Advertisement
ಬಕೆಟ್‌ನಲ್ಲಿ ಸ್ವಲ್ಪ ಕಾಲದ ಬಳಿಕ ಹನಿ ಹನಿ ನೀರು ಸಂಗ್ರಹಗೊಂಡು ಬಕೆಟ್ ತುಂಬುವ ಹಾಗೆಯೇ ಭಾರೀ ಸದ್ದುಗದ್ದಲದಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟ ಕೂಡ ನಿಧಾನವಾಗಿ ಬೆಳೆದುಬರುವಂಥದ್ದು. ಒಂದೇ ಬಾರಿಗೆ ಇದು ಉಂಟಾಗುವುದಿಲ್ಲ. ಪ್ರತೀ ಬಾರಿ ಸದ್ದನ್ನು ಕೇಳಿಸಿಕೊಂಡಾಗಲೂ ಅದು ಸ್ವಲ್ಪ ಸ್ವಲ್ಪವೇ ಹೆಚ್ಚಾಗುತ್ತ ಹೋಗುತ್ತದೆ. ಭಾರೀ ಸದ್ದಿನಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟವು ವಿಶೇಷವಾಗಿ ಉದ್ಯೋಗ ಸಂಬಂಧಿಯಲ್ಲದ ಪರಿಸರಗಳಲ್ಲಿ ಸಾಮಾನ್ಯವಾಗಿ ಗುರುತಿಸಲಾಗದ ತೊಂದರೆಯಾಗಿರುತ್ತದೆ. ಮಕ್ಕಳು ಮತ್ತು ಹದಿಹರಯದವರು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಸದ್ದಿನಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟಕ್ಕೀಡಾಗುತ್ತಿದ್ದಾರೆ ಅಥವಾ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಸಂಶೋಧನೆಗಳು ಹೇಳಿವೆ. ಬಹಳ ಸರಳವಾದ ಎಚ್ಚರಿಕೆಯ ಕ್ರಮಗಳಿಂದ ಸದ್ದಿನಿಂದ ಉಂಟಾಗುವ ಶ್ರವಣ ಶಕ್ತಿ ನಷ್ಟವನ್ನು ಸಂಪೂರ್ಣವಾಗಿ ತಪ್ಪಿಸಬಹುದಾಗಿದೆ.
Related Articles
Advertisement
ಶ್ರವಣ ಸಾಮರ್ಥ್ಯವನ್ನು ಗಮನದಲ್ಲಿ ಇರಿಸಿಕೊಂಡು, ಹೆಚ್ಚು ಉತ್ತಮ ಆಟೋಟ ಕಾರ್ಯಚಟುವಟಿಕೆಗಳನ್ನು ಆಯ್ಕೆ ಮಾಡಿಕೊಳ್ಳಲು ನಿಮ್ಮ ಮಗುವಿಗೆ ನೆರವಾಗಿ. ಇಂದಿನ ಮನೋರಂಜನೆಯ ದೃಶ್ಯಗಳು ಮತ್ತು ಆಟಿಕೆಗಳು ಮಕ್ಕಳು ಮಾತ್ರವಲ್ಲದೆ ಹಿರಿಯರನ್ನು ಕೂಡ ಭಾರೀ ಸದ್ದುಗದ್ದಲದತ್ತ ಆಕರ್ಷಿಸುವಂತಿವೆ. ಅದೃಷ್ಟವಶಾತ್ ಕಡಿಮೆ ಸದ್ದಿನ, ಮೌನವಾಗಿದ್ದೂ ಮನೋರಂಜನೆ ಅನುಭವಿಸುವ ಅನೇಕ ಆಯ್ಕೆಗಳು ನಮ್ಮೆದುರಿಗಿವೆ. ಹೆತ್ತವರು ಮತ್ತು ಮಕ್ಕಳ ಆರೈಕೆದಾರರು ಮಕ್ಕಳ ಜತೆಗೆ ಈ ಆಯ್ಕೆಗಳನ್ನು ಮಾಡಿಕೊಂಡು ಸಂತೋಷವಾಗಿರಬೇಕು. ಉದಾಹರಣೆಗೆ, ಮಕ್ಕಳಿಗೆ ಒಳ್ಳೆಯ ಪುಸ್ತಕಗಳನ್ನು ಓದಿಹೇಳುವ ಹವ್ಯಾಸವನ್ನು ಬೆಳೆಸಿಕೊಂಡರೆ ಅವರ ಜ್ಞಾನ ವೃದ್ಧಿಯಾಗುತ್ತದೆ ಮಾತ್ರವಲ್ಲದೆ ಹೆತ್ತವರು ಮತ್ತು ಮಕ್ಕಳ ನಡುವೆ ಉತ್ತಮ ಸಂಬಂಧದ ಬೆಸುಗೆ ಉಂಟಾಗುತ್ತದೆ. ಸದ್ದು ಮಾಡುವ ಆಟಿಕೆಗಳನ್ನು ಸಂಪೂರ್ಣವಾಗಿ ವರ್ಜಿಸಬೇಕು ಎಂದೇನಿಲ್ಲ. ಕಡಿಮೆ ಪ್ರಮಾಣದ ಸದ್ದು ಮಾಡುವ, ಶೈಕ್ಷಣಿಕ ಕಂಪ್ಯೂಟರ್ ಗೇಮ್‌ಗಳು, ಮಿದುಳಿಗೆ ಕೆಲಸ ಕೊಡುವ ಪಝಲ್ ಗಳು, ರಚನಾತ್ಮಕ ಆಟಗಳು ಮತ್ತು ಚೆಸ್‌ನಂತಹ ಬೋರ್ಡ್ ಆಟಗಳು ಕಡಿಮೆ ಸದ್ದಿನ ನಡುವೆ ಆಟವಾಡುತ್ತ ಕಲಿಯುವುದಕ್ಕೆ ಕೂಡ ಅನುವು ಮಾಡಿಕೊಡುತ್ತವೆ. ಕೊನೆಯದಾಗಿ, ಸಂಗೀತ ರಸಮಂಜರಿಗಳು, ಹಬ್ಬಗಳು, ಸುಡುಮದ್ದು ಪ್ರದರ್ಶನ ಇತ್ಯಾದಿಗಳನ್ನು ನೋಡಲು ಹೋಗುವಾಗ ನೀವು ಮತ್ತು ನಿಮ್ಮ ಮಗು ಸಹಿತ ಕುಟುಂಬದವರು ಇಯರ್ ಪ್ಲಗ್ ಹಾಕಿಕೊಳ್ಳುವುದನ್ನು ಮರೆಯದಿರಿ.
ಮುಂದಿನ ಬಾರಿ ನಿಮ್ಮ ಮಗುವಿಗೆ ಆಟಿಕೆ ಖರೀದಿಸುವುದಕ್ಕೆ ಮುನ್ನ ಅದು ಮಗುವಿನ ಶ್ರವಣ ಸಾಮರ್ಥ್ಯಕ್ಕೆ ಉಂಟುಮಾಡಬಲ್ಲ ಅಪಾಯದ ಬಗ್ಗೆ ಗಮನ ಹರಿಸಿ. ಇದರ ಜತೆಗೆ ಮಕ್ಕಳು ವೀಡಿಯೋ/ ಕಂಪ್ಯೂಟರ್ ಗೇಮ್‌ಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಹೆಡ್‌ಫೋನ್‌ಗಳನ್ನು ಉಪಯೋಗಿಸುತ್ತಾರೆ. ಸದ್ದಿನಿಂದ ಶ್ರವಣ ಶಕ್ತಿ ನಷ್ಟ ಉಂಟಾಗುವ ಅಪಾಯವನ್ನು ಕಡಿಮೆ ಮಾಡಲು ಇಲ್ಲಿ ಕೆಲವು ಸರಳ ತಂತ್ರಗಳನ್ನು ನೀಡಲಾಗಿದೆ.
ನಿಮ್ಮ ಮಗು ಹೆಡ್‌ಫೋನ್‌ಗಳನ್ನು ಅತೀ ಹೆಚ್ಚು ವ್ಯಾಲ್ಯೂಮ್‌ನಲ್ಲಿ ಇರಿಸಿ ಕೇಳದಂತೆ ನೋಡಿಕೊಳ್ಳಿ.
ಮೊಬೈಲ್ ಫೋನನ್ನು ಮಗುವಿನ ಕೈಗೆ ಕೊಡುವಾಗ ಧ್ವನಿಯನ್ನು ಸ್ವೀಕಾರಾರ್ಹ ಮಟ್ಟದಲ್ಲಿಯೇ ಲಾಕ್ ಮಾಡಿ ಕೊಡಿ.
ಸದ್ದು ಹೊರಡಿಸುವ ಆಟಿಕೆಗಳನ್ನು ಮಗುವಿಗೆ ಕೊಡುವುದಕ್ಕೆ ಮುನ್ನ ಪರೀಕ್ಷಿಸಿಯೇ ಕೊಡಿ. ನೀವು ಗಮನಿಸಬೇಕಾದ ಸರಳ ಸತ್ಯವೆಂದರೆ, ಆಟಿಕೆಯ ಸದ್ದು ನಿಮಗೆ ಕಿರಿಕಿರಿ ಎನ್ನಿಸುವಂತಿದ್ದರೆ ನಿಮ್ಮ ಮಗುವಿಗೆ ಅದು ಭಾರೀ ದೊಡ್ಡ ಸದ್ದಾಗಿರುತ್ತದೆ.
ಆಟಿಕೆ ದೊಡ್ಡ ಸದ್ದು ಹೊರಡಿಸುತ್ತದೆಯೇ ಇಲ್ಲವೇ ಎಂಬ ಬಗ್ಗೆ ಗೊಂದಲ ಇದೆಯೇ? ನಿಮ್ಮ ಮೊಬೈಲ್‌ಗೆ ಉಚಿತವಾಗಿ ಸಿಗುವ ಡೆಸಿಬಲ್ ಮೀಟರ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 85 ಡೆಸಿಬಲ್‌ಗಿಂತ ಹೆಚ್ಚಿರುವ ಯಾವುದೇ ಸದ್ದು ನಿಮ್ಮ ಮಗುವಿಗೆ ತೊಂದರೆದಾಯಕವಾಗಿರುತ್ತದೆ.
-ಡಾ| ಉಷಾ ಶಾಸ್ತ್ರಿ, ಅಸೋಸಿಯೇಟ್ ಪ್ರೊಫೆಸರ್, ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ, ಕೆಎಂಸಿ, ಮಂಗಳೂರು)