ಪಿರಿಯಾಪಟ್ಟಣ: ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆಸಲು ಸಕಲ ರೀತಿಯಲ್ಲಿ ಸಿದ್ಧತೆ ಕೈಗೊಂಡಿದ್ದು ಮತದಾನ ಪ್ರಕ್ರಿಯೆಗೆ 1362 ಸಿಬ್ಬಂದಿಯನ್ನು ನೇಮಿಸಿ ಅಗತ್ಯ ತರಬೇತಿ ನೀಡಲಾಗಿದೆ ಎಂದು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಆರ್.ಸುಮಾತಿಳಿಸಿದರು.
ವಿಶೇಷ ಮತಗಟ್ಟೆಗಳು: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಒಟ್ಟು 230 ಮತಗಟ್ಟೆಗಳಲ್ಲಿ 2 ಪಿಂಕ್ ಮತಗಟ್ಟೆ, 1 ಗಿರಿಜನ ಶೈಲಿಯ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದೆ. 56 ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಗುರುತಿಸಲಾಗಿದೆ. ತಾಲೂಕಿನ ಕಂಪಲಾಪುರ ಮತ್ತು ಪಿರಿಯಾಪಟ್ಟಣದಲ್ಲಿ ಪಿಂಕ್ ಮತಗಟ್ಟೆ ತೆರೆಯಲಾಗುತ್ತಿದೆ. ಮತಗಟ್ಟೆಗಳಲ್ಲಿ ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ.
ಹಾಡಿ ಶೈಲಿ ಮತಗಟ್ಟೆ: ಬಹುತೇಕ ಹೆಚ್ಚಿನ ಗಿರಿಜನ ಮತದಾರರನ್ನೇ ಹೊಂದಿರುವ ಮುತ್ತೂರಿನ ರಾಜೀವ್ ಗ್ರಾಮ ಮತಗಟ್ಟೆಯಲ್ಲಿ ಗಿರಿಜನ ಹಾಡಿಯನ್ನು ಹೋಲುವ ಸಾಂಪ್ರದಾಯಕ ಮತಗಟ್ಟೆಯನ್ನು ತೆರೆಯಲಾಗುವುದು. 11 ಮತ ಕೇಂದ್ರಗಳಲ್ಲಿ ವಿಡಿಯೋ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅಂಚೆ ಮತದಾನ: ತಾಲೂಕಿನ 1105 ಸಿಬ್ಬಂದಿ ಅಂಚೆ ಮತದಾನಕ್ಕೆ ಅರ್ಜಿ ಪಡೆದಿದ್ದು ಅವರಲ್ಲಿ ಈಗಾಗಲೇ 605 ಮಂದಿ ತಮ್ಮ ಮತ ಚಲಾಯಿಸಿದ್ದಾರೆ. ಅಂಚೆ ಮತದಾನಕ್ಕಾಗಿ ತಾಲೂಕು ಕಚೇರಿಯಲ್ಲಿಯೂ ವ್ಯವಸ್ಥೆ ಮಾಡಲಾಗಿದ್ದು ಮೇ 12ರಂದು ಸಂಜೆ 6ರವರೆಗೆ ಸಮಯ ನೀಡಲಾಗಿದೆ ಎಂದು ಹೇಳಿದರು.
ಮದ್ಯ ನಿಷೇಧ: ಮೇ10ರಂದು ಸಂಜೆ 6ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ಮತ್ತು ಮೇ 14ರ ಮಧ್ಯರಾತ್ರಿಯಿಂದ ಮೇ 15ರ ಮಧ್ಯರಾತ್ರಿವರೆಗೆ ಎಲ್ಲಾ ವಿಧದ ಮದ್ಯದ ಅಂಗಡಿಗಳನ್ನು ಮುಚ್ಚಲಾಗುವುದು. ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆಯನ್ನು ನಿಷೇಧಿಸಿ “ಒಣ ದಿನ” ಎಂದು ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.