Advertisement
ಊರಿಗೆ ಹೋದಾಗ ಮಟಮಟ ಮಧ್ಯಾಹ್ನ ಇಬ್ಬರು ಪರಿಚಿತರು ಆಮಂತ್ರಣ ಕೊಡಲು ನಮ್ಮ ಮನೆಗೆ ಬಂದಾಗ ನನಗೋ ಅವರ ಮೇಲೆ ಕನಿಕರ. ಫ್ಯಾನ್ ಗಾಳಿಯ ವೇಗವನ್ನು ಹೆಚ್ಚಿಸಿದೆ. ಅವರಿಗದು ಅಸಹನೀಯವಾಯಿತು. ಕೃತಕ ಗಾಳಿಯಿಂದ ತಪ್ಪಿಸಿಕೊಂಡು ದೂರ ಹೋಗಿ ಕುಳಿತರು. ಕುಡಿಯಲು ಬಿಸಿ ಬಿಸಿ ಕಷಾಯವನ್ನು ಕೇಳಿದರು. ಆಶ್ಚರ್ಯ! ನಾನು ತಂಪು ನೀರಿನ ಶರಬತ್ತು ಕೇಳಬಹುದೆಂದುಕೊಂಡಿದ್ದೆ. ಅವರಲ್ಲಿ ಪ್ರಶ್ನಿಸಿಯೂ ಬಿಟ್ಟೆ. ಅದಕ್ಕವರು ದೇಹದ ಉಷ್ಣತೆಯ ಸಮತೋಲನ ಕಾಪಾಡಲು ಬಿಸಿಯನ್ನೇ ಕುಡಿಯಬೇಕೆಂದರು. ವಿದ್ಯುತ್ತಿನ ಮಿತಬಳಕೆ ಹಾಗೂ ವಾತಾವರಣಕ್ಕೆ ಹೊಂದಿಕೊಳ್ಳಬೇಕೆಂಬ ಪಾಠವನ್ನು ರೂಢಿಸಿಕೊಂಡು ಬಂದವರವರು. ಮತ್ತದೇ ಬಿಸಿಲಿನಲ್ಲಿ ಸರಸರನೆ ಹೊರಟೇ ಬಿಟ್ಟರು. ನಮಗೆ ಈ ಹವಾಮಾನವೆನ್ನುವುದು ನೈಸರ್ಗಿಕವಾಗಿ ಪ್ರಕೃತಿಯ ಕೊಡುಗೆಯಾದುದರಿಂದ ಅದನ್ನು ಖುಷಿಯಿಂದ ಅನುಭವಿಸಿದರೆ ಮಾನಸಿಕ, ದೈಹಿಕ ಆರೋಗ್ಯಕ್ಕೆ ಸಹಕಾರಿಯಾಗುವದೇನೋ. ಬಿಸಿಲು, ಗಾಳಿ, ಮಳೆ, ಚಳಿಗಳಿಗೆ ಅಳುಕದೆ ಮುಂದೆ ಸಾಗುವುದೇ ಜಾಣತನ.
Related Articles
Advertisement
ಇತ್ತೀಚೆಗೆ ಇವೆಲ್ಲವೂ ಕಾಣಸಿಗುವುದು ಅಪರೂಪ. ಹೊಸ ಜೀವನ ಶೈಲಿಗೆ ಹೊಂದಿಕೊಂಡ ಜನರಿಗೆ ಸಮಯವೂ ಇರುವುದಿಲ್ಲ .”ಇವೆಲ್ಲ ಕಷ್ಟ ಯಾಕೆ? ಹಣಕೊಟ್ಟು ಫ್ಯಾಕ್ಟರಿಗಳಲ್ಲಿ ತಯಾರಿಸಿರುವುದನ್ನೇ ಕೊಂಡರಾಯಿತು’ ಎನ್ನುವ ಮನೋಭಾವವೇ ಹೆಚ್ಚಾಗಿದೆ.
ಆ ಖುಷಿಯನ್ನು ಅನುಭವಿಸಿದ ನಾವೇ ಪುಣ್ಯವಂತರು. ರಜೆಯಲ್ಲಿ ದೂರದೂರಿನಲ್ಲಿರುವ ನೆಂಟರು, ಮಕ್ಕಳು ಮನೆಯಲ್ಲಿ ಜಮಾಯಿಸುತ್ತಿದ್ದರು. ಮಾವಿನ ಮರ, ಗೇರು ಮರಗಳಿಗೆ ಕಲ್ಲೆಸೆದು ಉದುರಿಸಿ ತಿನ್ನುವ ತಾಜಾ ಹಣ್ಣುಗಳ ಸವಿಯೆಷ್ಟು! ತೃಪ್ತಿಯೆಷ್ಟು! ಊರ ಹೊಳೆಗಳಲ್ಲೋ ಮಕ್ಕಳ ದಂಡು. ಖುಷಿಯಿಂದ ನೀರಲ್ಲಿ ಮುಳುಗಿ ಕೈಕಾಲು ಬಡಿಯುವಾಗ ನಮಗರಿವಿಲ್ಲದಂತೆ ಈಜಾಡಲು ಕಲಿತುಬಿಡುತ್ತಿದ್ದೆವು. ಸಂಜೆಯ ವೇಳೆ ಸಮುದ್ರ ತಟ. ಆಹಾ… ಎಷ್ಟು ಮಜಾ ! ಈಗೆಲ್ಲ ಬರಿಯ ನೆನಪುಗಳೇ.
ಮನೆಯ ನಾಲ್ಕು ಗೋಡೆಗಳ ನಡುವೆ ಸೆಕೆಯೆಂದು ಚಡಪಡಿಸುತ್ತ ಫ್ಯಾನಿನ ವೇಗವನ್ನು ಹೆಚ್ಚಿಸಿಯೋ ಹವಾನಿಯಂತ್ರಕ ಬಳಸಿಯೋ ಕುಳಿತು ಹಣ್ಣಿನ ರಸ ಹೀರುವ ಬದಲಾದ ಜೀವನ ಶೈಲಿ ಈಗ ಬೇಸರ ತರಿಸುವುದು ಸಹಜ. ಅನಿವಾರ್ಯತೆಯ ಹೊರತಾದ ಯಾವುದೇ ಐಷಾರಾಮವೂ ಬೇಕೆನಿಸುವದಿಲ್ಲ ನಮಗೆ. ದುಡಿಮೆಗಾರರೇ ಇರುವ ಪರಿಸರದಲ್ಲಿ ಬೆಳೆದುದರ ಪ್ರಭಾವವಿರಬಹುದೇನೋ. ಅವರಂತೆಯೇ ನಾವೂ ಯಾಕೆ ಇರಬಾರದು? ಎಂಬ ಮನೋಭಾವ. ಅದು ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾಗಿರಿಸಿದೆ ಎಂಬುದು ಗಮನಾರ್ಹ ಅಂಶ.
ಬೇಸಿಗೆ ರಜೆ ಬಂತೆಂದರೆ ಇಲ್ಲಿನ ಮಕ್ಕಳದ್ದು ಹಿಲ್ ಸ್ಟೇಷನ್‌ಗಳಿಗೆ ಪ್ರವಾಸಕ್ಕೆ ಹೋಗುವ ಬೇಡಿಕೆ. ಅವರಿಗೂ ವೇಳೆ ಕಳೆಯಬೇಕಲ್ಲ. ಬೇರೆ ಮಾರ್ಗವಿಲ್ಲ. ಊರ ಮನೆಯಲ್ಲಿ ಒಬ್ಬರೋ ಇಬ್ಬರೋ ಇರುವುದರಿಂದ “ಅಲ್ಲಿ ಆಟವಾಡಲು ಯಾರೂ ಇರಲ್ಲ, ನಾನು ಬರಲ್ಲ’ ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತಾರೆ. ಪಾಲಕರ ಮನೋಭಾವವೂ ಅವರಿಗೆ ಬೆಂಬಲವಾಗಿಯೇ ಇರುವುದು. ವಾಟರ್‌ಪಾರ್ಕ್‌ಗಳಲ್ಲಿ, ರೆಸಾರ್ಟ್‌ಗಳಲ್ಲಿ ಟಿಕೆಟ್‌ಗಳು, ರೂಮ್‌ಗಳು ಸಿಗುವುದೇ ಕಷ್ಟ. ಸಿಕ್ಕಿತೆಂದು ಖುಷಿಯಿಂದ ಹೋದರೆ ಜನಜಂಗುಳಿ. ಯಾವುದನ್ನೂ ಸರಿಯಾಗಿ ಆನಂದಿಸಲು ಆಗದು. ಸುಮ್ಮನೆ ಒಂದಿಷ್ಟು ಹಣ ಸುರಿದು ತಂಪಾಗಿ ಬರುತ್ತಾರೆ. ಅದನ್ನು ಆಚೆ ಈಚೆಯವರ ಹತ್ತಿರ ಹೇಳಿಕೊಂಡೋ ಫೋನ್‌ಗಳಲ್ಲಿ ಸಂದೇಶ ಕಳಿಸಿಯೋ ಇನ್ನಷ್ಟು ತಂಪಾಗುತ್ತಾರೆ. ಕಾಲಕ್ಕೆ ತಕ್ಕಂತೇ ಕುಣಿಯಲೇ ಬೇಕು.
ಸೆಕೆಗಾಲವೆಂದು ಚಡಪಡಿಸುವದಕ್ಕಿಂತ, ನಮ್ಮ ಯಾಂತ್ರಿಕ, ಆಧುನಿಕ, ಜೀವನಶೈಲಿಯಿಂದ ಅಪರೂಪಕ್ಕಾದರೂ ಹೊರಗೆ ಬಂದು, ಪ್ರಕೃತಿಯ ಸೇವೆಯಲ್ಲಿ ಸಕ್ರಿಯರಾಗಬೇಕು. ಅಂದರೆ ಮಾತ್ರ ಹಸಿರಾದ, ಹಸನಾದ, ಹಸಿಯಾದ ಭೂತಾಯಿ ತನ್ನ ಮಡಿಲಲ್ಲಿ ತಂಪಾದ ಆಸರೆ ನೀಡಲು ಸಾಧ್ಯವಾದೀತು. ನಿಸರ್ಗದ ನಿಯಮಗಳನ್ನು ಬದಲಿಸಲಂತೂ ನಮ್ಮಿಂದ ಸಾಧ್ಯವೇ ಇಲ್ಲ. ಆದಷ್ಟು ಹಿತಮಿತದಲ್ಲಿ ಪ್ರಕೃತಿ ನೀಡಿದ ಕಾಣಿಕೆಗಳನ್ನು ಬಳಸಿ, ಆಹಾರ ಇಳಿಸಿ, ಪರಿಸರವನ್ನೂ ಆರೋಗ್ಯವನ್ನೂ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ.
ಕಲಾಚಿದಾನಂದ