Advertisement
ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಸೋಮವಾರ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈಗಾಗಲೇ ಧಾರಾಕಾರ ಮಳೆ ಸುರಿಯಲಾರಂಭಿಸಿದೆ. ಭಾರಿ ಮಳೆ, ಗಾಳಿಯಿಂದಾಗಿ ಅನಾಹುತ ಉಂಟಾಗದಂತೆ ಜನರಲ್ಲಿ ವಿಶ್ವಾಸ ಮೂಡಿಸಬೇಕಾದ ಅಗತ್ಯವಿದೆ. ಮಳೆ ಸುರಿದಾಗ ಪ್ರಾಣ ಹಾನಿ, ಆಸ್ತಿಪಾಸ್ತಿಗೆ ನಷ್ಟವಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
Related Articles
Advertisement
30 ಕಡೆ ಪರಿಹಾರ ಕ್ರಮ ಬಾಕಿ: ಸಭೆ ಬಳಿಕ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಮಹೇಶ್ವರ ರಾವ್, ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಅದರಂತೆ ತ್ವರಿತವಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.
ನಗರದಲ್ಲಿ ಪ್ರವಾಹ, ಅವಘಡ ಸಂಭವಿಸಬಹುದಾದ 369 ಸ್ಥಳಗಳನ್ನು ಗುರುತಿಸಲಾಗಿತ್ತು. ಈ ಪೈಕಿ 339 ಕಡೆ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಬಾಕಿಯಿರುವ 30 ಸ್ಥಳಗಳಲ್ಲಿ ಶೀಘ್ರವಾಗಿ ಅಪಾಯ ತಡೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಮಳೆ ಸುರಿದಾಗ ಚರಂಡಿ, ಕಾಲುವೆಗಳಲ್ಲಿ ಪ್ರವಾಹ ಉಂಟಾಗದಂತೆ, ಸಂಚಾರ ದಟ್ಟಣೆ ಉಂಟಾಗಿ ಜನ ತೊಂದರೆ ಅನುಭವಿಸದಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರ ಆರೋಗ್ಯ ಕಾಪಾಡುವ ಜತೆಗೆ ಕಾಲುವೆ ಒತ್ತುವರಿ ತೆರವುಗೊಳಿಸುವಂತೆಯೂ ಮುಖ್ಯಮಂತ್ರಿಗಳು ಸೂಚಿಸಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
5 ಸಾವಿರಕ್ಕೂ ಹೆಚ್ಚು ಗುಂಡಿ ಪತ್ತೆ: ನಗರದಲ್ಲಿ ಈವರೆಗೆ 5,800 ರಸ್ತೆ ಗುಂಡಿ ಪತ್ತೆಯಾಗಿದ್ದು, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಸ್ತೆ ಗುಂಡಿಗಳನ್ನು ಸಮರೋಪಾದಿಯಲ್ಲಿ ಮುಚ್ಚಲು ಕ್ರಮ ಕೈಗೊಳ್ಳಲಾಗಿದೆ. ಸುಮಾರು 600 ಕಿ.ಮೀ. ಉದ್ದದ ರಸ್ತೆಗೆ ಸಂಬಂಧಪಟ್ಟಂತೆ ಗುತ್ತಿಗೆದಾರರ ನಿರ್ವಹಣಾ ಅವಧಿ ಬಾಕಿಯಿದ್ದು, ಆ ರಸ್ತೆಗಳಲ್ಲಿನ ಗುಂಡಿಗಳನ್ನು ಗುತ್ತಿಗೆದಾರರೇ ಮುಚ್ಚಲಿದ್ದಾರೆ. ಪಾಲಿಕೆ ಅದಕ್ಕೆ ಹಣ ವೆಚ್ಚ ಮಾಡುವುದಿಲ್ಲ ಎಂದು ಹೇಳಿದರು.
ಪರಹಾರ ಕಾರ್ಯಕ್ಕೆ ತಂಡಗಳು ಸಜ್ಜು: ಜೂ.6, 7ರಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಮಾಹಿತಿ ಇದೆ. ಅದರಂತೆ ನಗರದಾದ್ಯಂತ 63 ನಿಯಂತ್ರಣ ಕೊಠಡಿಗಳಿದ್ದು, ಇವು ನಿರಂತರವಾಗಿ ಹವಾಮಾನ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಘಟಕದ ಸಂಪರ್ಕದಲ್ಲಿರಲಿವೆ. ಯಾವುದೇ ಪರಿಸ್ಥಿತಿ ಎದುರಿಸಲು ಪರಿಹಾರ ತಂಡಗಳು ಸನ್ನದ್ಧ ಸ್ಥಿತಿಯಲ್ಲಿರಲಿವೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಹಾಗೂ ತುರ್ತು ಪರಿಹಾರ ತಂಡಗಳು ಕೂಡ ಸೇವೆಗೆ ಲಭ್ಯವಿರಲಿವೆ ಎಂದು ತಿಳಿಸಿದರು. ಮಳೆಗಾಲದ ಅನಾಹುತ ತಡೆ, ಪರಿಹಾರ ಕಾರ್ಯಕ್ಕೆ ಅನುದಾನ ಅಗತ್ಯವಿದ್ದರೆ ಈ ಸಂಬಂಧ ಪ್ರಸ್ತಾವ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಹೇಳಿದರು.