Advertisement

ಅವರು ಎಲ್ಲಿದ್ದರೂ, ಹೇಗಿದ್ದರೂ ಸುಖವಾಗಿರಲಿ…

09:41 PM Jul 22, 2019 | mahesh |

ನನ್ನ ಮಗನಿಗೆ ಆಗ 6 ತಿಂಗಳು. ಇದ್ದಕ್ಕಿದ್ದಂತೆ ಅಸ್ತಮಾ ಉಲ್ಬಣಿಸಿ, ನ್ಯುಮೋನಿಯಕ್ಕೆ ತಿರುಗಿತ್ತು. ಆಸ್ಪತ್ರೆಯಲ್ಲಿ ಡಾಕ್ಟರ್‌, “ನೀವು ಮಗುವನ್ನು ಅಡ್ಮಿಟ್‌ ಮಾಡಿ. ಸಂಜೆ ಹೊತ್ತಿಗೆ ಬೆಡ್‌ ಖಾಲಿಯಾಗುತ್ತದೆ’ ಅಂತ ಹೇಳಿದ್ದರು. ಆತನಕ ಏನು ಮಾಡುವುದು? ದುಬೈ ಅಂದರೆ ಕೇಳಬೇಕೇ? ಬಿರು ಬೇಸಿಗೆಯ ಮಧ್ಯಾಹ್ನ ಬೇರೆ. ಮರುಭೂಮಿಯ ಸುಡು ಬಿಸಿಲು. ಹೊರಗೆ 45 ಡಿಗ್ರಿ ಉಷ್ಣತೆ. ಆಸ್ಪತ್ರೆಯ ಮತ್ತೂಂದು ಬದಿಯಲ್ಲಿ ಗೆಳತಿಯ ಮನೆ ಇತ್ತು. ಅಲ್ಲಿಗೆ ಹೋಗುವ ಯೋಚನೆ ಬಂತು. ಆದರೆ, ಆಕೆ ಮನೆ ತಲುಪಲು ಬಹಳ ಒದ್ದಾಡಿದೆ. ಎಷ್ಟೇ ಕಾದರೂ ಟ್ಯಾಕ್ಸಿ ಸಿಗಲಿಲ್ಲ. ಹೆಗಲ ಮೇಲೆ ಮಗು.

Advertisement

ಒಂದಷ್ಟು ಹೊತ್ತು ಕಳೆಯಿತು. ರಣ ಬಿಸಿಲು ನನ್ನ ಬೆವರಿಳಿಸಿ, ಓ ದೇವರೇ ಅಂತ ಅಂದು ಕೊಳ್ಳುವ ಹೊತ್ತಿಗೆ ಒಂದು ಕಾರು ಬಂತು. ನಿಧಾನಕ್ಕೆ ಕಾರಿನ ಬಾಗಿಲು ತೆರೆಯಿತು. ಅದು ಬಿಎಮ್‌ಡಬ್ಲು ಕಾರು ಅನ್ನೋದು ನೆನಪಿದೆ. ಕಾರಲ್ಲಿ ಇದ್ದವರು ಸರ್ಕಾರದ ಉನ್ನತ ಹುದ್ದೆಯಲ್ಲಿದ್ದರು ಅಂತ ಕಾರಿನ ಕಂಪನಿ ಮೇಲಿದ್ದ ಹೆಸರೇ ಹೇಳುತ್ತಿತ್ತು. ಅವರೇನೋ ನಮ್ಮನ್ನು ಕಾರಲ್ಲಿ ಹತ್ತಿಸಿಕೊಂಡರು, ಆದರೆ, ಗೆಳತಿಯ ಮನೆ ಎಲ್ಲಿದೆ ಎಂದು ನನಗೆ ನಿಖರವಾಗಿ ತಿಳಿದಿರಲಿಲ್ಲ. ಮತ್ತೆ ಗೊಂದಲು. ಇರಲಿ ಅಂತ ಹಾಗೇ ಮುಂದುವರಿಯುತ್ತಿದ್ದಾಗ ಆಕೆಯ ಮನೆಯ ಪಕ್ಕದಲ್ಲಿ ಇದ್ದ ಅಂಗಡಿಯ ಹೆಸರು ಅಸ್ಪಷ್ಟವಾಗಿ ನೆನಪಾಯಿತು. ಆ ಹೊತ್ತಿಗೆ ಅಲ್ಲಿಗೆ ತಲುಪಿದ್ದೆವು. ಗಾಡಿಯಿಂದ ಇಳಿದು ಆಕೆಯ ಮನೆಗೆ ತಲುಪುವಾಗ ನಮ್ಮ ಲಗೇಜನ್ನು ಕೂಡ ಆ ಮಹಾನುಭಾವರೇ ಎತ್ತಿಕೊಂಡು ಬಂದು ಕೊಟ್ಟರು. ನಿಮ್ಮ ನೆರವಿಗೆ ಧನ್ಯವಾದ ಅಂತ ಹೇಳಿದೆ. ಅದಕ್ಕೆ ಅವರು, ಇದರಲ್ಲಿ ಧನ್ಯವಾದ ಪಡೆಯುವಂತದ್ದೇನಿಲ್ಲ. ನಿಮ್ಮ ಮಗು ಬೇಗ ಹುಷಾರಾಗಲಿ ಸಾಕು ಎಂದು ಹರಸಿ ಹೊರಟರು. ಕೇವಲ ಐದು ನಿಮಿಷವಷ್ಟೇ ಅವರು ಇದ್ದದ್ದು. ಆದರೂ ಅವರ ಸಹಾಯ ಐದು ಜನ್ಮಕ್ಕಾಗುವಷ್ಟು. ಮರೆಯಲಾರದ ಅವರ ನೆನಪು. ಅವರು ಎಲ್ಲಿದ್ದರೂ, ಹೇಗಿದ್ದರೂ ಸುಖವಾಗಿರಲಿ ಅಂತ ದಿನವೂ ಹಾರೈಸುತ್ತೇನೆ.

ರಜನಿ.ಭಟ್‌ ಕಲ್ಮಡ್ಕ ,ದುಬೈ

Advertisement

Udayavani is now on Telegram. Click here to join our channel and stay updated with the latest news.

Next