ಪುತ್ತೂರು: ಡಿಜಿಟಲ್ ಇಂಡಿಯಾದಡಿಯಲ್ಲಿ ಇಂಟರ್‌ನೆಟ್ ವ್ಯವಹಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಯಾವುದೇ ಅಂತರ್ಜಾಲ ಸೇವೆಗಳನ್ನು ಉಪಯೋಗಿಸುವಾಗ ಅದು ಎಷ್ಟರ ಮಟ್ಟಿಗೆ ಸುರಕ್ಷಿತ ಎನ್ನುವುದನ್ನು ಗಮನಿಸಬೇಕು. ಪಾಸ್‌ವರ್ಡ್‌ಗಳನ್ನು ಬಳಸುವಾಗ ಜಾಗರೂಕರಾಗಿರಬೇಕು ಎಂದು ಮಂಗಳೂರು ಎ.ಐ.ಎಂ.ಐ.ಟಿ ಯ ಎಂಸಿಎ ವಿಭಾಗದ ಸಹ ಪ್ರಾಧ್ಯಾಪಕ ಡಾ| ಸಂತೋಷ್ ಬಿ. ಹೇಳಿದರು.
ಅವರು ವಿವೇಕಾನಂದ ಕಾಲೇಜಿನ ಗಣಕಶಾಸ್ತ್ರ ವಿಭಾಗ ಹಾಗೂ ಐಟಿ ಕ್ಲಬ್ ವಾರ್ಷಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗ ಗಳಿಸಲು ಅಂಕಗಳು ಪ್ರಧಾನವೆನಿಸುವುದಿಲ್ಲ. ಬದಲಾಗಿ ವ್ಯಕ್ತಿಯ ಸಂವಹನ ಕಲೆ, ಜ್ಞಾನ ಹಾಗೂ ಮಂಡನಾ ಚಾತುರ್ಯ ಪ್ರಮುಖವೆನಿಸುತ್ತವೆ. ಹಾಗಾಗಿ ಸಾಧ್ಯವಾದಷ್ಟು ಸಂಶೋಧನೆಗಳನ್ನು ನಡೆಸುವುದು, ಪ್ರಾಯೋಗಿಕ ಜ್ಞಾನ ಹೊಂದುವುದು ಅನಿವಾರ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಸಂಘಗಳು ಕ್ರಿಯಾತ್ಮಕ ವಿದ್ಯಾರ್ಥಿಗಳಿಗೆ ಒಂದು ಅತ್ಯುತ್ತಮ ವೇದಿಕೆ. ಅಂತಹ ವೇದಿಕೆ ಸಿಕ್ಕಾಗ ಆ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜ್ಞಾನವನ್ನು ಸಂಪಾದಿಸುವುದು ನಮ್ಮ ಕೈಯಲ್ಲಿದೆ. ನಾವು ಗಳಿಸಿದ ಸಂಪತ್ತನ್ನು ಕದಿಯಬಹುದು ಆದರೆ ವಿದ್ಯೆಯನ್ನಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗಣಕಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್, ಐಟಿ ಕ್ಲಬ್ ಉಪಾಧ್ಯಕ್ಷ ನಿಶಾಂತ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅಮƒತವರ್ಷಿಣಿ ಪ್ರಾರ್ಥಿಸಿದರು. ಐಟಿ ಕ್ಲಬ್ ಸಂಚಾಲಕ, ಉಪನ್ಯಾಸಕ ಸೂರ್ಯನಾರಾಯಣ ಪಿ.ಎಸ್ ಸ್ವಾಗತಿಸಿ, ಅಧ್ಯಕ್ಷೆ ಶ್ರೇಯಾ ವಂದಿಸಿದರು. ವಿದ್ಯಾರ್ಥಿನಿಯರಾದ ಭಾನುಪ್ರಿಯಾ, ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.
ಜ್ಞಾನವೇ ಸಂಪತ್ತು
ಜ್ಞಾನವೆಂಬುದು ಒಂದು ಸಂಪತ್ತು. ಅದು ಯಾವತ್ತೂ ತನ್ನ ಒಡೆಯನನ್ನು ನಿರಾಶೆಗೊಳಿಸುವುದಿಲ್ಲ. ಅದನ್ನು ಸಮಾಜದ ಒಳಿತಿಗಾಗಿ ಬಳಸಬೇಕೆ ವಿನಃ ವಿನಾಶಕ್ಕೆಂದಲ್ಲ. ಕಲಿಯಲು ಹಾಗೂ ಕಲಿತುಕೊಳ್ಳಲು ಹಿರಿಯ ಕಿರಿಯ ಎಂಬ ಭೇದ ಬೇಡ. ಪ್ರತಿಯೊಂದನ್ನೂ ವ್ಯಾವಹಾರಿಕ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್ ವಿಲ್ಸನ್ ಪ್ರಭಾಕರ್‌ಕಿವಿಮಾತು ಹೇಳಿದರು.