Advertisement

ಬಂಡೆಗಳ ಮೇಲೆ ನಿಂತು  ಸೆಲ್ಫಿ  ಸೇಫ್‌ ಅಲ್ಲ , ಇರಲಿ ಎಚ್ಚರ 

06:00 AM Jun 19, 2018 | Team Udayavani |

ಉಪ್ಪುಂದ: ಈಗ ಏನಿದ್ದರೂ ಸೆಲ್ಫಿ ಕ್ರೇಜ್‌ ಜಾಯಮಾನ. ಸೆಲ್ಫಿ ತೆಗೆಯುವ ಹುಚ್ಚಾಟದಲ್ಲಿ ಪ್ರಾಣವೇ ಹೋಗಿರುವ ಸುದ್ದಿಗಳನ್ನು ಓದಿದ್ದರೂ ಅದನ್ನು ಅಲ್ಲಿಗೆ ಮರೆತು ಮತ್ತೆ ಸೆಲ್ಫಿ ಸಾಹಸಕ್ಕೆ ಮುಂದಾಗುತ್ತೇವೆ. ಮರವಂತೆ-ತ್ರಾಸಿ ಬೀಚ್‌ನಲ್ಲೂ ಇಂತಹ ಅಪಾಯಕಾರಿ ಸೆಲ್ಫಿ ತೆಗೆಯುತ್ತಿರುವುದು ಕಂಡುಬರುತ್ತಿದೆ.  

Advertisement

ರಾ. ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಮರವಂತೆ ಕಡಲಿನಲ್ಲಿ ನಿಂತು ಸೌಂದರ್ಯದಿಂದ ಕಂಗೊಳಿಸುವ ಸಮುದ್ರದ‌ ನರ್ತನವನ್ನು ಆನಂದಿಸಿ ಮುಂದೆ ಸಾಗುವ ಮಜಾನೇ ಬೇರೆ. ಆದರೆ ಮೋಜಿನಾಟದ ಉತ್ಸಾಹದಲ್ಲಿ ನೀರಿಗಿಳಿದರೆ ಅಪಾಯ ಮೈ ಮೇಲೆ ಎಳೆದುಕೊಂಡಂತೆ.

ಪರಶುರಾಮ ಸೃಷ್ಟಿಯ ಕರಾವಳಿಗೆ ವಿಶ್ವವಿಖ್ಯಾತ ಮರವಂತೆ-ತ್ರಾಸಿ ಬೀಚ್‌ ಪ್ರಕೃತಿಯ ವಿಶಿಷ್ಟ ಕೊಡುಗೆ ಎಂದೇ ಬಿಂಬಿತವಾಗಿದೆ. ಶಾಂತವಾಗಿ ಹರಿಯುವ ನದಿ, ಭೋರ್ಗರೆಯುವ ಕಡಲು ನಡುವೆ ರಾ.ಹೆದ್ದಾರಿ. ಈ ರಮಣೀಯ ಸೌಂದರ್ಯ ಪ್ರಯಾಣಿಕರ ಮನಸ್ಸು ಮುದಗೊಳಿಸುವಂತಿದೆ. ದಿನನಿತ್ಯ ನೂರಾರು ಪ್ರವಾಸಿಗರು ಈ ಸೌಂದರ್ಯವನ್ನು ಸವಿದು ಮುನ್ನಡೆಯುತ್ತಿದ್ದರೆ, ವಾರಾಂತ್ಯ ಮತ್ತು ರಜಾದಿನಗಳಲ್ಲಿ ಒಂದಿಷ್ಟು ಸಮಯ ಕಳೆಯಲು ಇಲ್ಲಿ ಪ್ರವಾಸಿಗರ ದಂಡು ತುಂಬಿರುತ್ತದೆ.

ಯಾರಿಗೇ ಆಗಲಿ  ನೀರನ್ನು ನೋಡಿದರೆ ಇಳಿಯಬೇಕು ಎನ್ನಿಸದೇ ಇರದು. ಮಳೆಗಾಲದಲ್ಲಿ ಕಡಲಬ್ಬರ ಹೆಚ್ಚಿರುವುದರಿಂದ ನೀರಿಗಿಳಿದರೆ ಬಲು ಅಪಾಯಕಾರಿ. ಅಲ್ಲದೇ ಬೀಚ್‌ನಲ್ಲಿ ಪೈಲೆಟ್‌ ಯೋಜನೆಯ ಕಾಮಗಾರಿಗಾಗಿ ದಡದ ಉದ್ದಕ್ಕೂ ಕಲ್ಲುಗಳನ್ನು ಹಾಕಲಾಗಿದೆ. ಇದರಿಂದ ಮರಳಿನ ದಡದ ವಿಸ್ತಾರ ಕಡಿಮೆಯಾಗಿದ್ದು, ದೊಡ್ಡ ಗಾತ್ರದ ಅಲೆಗಳು ಒಮ್ಮೆಲೇ ಅಪ್ಪಳಿಸುತ್ತವೆ. ಸಮುದ್ರಕ್ಕಿಳಿದರೆ ನೀರು ಕುಡಿಸದೆ ಇರುವುದಿಲ್ಲ.

ಎಚ್ಚರಿಕೆ ಫಲಕ ಇಲ್ಲ
ಈ ಮೊದಲು ಬೀಚ್‌ನ ಉದ್ಧಕ್ಕೂ ಗೂಡಂಗಡಿಗಳು ಇದ್ದವು ಪ್ರವಾಸಿಗರಿಗೆ ಅಂಗಡಿಯವರು ಸಮುದ್ರದ ಅಪಾಯದ ಕುರಿತು ಎಚ್ಚರಿಕೆ ರವಾನಿಸುತ್ತಿದ್ದರು. ಈಗ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಪ್ರವಾಸಿಗರಿಗೆ ಅಪಾಯದ ಅರಿವು ಇಲ್ಲದ ಕಾರಣ ನೀರಿಗಿಳಿಯುವುದು ಸಹಜ. ಮರವಂತೆ ದೇವಸ್ಥಾನದ ಎದುರಿನ ಬೀಚ್‌ನಲ್ಲಿ ಒಂದು ಎಚ್ಚರಿಕೆಯ ನಾಮಫಲಕ ಇರುವುದು ಬಿಟ್ಟು ಮತ್ತೆ ಬೀಚ್‌ನ ಉದ್ಧಕ್ಕೂ ಎಚ್ಚರಿಸುವ ಸೂಚನಾ  ಫಲಕ ಅಳವಡಿಸಿದ ಕಾರಣ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿದೆ.

Advertisement

ಪ್ರಾಣಕ್ಕೆ ಕುತ್ತು 
ವರಹ ಮಹಾ ಸ್ವಾಮೀ ದೇವಸ್ಥಾನದ ಬಳಿಯ ಸಮುದ್ರಕ್ಕೆ ಪೈಲೆಟ್‌ ಯೋಜನೆಗೆ ಜೋಡಿಸಿರುವ (ಅಪೂರ್ಣವಾಗಿರುವ) ಶಿಲೆ ಕಲ್ಲುಗಳ ಮೇಲೆ ಪ್ರವಾಸಿಗರು ನಿಂತು ಸೆಲ್ಫಿ ತೆಗೆಯುತ್ತಿರುವುದು ಕಂಡುಬಂದಿದೆ. ಅಲೆಗಳು ಬಂಡೆಕಲ್ಲುಗಳಿಗೆ ಬಂದು  ಹೊಡೆಯುವುದರಿಂದ ನೀರು ಕಾರಂಜಿಯಂತೆ ಚಿಮ್ಮುವ ಕಾರಣ ಇಲ್ಲಿ ಪ್ರವಾಸಿಗರು ಮೈ ಮರೆತು ಸೆಲ್ಫಿಗಾಗಿ ಸಾಹಸ ಮಾಡುತ್ತಾರೆ. ಕಾಲು ಜಾರಿ ಕಲ್ಲುಗಳ ನಡುವೆ ಅಥವಾ ನೀರಿಗೆ ಬಿದ್ದರೆ ಪ್ರಾಣಕ್ಕೆ ಕುತ್ತು ಬರುತ್ತದೆ.

ಸೆಲ್ಫಿ ಕ್ರೇಜ್‌  ಪ್ರಾಣ ಸಂಕಟ
ತ್ರಾಸಿ-ಮರವಂತೆ ಕಡಲ ತೀರವು ನೀರಿಗಿಳಿದು ಆಟವಾಡಲು, ಈಜಲು ಸೇಫ್‌ ಅಲ್ಲ. ನಿಸರ್ಗದ ಸೊಬಗನ್ನು ಸವಿಯಲು,  ಒಂದಿಷ್ಟು ಸಮಯವನ್ನು ಆನಂದಿಸುವ ಸಲುವಾಗಿ ಮಾತ್ರ ಕಳೆಯಬೇಕು ಇಲ್ಲದಿದಲ್ಲಿ ಆಪಾಯವನ್ನು ಆಹ್ವಾನಿಸಿಕೊಂಡಂತೆ.  ಮರವಂತೆ-ತ್ರಾಸಿ ಬೀಚ್‌ನಲ್ಲಿ ಶೀಘ್ರವಾಗಿ ಸೂಚನಾ ಫಲಕ ಅಳವಡಿಸಲು ತಿಳಿಸುತ್ತೇನೆ.
– ಟಿ. ಭೂಬಾಲನ್‌, ಕುಂದಾಪುರ 
ಉಪ ಆಯುಕ್ತ 

Advertisement

Udayavani is now on Telegram. Click here to join our channel and stay updated with the latest news.

Next