Advertisement

ಸಮ್ಮೇಳನದಲ್ಲಿ ಜೇಬು ಕಳ್ಳರಿದ್ದಾರೆ ಎಚ್ಚರಿಕೆ!

07:44 AM Nov 24, 2017 | |

ಮೈಸೂರು: ಸಾಹಿತ್ಯ ಸಮ್ಮೇಳನಗಳಲ್ಲಿ ಕವಿಗಳು, ಸಾಹಿತಿಗಳು, ಸ್ವಯಂಸೇವಕರು, ವಿದ್ಯಾರ್ಥಿಗಳು, ಕನ್ನಡ ಹೋರಾಟಗಾರರು, ಪೊಲೀಸರು ಮಾತ್ರವಲ್ಲ, ಜೇಬುಗಳ್ಳರೂ(ಹೆಚ್ಚಿನ ಸಂಖ್ಯೆಯಲ್ಲಿಯೇ) ಇರುತ್ತಾರೆ!

Advertisement

ಇದು ಸ್ವಾರಸ್ಯವೂ ಹೌದು, ವಿಪರ್ಯಾಸವೂ ಹೌದು. ಈವರೆಗೆ ನಡೆದಿರುವ ಹತ್ತಕ್ಕೂ ಹೆಚ್ಚು ಸಾಹಿತ್ಯ ಸಮ್ಮೇಳನಗಳನ್ನು ಗಮನಿಸಿಯೇ ಹೇಳುವುದಾದರೆ, ಹೆಚ್ಚಿನ ಸಂದರ್ಭಗಳಲ್ಲಿ ಜೇಬುಗಳ್ಳರ ಕೈಚಳಕಕ್ಕೆ ಸಿಕ್ಕಿ ಸಮ್ಮೇಳನಕ್ಕೆ ಬಂದ ಜನರು ತತ್ತರಿಸಿಹೋಗಿದ್ದಾರೆ. ಈ ಮಾತಿಗೆ ಗಂಗಾವತಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂದರ್ಭವನ್ನೇ ನೆನಪಿಸಿಕೊಳ್ಳಬಹುದು.

10 ಸಾವಿರ ಕಳವು: ಸಮ್ಮೇಳನ ಮುಗಿದ ನಂತರ ಉತ್ತರ ಕರ್ನಾಟಕ ಸೀಮೆಯ ಪ್ರಮುಖ ಸ್ಥಳಗಳಿಗೆ ಟೂರ್‌ ಹೋಗಿ
ಬರುವ ಉದ್ದೇಶ ದಿಂದ ಹಿರಿಯ ಕವಿಯೊಬ್ಬರು 10 ಸಾವಿರ ರೂ.ಗಳನ್ನು ಜತೆಗಿಟ್ಟುಕೊಂಡೇ ಬಂದಿದ್ದರು. ಸಮ್ಮೇಳನ ಆರಂಭದ 
ದಿನವೇ ಮುಖ್ಯವೇದಿಕೆಯಲ್ಲೇ ಅವರ ಜೇಬಿಗೆ ಕತ್ತರಿ ಬಿದ್ದಿತ್ತು. ಪೂರ್ತಿ 10 ಸಾವಿರ ರೂ. ಕಳೆದುಕೊಂಡ ಸಂಕಟ ಮತ್ತು ನಾಳೆಯಿಂದ ಖರ್ಚಿಗೂ ಕಾಸಿಲ್ಲ ಎಂಬ ನೋವಿನಿಂದ ಆ ಕವಿಗಳು ತತ್ತರಿಸಿ ಹೋಗಿದ್ದರು.

ನಂತರದ ಕೆಲವೇ ಸಮಯದಲ್ಲಿ ಇದೆಲ್ಲ ಟೀವಿಗಳಲ್ಲಿ ಪ್ರಸಾರವಾಗಿತ್ತು. ಪೊಲೀಸರು ಅಲರ್ಟ್‌ ಆಗಿದ್ದರು ನಿಜ. ಆದರೂ, ಜೇಬುಗಳ್ಳರು ಸುಮ್ಮನಾಗಲಿಲ್ಲ. ಅದೇ ದಿನ ಮಧ್ಯಾಹ್ನ ಸಾರ್ವಜನಿಕರಿಗೆ ಊಟ ವಿತರಿಸುವ ಜಾಗದಲ್ಲೂ ತಮ್ಮ ಕರಾಮತ್ತು ತೋರಿಸಿದರು. ಅನ್ನಹಾಕಿಸಿಕೊಳ್ಳಲು ತಟ್ಟೆ ಹಿಡಿದಿದ್ದವರು ಇದ್ದಕ್ಕಿದ್ದಂತೆ-ಅಯ್ಯೋ ನನ್ನ ಜೇಬಿಗೆ ಕತ್ತರಿ ಬಿದ್ದಿದೆ ಎಂದು ಚೀರಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಶ್ರವಣಬೆಳಗೊಳದಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗಲೂ ಪರಿಸ್ಥಿತಿ ಬದಲಾಗಲಿಲ್ಲ. ಸಮ್ಮೇಳನದ ಮೆರವಣಿಗೆಯನ್ನು ಕೋಲಾಟ, ಡೊಳ್ಳುಕುಣಿತದ ಸೊಬಗನ್ನು ಕಣ್‌ ತುಂಬಿಸಿಕೊಳ್ಳಲು ಬಂದಿದ್ದವರ ಜೇಬಿಗೆ ಕನ್ನ
ಹಾಕಿದ್ದರು. ಸಮ್ಮೇಳನಗಳಲ್ಲಿ ಹೆಚ್ಚಿನ ರಿಯಾಯ್ತಿ ಇರುತ್ತದೆ. ಸಾಕಷ್ಟು ಪುಸ್ತಕ ಖರೀದಿಸಬಹುದು ಎಂದು ಜೇಬು ತುಂಬಿಸಿಕೊಂಡು ಬಂದಿದ್ದವರು ಕಿಸೆಗಳ್ಳತನದಿಂದ ಕಂಗಾಲಾಗಿದ್ದರು.

ಈಗ, ಮೈಸೂರಿನಲ್ಲಿ ಸಮ್ಮೇಳನ ನಡೆಯುತ್ತಿದೆ. ಹಿಂದಿನ ಸಮ್ಮೇಳನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಪಾಲ್ಗೊಳ್ಳುತ್ತಿದ್ದಾರೆ. ಅವರ ಮೇಲೆ ಕಿಸೆಗಳ್ಳರ ಪ್ರಹಾರ ನಡೆಯದಂತೆ ನೋಡಿಕೊಳ್ಳುವ ಹೊಣೆ ಮೈಸೂರಿನ ಪೊಲೀಸರ ಮೇಲಿದೆ. ಹಾಗೆಯೇ ಸಾಹಿತ್ಯ ಪ್ರೇಮಿ, ನುಡಿ ಉತ್ಸವದ ಗದ್ದಲದಲ್ಲಿ ಮೈ ಮರೆಯದೇ ಇರಬೇಕಾದ ಅಗತ್ಯವೂ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next