ಮಡಿಕೇರಿ: ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಬಿಟ್ಟು ಹೋಗದಂತೆ ಎಚ್ಚರ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತದಾರರ ಪಟ್ಟಿಯ ಪರಿಷ್ಕರಣೆಯ ಜಿಲ್ಲಾ ನೋಡಲ್ ವೀಕ್ಷಕರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಅಪರ ಮುಖ್ಯ ಕಾರ್ಯದರ್ಶಿ ಜಾವಿದ್ ಅಖ್ತರ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಎರಡನೇ ಹಂತದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದಿರುವುದು ಹಾಗೂ ಹೆಸರು ಸೇರ್ಪಡೆಗೊಂಡಿರುವ ಬಗ್ಗೆ ಪರಿಶೀಲಿಸಿ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶ ನೀಡಿದರು. ಗಣ್ಯ ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದರ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಹಾಗೂ ಮತದಾರರ ಗುರುತಿನ ಚೀಟಿಯಲ್ಲಿ ಮತದಾರರ ಭಾವ ಚಿತ್ರವು ವ್ಯತ್ಯಾಸಗೊಂಡಿದ್ದಲ್ಲಿ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರ್ಹ ಅನಿವಾಸಿ ಭಾರತೀಯರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಅಧಿಕಾರಿಗಳಿಂದ ಜಿಲ್ಲಾ ನೋಡಲ್ ವೀಕ್ಷಕರು ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಅಪರ ಜಿಲ್ಲಾಧಿಕಾರಿ ಡಾ| ಸ್ನೇಹಾ ಅವರು ತಿಳಿಸಿದರು. ಉಪ ವಿಭಾಗಾಧಿಕಾರಿ ಟಿ.ಜವರೆಗೌಡ ಮಾಹಿತಿ ನೀಡಿದರು.
ಕಾಂಗ್ರೆಸ್ ಪಕ್ಷದ ತೆನ್ನೀರ ಮೈನ, ಭಾರತೀಯ ಜನತಾ ಪಕ್ಷದ ಸಜೀಲ್ ಕೃಷ್ಣ, ಜಾತ್ಯತೀತ ಜನತಾ ದಳದ ಅಜಿತ್, ಚುನಾವಣಾ ತಹಶೀಲ್ದಾರ್ ಕುಸುಮಾ, ಶಿರಸ್ತೆದಾರದ ಪ್ರಕಾಶ್, ಪ್ರವೀಣ್ ಕುಮಾರ್, ಅನಿಲ್ ಕುಮಾರ್, ಇತರರು ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.