಿ ಆರೋಗ್ಯವಂತರಾಗಿ ಇರಬೇಕು.

Advertisement

ಹುಲಿ ತನಗೆ ಆಹಾರ ಪದಾರ್ಥ ಪಡೆಯಬೇಕಾದರೆ ಜಿಂಕೆಯ ಬೆನ್ನಟ್ಟಿ ಹೋಗಬೇಕು. ಜಿಂಕೆ ತನ್ನ ಪ್ರಾಣ ಉಳಿಸಿಕೊಳ್ಳಬೇಕಾದರೆ ಹುಲಿಗಿಂತ ಶರವೇಗದಲ್ಲಿ ಓಡಬೇಕು. ಇದಕ್ಕೆ ನಮ್ಮ ಜೀವನವೂ ಹೊರತಾಗಿಲ್ಲ. ಬೆಳೆಯುತ್ತಿರುವ ನಾವು ಈ ಸ್ಪರ್ಧಾತ್ಮಕ ಜಗತ್ತಿನ ಶೈಲಿಗೆ ಹೊಂದಿಕೊಳ್ಳದೆ ಬೇರೆ ದಾರಿಯೇ ಇಲ್ಲವಾಗಿದೆ.

ಇಂದು ನಮ್ಮ ಬದುಕು ಎಷ್ಟು ಯಾಂತ್ರಿಕವಾಗಿದೆ ಎಂದರೆ ಮಗು ಹುಟ್ಟಿದ ದಿನದಿಂದ ಐದು ವರ್ಷದವರೆಗೆ ಮನೆಯಲ್ಲಿ ನೆಮ್ಮದಿಯಿಂದ ಇರುತ್ತದೆಯೋ ಇಲ್ಲವೋ ಎಂದು ನಮಗೆ ಗೊತ್ತಿರುವುದಿಲ್ಲ. ಇದಕ್ಕೆ ಕಾರಣ ಗಂಡ ಹೆಂಡತಿಯರಿಬ್ಬರೂ ನೌಕರಿಯಲ್ಲಿ ಇರುವ ಕುಟುಂಬದಲ್ಲಿ ಮಗುವನ್ನು ನೋಡಿಕೊಳ್ಳಲು ಬಾಡಿಗೆ ತಾಯಿಯನ್ನು ನೇಮಿಸಿರುವುದಾಗಿದೆ. ಇದರಿಂದ ಆ ಮಗು ತನ್ನ ತಂದೆ, ತಾಯಿಯ ಪ್ರೀತಿ ವಾತ್ಸಲ್ಯ ಪಡೆಯಲು ಪರದಾಡಬೇಕಾಗಿದೆ. ಇದಕ್ಕೆ ಪೋಷಕರ ತಪ್ಪು ಎಂದೂ ದೂಷಿಸಲಾಗದು. ಏಕೆಂದರೆ ಇದಕ್ಕೆ ಇಂದಿನ ಒತ್ತಡದ ಬದುಕಿನ ಜೀವನ ಕ್ರಮವೂ ಕಾರಣವಾಗಿರಬಹುದು.

ಹಾಗೆಯೇ ಮಗುವಿಗೆ ಉತ್ತಮ ಉನ್ನತ ಶಿಕ್ಷಣ ಕೊಡಿಸುವ ನೆಪದಲ್ಲಿ ಹಾಸ್ಟೆಲ್‌ಗೆ, ಪಿಜಿಗೆ ಸೇರಿಸಿ ಕೈತೊಳೆದುಕೊಳ್ಳುವವರ ಸಂಖ್ಯೆ ಕೆಲವರಲ್ಲಿದೆ. ಮುಂದೆ ಆ ವ್ಯಕ್ತಿಗೆ ಅದೇ ಪರಿಸರ ಅಭ್ಯಾಸವಾಗುತ್ತದೆ. ಅನಂತರ ಆತ ಅಥವಾ ಆಕೆ ವಿದ್ಯಾಭ್ಯಾಸ ಮುಗಿಸಿ ಯಾವುದೋ ಒಂದು ನೌಕರಿ ಹಿಡಿದು ಮದುವೆಯಾಗಿ ಪರಸ್ಥಳದಲ್ಲಿ ತನ್ನ ಸಂಸಾರ ನಡೆಸುತ್ತಾರೆ. ಇತ್ತ ಪೋಷಕರು ತಮ್ಮ ಇಳಿವಯಸ್ಸಿನಲ್ಲಿ ಮಕ್ಕಳ ಆಶ್ರಯ ಬೇಡುತ್ತಾ ನಲುಗುವ ಅದೆಷ್ಟೋ ಕುಟುಂಬಗಳು ನಮ್ಮ ಕಣ್ಣೆದುರಿಗೆ ಇವೆ. ಇಂತಹ ಬದುಕು ನಮ್ಮದಾಗಿದೆ.

ಹೀಗೆ ಸಮಾಜದ ಬದಲಾವಣೆಗೆ ಹೊಂದಿಕೊಂಡು ಬಾಳಬೇಕಾದ ಅನಿವಾರ್ಯತೆ ನಮಗೆ ಬಂದೊದಗಿದೆ. ಇಂದು ನಾವು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದೇವೆ. ಹಾಗಂತ ಎಲ್ಲವನ್ನೂ ವಿಜ್ಞಾನ, ತಂತ್ರಜ್ಞಾನದ ಲೆಕ್ಕಾಚಾರದಲ್ಲಿ ಮಾಡಲಾಗದು. ಕೌಟುಂಬಿಕ ವಿಚಾರಗಳಾದ ಪ್ರೀತಿ, ಪ್ರೇಮ, ಮಮತೆ, ವಾತ್ಸಲ್ಯ,ಬಾಂಧವ್ಯಗಳು ಭಾವನಾತ್ಮಕಗಳಾಗಿರುವುದರಿಂದ ವಿಜ್ಞಾನ, ತಂತ್ರಜ್ಞಾನ ಏನೂ ಮಾಡಲಾಗದು. ಅಲ್ಲದೆ ಬದುಕಿನ ಅನೇಕ ಕೆಲಸ ಕಾರ್ಯಗಳಲ್ಲಿ ಯಂತ್ರಗಳನ್ನು ಬಳಸುತ್ತಾ ವೈಯಕ್ತಿಕ ಜೀವನಕ್ಕೂ ಯಾಂತ್ರಿಕತೆಯನ್ನು ಅಳವಡಿಸಿ ನಮ್ಮತನ ಮರೆಯುತ್ತಿದ್ದೇವೆಯೋ ಎಂದು ಅನ್ನಿಸದಿರದು.

Advertisement

ಉತ್ತಮ ಆರೋಗ್ಯದಿಂದ ಸುಂದರ ಪರಿಸರ ನಿರ್ಮಾಣ ಯಾಂತ್ರಿಕತೆ, ತಾಂತ್ರಿಕತೆ ಬದುಕಲು ಅವಶ್ಯವಾದರೂ ಹಾಗೆಂದು ಬದುಕೇ ಯಾಂತ್ರಿಕವಾಗಿರಬಾರದು. ನಮ್ಮ ಪರಿಸರದಲ್ಲಿನ ವಲಯಗಳಾದ ಕುಟುಂಬ, ಶಾಲೆ, ಸಮುದಾಯ, ಸಾಂಸ್ಕೃತಿಕ, ಧಾರ್ಮಿಕ ಆಚಾರ ವಿಚಾರ ಸಂಸ್ಕೃತಿ ರೂಪಿಸುವ ತಾಣಗಳಾಗಬೇಕು. ಇಲ್ಲದಿದ್ದರೆ ನಿರಾಶಾದಾಯಕ ಬದುಕನ್ನು ನಾವು ಕಾಣಬೇಕಾಗುತ್ತದೆ. ಇಂತಹ ವ್ಯವಸ್ಥೆ ಸೃಷ್ಟಿಸಲು ಮೊದಲು ನಾವು ನಮ್ಮ ಆರೋಗ್ಯ ಉತ್ತಮವಾಗಿಸಿಕೊಳ್ಳಬೇಕು. ಉತ್ತಮ ಆರೋಗ್ಯದಿಂದ ಸುಂದರ ಪರಿಸರ ನಿರ್ಮಿಸಬಹುದು.

ಕೋಟಿ ಕೊಟ್ಟರೂ ಬರದ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಅರಿವಿದ್ದರೂ ಬೈಕ್‌, ಕಾರು ಓಡಿಸುವಾಗ ಹೆಲ್ಮೆಟ್‌, ಸೀಟ್‌ಬೆಲ್ಟ್ ಧರಿಸಲು ನಿರಾಕರಿಸಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುವಾಗ ಮೊಬೈಲ್‌ನಲ್ಲಿ ಸಂಭಾಷಣೆ ನಡೆಸಿಕೊಂಡು ನೆಮ್ಮದಿಯ ಬದುಕನ್ನು ಹಾಳು ಮಾಡಿಕೊಳ್ಳಲು ನರಕಕ್ಕೆ ನಾವೇ ದಾರಿಯನ್ನು ಸೃಷ್ಟಿಸಿಕೊಳ್ಳುತ್ತೇವೆ. ಈ ಸ್ಥಿತಿಗೆ ನಿತ್ಯ ಜೀವನದ ಒತ್ತಡ, ಮಾನಸಿಕ ಸಮಸ್ಯೆ, ಮಿತಿಮೀರಿದ ಬಯಕೆಗಳು ಕಾರಣವಿರಬಹುದು. ಆದರೆ ಬದುಕಿನ ಬಂಡಿಯನ್ನು ಏರುದಾರಿಯಲ್ಲಿ ಸಾಗಿಸಲು ಹೋಗಿ ಕಿಬ್ಬದಿಯ ಕೀಲು (ಆರೋಗ್ಯ) ಕಳೆದುಕೊಳ್ಳಬೇಕಾಗುತ್ತದೆ ಎಂಬುದನ್ನೂ ನೆನಪಿಡಬೇಕು.

ಸಮಸ್ಯೆಗಳ ನಡುವೆ ಅವಕಾಶ ಹುಡುಕಿ
ಪ್ರತಿಯೊಬ್ಬರಲ್ಲೂ ಒಬ್ಬ ದೇವರಿದ್ದಾರೆ. ಆದರೆ ಪ್ರತಿಯೊಬ್ಬರು ಕೂಡ ದೇವರಾಗಲಾರರು. ಹಾಗೆಯೇ ಸಮಸ್ಯೆಗಳ ನಡುವೆ ನಾವೇ ಅವಕಾಶ ಹುಡುಕಬೇಕು. ಬದುಕನ್ನು ಸುಂದರಗೊಳಿಸಲು ನಾವೇ ಪ್ರಯತ್ನಿಸಬೇಕೇ ವಿನಾಃ ಕಳೆದ ದಿನಗಳನ್ನು ನೆನೆದು ಕೊರಗಬಾರದು.

  - ಜಯಾನಂದ ಅಮೀನ್‌ ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next