ಮುಂಬಯಿ: ಕೊರೊನಾ ಸೋಂಕಿನ ಕಾರಣ ಪ್ರತೀದಿನ ವೈದ್ಯರಿಗೆ ಸವಾಲು ಮತ್ತು ಒತ್ತಡವಿದೆ. ವೈದ್ಯರು ಒತ್ತಡವನ್ನು ನಿವಾರಿಸಲು ಯೋಗ ಮತ್ತು ಧ್ಯಾನ ಮಾಡಿದರೆ ಮತ್ತು ಕೆಲಸ ಮಾಡುವಾಗ ಮೌಲ್ಯಗಳನ್ನು ಅನುಸರಿಸಿದರೆ ಸೇವೆ ಮಾಡಲು ವಿಭಿನ್ನ ಶಕ್ತಿ ಪಡೆಯುತ್ತೀರಿ. ಮುಖ್ಯವಾಗಿ ವೈದ್ಯರು ವೃತ್ತಿಯಲ್ಲಿ ನೈತಿಕತೆಯನ್ನು ಸೇರಿಸಿಕೊಳ್ಳಬೇಕು ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ತಿಳಿಸಿದರು.
ವೈದ್ಯಕೀಯ ಕ್ಷೇತ್ರ ಮತ್ತು ಶಿಕ್ಷಣದಲ್ಲಿ ಗಮನಾರ್ಹ ಕೊಡುಗೆ ನೀಡಿದ ರಾಜ್ಯದ ಆಯ್ದ ವೈದ್ಯರಿಗೆ ರಾಜಭವನದಲ್ಲಿ ಬುಧವಾರ ರಾಜ್ಯಮಟ್ಟದ ಆರೋಗ್ಯ ಗೌರವ ಪುರಸ್ಕಾರ ವನ್ನು ಪ್ರದಾನ ಮಾಡಿ ಶುಭ ಹಾರೈಸಿದ ರಾಜ್ಯಪಾಲರು, ರಾಮಾಯಣದಲ್ಲಿ ವೈದ್ಯ ಸುಶೇನ್ ಪ್ರಸ್ತಾವಿಸಿದಾಗಿನಿಂದ ಭಾರತವು ವೈದ್ಯಕೀಯ ತಜ್ಞರ ದೀರ್ಘ ಸಂಪ್ರದಾಯ ಹೊಂದಿದೆ. ದೇಶದ ಹಳೆಯ ಪ್ರಾಯೋಗಿಕ ವೈದ್ಯಕೀಯ ಜ್ಞಾನವನ್ನು ಮುನ್ನೆಲೆಗೆ ತರಬೇಕು.
ಮಹಾರಾಷ್ಟ್ರವು ಅನೇಕ ಕ್ಷೇತ್ರಗಳಲ್ಲಿ ದೇಶವನ್ನು ಮುನ್ನಡೆಸಿದೆ. ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯವು ಮಾದರಿ ಆಗಬೇಕು ಎಂದು ಹೇಳಿದರು. ಆರೋಗ್ಯ ಗೌರವ ಸಮಾರಂಭವನ್ನು ವೈದ್ಯರ ಡೈರೆಕ್ಟರಿ ಇಂಡಿಯಾ (ಡಿಡಿಐ) ಮತ್ತು ಕ್ಲೌಡ್ ಫೌಂಡೇಶನ್ ಆಯೋಜಿಸಿದ್ದು, ಕ್ಲೌಡ್ ಫೌಂಡೇಶನ್ ಅಧ್ಯಕ್ಷ ಡಾ| ಗಿರೀಶ್ ಕಾಮತ್, ಉಪಾಧ್ಯಕ್ಷ ಡಾ| ದೇವೇಂದ್ರ ಹಂಬಾರ್ದಿಕರ್ ಮತ್ತು ಡಾ| ಮನೋಜ್ ದೇಶಪಾಂಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯಪಾಲರು ಡಾ| ಡಿ. ಜೆ ಅರ್ವಾಡೆ, ವೈದ್ಯ ಗೋಪಾಲಕೃಷ್ಣ ಅಂಡಂಕರ್, ಡಾ| ರಾಜಾರಾಮ್ ಜಗ್ತಾಪ್ ಮತ್ತು ಡಾ| ರಾಜೀವ್ ಬೊರ್ಲೆ ಅವರಿಗೆ ಜೀವಮಾನ ಸಾಧನ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಡಾ| ಅಜಿತ್ ಡ್ಯಾಮ್ಲೆ ಅವರಿಗೆ ಹಿಪೊಕ್ರೆಟಿಸ್ ಪ್ರಶಸ್ತಿ ನೀಡಲಾಯಿತು.
ವೈದ್ಯ ವಿನಯ್ ವೆಲಂಕರ್ ಅವರಿಗೆ ಧನ್ವಂತರಿ ಪ್ರಶಸ್ತಿ, ಡಾ| ಅರುಣ್ ಜಾಧವ್ ಅವರಿಗೆ ಸ್ಯಾಮ್ಯುಯೆಲ್ ಹನ್ನೆಮಾನ್ ಪ್ರಶಸ್ತಿ, ಡಾ| ಅಶಿಶ್ ನವಾರೆ, ಪುಣೆ ಜಂಟಿ ಪೊಲೀಸ್ ಆಯುಕ್ತ ಡಾ| ರವೀಂದ್ರ ಶಿಸ್ವೆ ಆರೋಗ್ಯ ಗೌರವವನ್ನೂ ನೀಡಲಾಯಿತು. ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರನ್ನು ರಾಜ್ಯಪಾಲರು ಗೌರವಿಸಿದರು. ಕಾರ್ಯಕ್ರಮವನ್ನು ಡಾ| ಅಶುತೋಷ್ ಗುಪ್ತಾ ನಿರ್ವಹಿಸಿದರು. ಸಂಜಯ್ ಕದಮ್ ವಂದಿಸಿದರು.