ಕಲಬುರಗಿ: ಕಳೆದ ವರ್ಷದ ಬೆಳೆವಿಮೆ ಮಂಜೂರಾತಿ ತಾರತಮ್ಯ ಈ ವರ್ಷ ಪುನರಾವರ್ತನೆಯಾಗುವುದನ್ನು ತಪ್ಪಿಸಲು, ಸಮರ್ಪಕವಾಗಿ ರೈತರಿಗೆ ಬೆಳೆವಿಮೆ ಸಿಗುವ ನಿಟ್ಟಿನಲ್ಲಿ ವಿಮಾ ಕಂಪನಿ ಅಧಿಕಾರಿಗಳೊಂದಿಗೆ ಬೆಳೆ ಇಳುವರಿ ಪ್ರಮಾಣ (ಕ್ರಾಪ್ ಕಟಿಂಗ್ ಎಕ್ಸಪಿರಿಮೆಂಟ್) ಅಳೆಯುವ ಮುಂಚೆ ಕಡ್ಡಾಯವಾಗಿ ಸಂಬಂಧಿಸಿದ ಇಲಾಖೆಗಳ ಸಭೆ ನಡೆಸುವಂತೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಸಂಬಂಧಪಟ್ಟಂತೆ ಅಭಿವೃದ್ಧಿ ಕಾಮಗಾರಿಗಳ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಬೆಳೆ ಹಾನಿಗೆ ತಕ್ಕಂತೆ ವರದಿ ರೂಪಿಸುವಲ್ಲಿ ಅಧಿಕಾರಿಗಳು ನಿಗಾ ವಹಿಸದಿರುವುದು ನಿಜಕ್ಕೂ ದುರಂತವೆಂದೇ ಹೇಳಬಹುದು. ವಿಮಾ ಕಂಪನಿಗಳ ಜತೆ ಕೈಜೋಡಿಸಿ ಅವರಿಗೆ ತಕ್ಕಂತೆ ಹಾನಿ ರೂಪಿಸುವ ಷಡ್ಯಂತ್ರ ಇನ್ನು ಮುಂದೆಯಾದರೂ ನಿಲ್ಲಲಿ. ಇಲ್ಲದಿದ್ದರೆ ರೈತರೇ ರೊಚ್ಚಿಗೆದ್ದು ಛಳಿ ಬಡಿಸಿದರೆ ಯಾರೂ ರಕ್ಷಣೆ ಬಾರರು ಎಂದು ಶಾಸಕರು ಗುಡುಗಿದರು.
ಶಾಸಕರು ಮುಂದಿನ ಸಲ ಸಭೆಗೆ ಬರುವಾಗ ಆಯಾ ಇಲಾಖೆಯಲ್ಲಿ ಕನಿಷ್ಠ ಮೂರು ವರ್ಷಗಳ ಪ್ರಗತಿ ವಿವರಣೆಯನ್ನು ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ತರಬೇಕು. ರಾಜ್ಯದಲ್ಲಿ ಸರ್ಕಾರ ಬದಲಾಗಿದ್ದರೂ ಅಧಿಕಾರಿಗಳ ಮನಸ್ಥಿತಿ ಇನ್ನೂ ಬದಲಾದಂತೆ ಕಾಣುತ್ತಿಲ್ಲ. ಕಚೇರಿಗಳಿಗೆ ಕೆಲಸಕ್ಕಾಗಿ ಬರುವ ಜನರನ್ನು ಗೌರವದಿಂದ ನಡೆಸಿಕೊಂಡು ಅವರ ದೂರು-ದುಮ್ಮಾನಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಡಿ ತಾಕೀತು ಮಾಡಿದರು.
ಮಳೆ ಬಂದಿದೆ. ಆದರೆ ಅಂತರ್ಜಲ ಮಟ್ಟ ಹೆಚ್ಚಳವಾಗಿಲ್ಲ. ಆದ್ದರಿಂದ ಕುಡಿಯುವ ನೀರಿನ ಬಗ್ಗೆ ನಿರ್ಲಕ್ಷ್ಯ ವಹಿಸದಿರಿ. 30 ಕುಡಿಯುವ ಕಾಮಗಾರಿಗಳಿಗೆ ಆರು ತಿಂಗಳ ಹಿಂದೆಯೇ ಅನುಮೋದನೆ ನೀಡಲಾಗಿದೆ. ಆದರೆ ಟೆಂಡರ್ ಯಾಕೆ ಕರೆದಿಲ್ಲ?. ಟಾಸ್ಕ್ಫೋರ್ಸ್‌ನ ಕಾಮಗಾರಿಗಳ ವಿವರಣೆ ಇಲ್ಲದಿರುವುದನ್ನು ಕೆಲಸ ಏನು ಮಾಡುತ್ತಿದ್ದೀರಿ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಕುಡಿಯವ ನೀರು ಸರಬರಾಜು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ವಿವಿಧ ಇಲಾಖೆಗಳಿಂದ ಕೈಗೆತ್ತಿಕೊಂಡರುವ ಹಲವು
ಯೋಜನೆಗಳ ಪೂರ್ಣ ಮಾಹಿತಿ ನೀಡದ ಅಧಿಕಾರಿಗಳ ಬಗ್ಗೆ ತೀವ್ರ ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳಿಗೆ ನೊಟೀಸ್ ನೀಡಿ ಕ್ರಮ ಕೈಗೊಳ್ಳುವಂತೆ ತಾಪಂ ಇಒ ಮಾನಪ್ಪ ಕಟ್ಟಿಮನಿಯವರಿಗೆ ನಿರ್ದೇಶನ ನೀಡಿದರು. ರೇಷ್ಮೆ ಇಲಾಖೆ ಹೆಸರಿಗೆ ಎನ್ನುವಂತಾಗಿದೆ.
ಆದ್ದರಿಂದ ಇಲಾಖೆ ಇದೆ ಎಂಬುದನ್ನು ತೋರಿಸಲು ಯೋಜನೆಗಳನ್ನು ಎಲ್ಲ ರೈತರಿಗೆ ತಲುಪಿಸಿ ಎಂದು ಇಲಾಖಾಧಿಕಾರಿಗಳಿಗೆ ಸೂಚಿಸಿದರಲ್ಲದೇ ರೇಷ್ಮೆ ಪ್ರೋತ್ಸಾಹ ಧನ ರೈತರಿಗೆ ತಲುಪಿಸಬೇಕು. ಶೈಕ್ಷಣಿಕ ಸುಧಾರಣೆಗೆ ಶ್ರಮಿಸಬೇಕು. ಕೊನೆ ಹಣೆಪಟ್ಟಿ ತೊಲಗಿಸಲು ಶ್ರಮಿಸಿ. ಬಹು ಮುಖ್ಯವಾಗಿ ಫಲಿತಾಂಶ ಸುಧಾರಣೆ ಕಾರ್ಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಕೈಗೊಳ್ಳಿ. ಆರೋಗ್ಯ ಸೇವೆ ಸಹ ಕೊರತೆಯಾಗದಂತೆ ನಿಗಾ ವಹಿಸಿ, ಬಹು ಮುಖ್ಯವಾಗಿ ಪಟ್ಟಣದಲ್ಲಿ ಸ್ಥಾಪಿಸಬೇಕೆಂದಿರುವ ಸಮುದಾಯ ಆರೋಗ್ಯ ಕೇಂದ್ರ ಕಾರ್ಯಾನುಷ್ಠಾನಕ್ಕೆ ಇಚ್ಚಾಶಕ್ತಿ ತೋರಿಸಿ ಎಂದು ಶಾಸಕ ರೇವೂರ ಅಧಿಕಾರಿಗಳಿಗೆ ಸಲಹೆ ನೀಡಿದರು. ತಾಪಂ ಅಧ್ಯಕ್ಷ ಶಿವರಾಜ ಸಜ್ಜನ, ಇಒ ಮಾನಪ್ಪ ಕಟ್ಟಿಮನಿ, ಸ್ಥಾಯಿ ಸಮಿತಿ ಅಧ್ಯಕ್ಷ ಆನಂದ ಚವ್ಹಾಣ ಸೇರಿದಂತೆ ಇತರರಿದ್ದರು.