ಹೊಸದಿಲ್ಲಿ: “ಈ ಇಬ್ಬರು ಕಂದಮ್ಮಗಳು ಕೊರೊನಾದಿಂದಾಗಿ ಅಪ್ಪ-ಅಮ್ಮನನ್ನು ಕಳೆದುಕೊಂಡಿದ್ದಾರೆ. ಒಂದು ಹೆಣ್ಣು ಮಗುವಿಗೆ 3 ದಿನಗಳಾಗಿದ್ದರೆ, ಮತ್ತೂಂದಕ್ಕೆ 6 ತಿಂಗಳು. ದಯವಿಟ್ಟು ಈ ಮಕ್ಕಳನ್ನು ದತ್ತು ಪಡೆದು, ಅವರ ಬಾಳಿಗೆ ಬೆಳಕಾಗಿ…’
ಇಂಥದ್ದೊಂದು ಸಂದೇಶ ನಿಮ್ಮ ವಾಟ್ಸ್ ಆ್ಯಪ್, ಫೇಸ್‌ಬುಕ್ ಗ್ರೂಪ್ ಗಳಿಗೂ ಬಂದಿರಬಹುದು. ಸಂದೇಶ ಓದಿ ನೀವು ಮರುಕಪಟ್ಟಿರಲೂಬಹುದು. ಇನ್ನು ಕೆಲವರು ಅದರಲ್ಲಿರುವ ಸಂಖ್ಯೆಗೆ ಕರೆ ಮಾಡಿ ವಿಚಾರಿಸಿರಲೂ ಬಹುದು.
ಈ ಸಂದೇಶ ಬರೆದವರು ಒಳ್ಳೆಯ ಉದ್ದೇಶದಿಂದಲೇ ಅದನ್ನು ರವಾನಿಸಿದ್ದರೂ, ಈ ರೀತಿ ಕೋರಿಕೆ ಸಲ್ಲಿಸುವುದು ಕಾನೂನು ಬಾಹಿರ. ಅಲ್ಲದೆ, ಇಂಥ ಸಂದೇಶಗಳು ಅನಾಥ ಮಕ್ಕಳ ಮಾರಾಟ ಅಥವಾ ಕಳ್ಳಸಾಗಣೆಗೆ ದೂಡಿ, ಆ ಮಕ್ಕಳ ಜೀವಕ್ಕೇ ಅಪಾಯ ತಂದೊಡ್ಡಬಹುದು.
ವಾಟ್ಸ್ ಆ್ಯಪ್ ನಲ್ಲಿ ಚರ್ಚೆಯಾಗುವಂಥದ್ದಲ್ಲ: “ನಮ್ಮ ದೇಶದಲ್ಲಿ ಮಗುವನ್ನು ದತ್ತು ಪಡೆಯಬೇಕೆಂದರೆ ಸಾಕಷ್ಟು ಕಾನೂನಾತ್ಮಕ ಪ್ರಕ್ರಿಯೆಗಳಿವೆ. ಅಲ್ಲದೆ, ಅಂಥ ಮಕ್ಕಳಿಗೆ ಅವರ ಕೌಟುಂಬಿಕ ವ್ಯವಸ್ಥೆಯೊಳಗೇ ಪುನರ್ವಸತಿ ಕಲ್ಪಿಸುವ ಎಲ್ಲ ಪ್ರಯತ್ನಗಳೂ ವಿಫಲವಾದ ಬಳಿಕ ಕೊನೆಯ ಆಯ್ಕೆಯಾಗಿ ದತ್ತು ಸ್ವೀಕಾರವನ್ನು ಬಳಸಲಾಗುತ್ತದೆ. ದತ್ತು ಪಡೆಯುವಿಕೆ ಎನ್ನುವುದೇ ಕಾನೂನಾತ್ಮಕ ವಿಚಾರ. ಅದು ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಚರ್ಚೆಯಾಗಿ ಸಾಕಾರವಾಗುವ ವಿಚಾರ ಅಲ್ಲವೇ ಅಲ್ಲ’ ಎನ್ನುತ್ತಾರೆ ಯುನಿಸೆಫ್ ಇಂಡಿಯಾದ ಮಕ್ಕಳ ರಕ್ಷಣ ತಜ್ಞೆ ತನಿಶಾ ದತ್ತಾ.
ಜಾಲತಾಣಗಳಲ್ಲಿ ಬರುವ ಇಂಥ ಸಂದೇಶ ನಂಬಿದರೆ, ನೀವೂ ಮಾನವ ಹಕ್ಕು ಉಲ್ಲಂಘನೆಯ ಆರೋಪದಲ್ಲಿ ಟ್ರ್ಯಾಪ್ ಆಗ ಬಹುದು ಎನ್ನುತ್ತಾರೆ ಬೆಂಗಳೂರು ಚೈಲ್ಡ್ ಲೈನ್‌ನ ನೋಡಲ್ ನಿರ್ದೇಶಕ ವಾಸುದೇವ ಶರ್ಮಾ.