ಶ್ರೀನಿವಾಸಪುರ: ಈ ಬಾರಿ ಮಾವು ವಹಿವಾಟು ನಡೆಸುವ ವೇಳೆ ಕೊರೊನಾ ಸೋಂಕು ಹರಡಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಾಸಕ ಕೆ.ಆರ್. ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ರೈತರು, ವ್ಯಾಪಾರಿಗಳು, ಮಂಡಿ ಮಾಲಿಕರ ಸಭೆ ನಡೆಯಿತು. ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಲಹೆ ಸೂಚನೆ ಆಲಿಸಿದ ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಈ ಬಾರಿ ಮಾವು ಫಸಲು ಇಳಿಮುಖವಾಗಿದೆ. ಇದರ ನಡುವೆ ಕೋವಿಡ್ 19 ಸಮಸ್ಯೆ ತಲೆದೋರಿದೆ. ಆದ್ದರಿಂದ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿ ಎಪಿಎಂಸಿ, ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳನ್ನು ಕಟ್ಟುನಿಟ್ಟಾಗಿ
ಪಾಲಿಸಿಕೊಂಡು ವ್ಯಾಪಾರ ವಹಿವಾಟು ನಡೆಸಬೇಕೆಂದು ಸಲಹೆ ನೀಡಿದರು.
ಸಂಚಾರ ದಟ್ಟಣೆ ಬಗ್ಗೆ ಪೊಲೀಸ್ ಇಲಾಖೆ, ಆರೋಗ್ಯಕ್ಕೆ ಸಂಬಂಧ ಆರೋಗ್ಯ ಇಲಾಖೆ, ಸ್ವಚ್ಛತೆ, ಸ್ಯಾನಿಟೈಸರ್ ಬಳಕೆ, ಸರ್ಕಾರಿ ನೌಕರರು ಎಲ್ಲಾ ಕಡೆಯಲ್ಲಿ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಂಡಿಗಳು ಯಾವುದೇ ಸಮಸ್ಯೆ ಇದ್ದಲ್ಲಿ ಎಪಿಎಂಸಿಗೆ ತಿಳಿಸಬೇಕು ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಸತ್ಯಭಾಮಾ ಮಾತನಾಡಿ, ಜಿಲ್ಲೆಯಲ್ಲಿ ಇದುವರಿಗೂ ಕೊರೊನಾ ಪಾಸಿಟೀವ್ ಇಲ್ಲ. ಆದ್ದರಿಂದ ಎಲ್ಲರೂ ವ್ಯಾಪಾರ ಮಾಡುವ ವೇಳೆ ಕೆಲವು ನಿಯಮ ಪಾಲಿಸಿಕೊಂಡು ನಡೆಯಬೇಕಿದೆ. ಜಿಲ್ಲೆಯಿಂದ ಎಪಿಎಂಸಿ ಪ್ರಾಂಗಣಕ್ಕೆ ಬರುವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಹೊರ ರಾಜ್ಯ, ಜಿಲ್ಲೆಗಳಿಂದ ಬರುವಂತವರ ಬಗ್ಗೆ ಕಡ್ಡಾಯವಾಗಿ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್, ಎಪಿಎಂಸಿ ಅಧ್ಯಕ್ಷ ಎನ್.ರಾಜೇದ್ರ ಪ್ರಸಾದ್, ತೋಟಗಾರಿಕೆ ಉಪನಿರ್ದೇಶಕಿ ಗಾಯತ್ರಿ, ಇಒ ಅನಂದ್, ಟಿಎಚ್‌ಒ
ವಿಜಯ ಇದ್ದರು.