Advertisement

ಲೋಕಸಭೆ ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ

11:23 AM Mar 22, 2019 | Team Udayavani |

ಮುದಗಲ್ಲ: ಸಮೀಪದ ತಲೇಖಾನ್‌ ಗ್ರಾಪಂ ವ್ಯಾಪ್ತಿಯ ವಿವಿಧ ತಾಂಡಾ, ದೊಡ್ಡಿಗಳಲ್ಲಿ ಕುಡಿಯುವ ನೀರು, ರಸ್ತೆ, ಸಾರಿಗೆ, ಅಂಗನವಾಡಿ, ಆರೋಗ್ಯ ಕೇಂದ್ರ, ಉದ್ಯೋಗ ಸೇರಿ ಕನಿಷ್ಠ ಸೌಲಭ್ಯ ಸಿಗದ್ದಕ್ಕೆ 2019ರ ಲೋಕಸಭೆ ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರು ನಿರ್ಧರಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Advertisement

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಒಳಪಡುವ ತಲೇಖಾನ್‌ ಗ್ರಾಪಂ ವ್ಯಾಪ್ತಿಯ ರಾಮಪ್ಪನ ತಾಂಡಾ, ವೇಣ್ಯಪ್ಪನ ತಾಂಡಾ, ಮೀಸೆ ಖೀರೆಪ್ಪನ ತಾಂಡಾ, ಲಿಂಬೆಪ್ಪನ ತಾಂಡಾ, ಸೋಂಪುರು ತಾಂಡಾ ಹಾಗೂ ಸೋಂಪುರ ಗೊಲ್ಲರಹಟ್ಟಿ ಸೇರಿ ವಿವಿಧ ತಾಂಡಾ, ದೊಡ್ಡಿ ನಿವಾಸಿಗಳು ಮೂಲ ಸೌಕರ್ಯಗಳಿಲ್ಲದೇ ಪರದಾಡುವಂತಾಗಿದೆ. 

ಗೊಲ್ಲರಹಟ್ಟಿ: ಸುಮಾರು 30 ಕುಟುಂಬಗಳು ವಾಸಿಸುವ ಗೊಲ್ಲರಹಟ್ಟಿಯಲ್ಲಿ 2012-13ರಲ್ಲಿ ಕಿರು ನೀರು ಸರಬರಾಜು ಯೋಜನೆ ಜಾರಿಗೆ ತರಲಾಗಿದೆ. ಬೋರ್‌ನಲ್ಲಿ ಅಂತರ್ಜಲ ಕುಸಿದಿದ್ದರಿಂದ ನೀರಿನ ಸಮಸ್ಯೆ ಎದುರಾಗಿದೆ. ಕಳೆದ ಎರಡು ವರ್ಷಗಳಿಂದ ನೀರಿಗಾಗಿ ಹಲವು ಬಾರಿ ಅಂಗಲಾಚಿದರೂ ಯಾವುದೇ ಪ್ರಯೋಜನವಾಗಿಲ್ಲ. ಕುಡಿಯುವ ನೀರಿಗೆ ಕಿಲೋ ಮೀಟರ್‌ ಅಲೆದು ತರಬೇಕಿದೆ ಎನ್ನುತ್ತಾರೆ ಗ್ರಾಪಂ ಮಾಜಿ ಸದಸ್ಯ ಹನುಮಂತ ಗೊಲ್ಲರ.

ಸರಿಯಾದ ರಸ್ತೆ ಇಲ್ಲದ್ದರಿಂದ ಯಾವುದೇ ವಾಹನ ಇಲ್ಲಿಗೆ ಬರುವುದಿಲ್ಲ. ರಾತ್ರಿ ಯಾರಾದರೂ ಅನಾರೋಗ್ಯಕ್ಕೀಡಾದರೆ
ಆ್ಯಂಬುಲನ್ಸ್‌, ಖಾಸಗಿ ವಾಹನಗಳೂ ಬರುವುದಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಗೊಲ್ಲರಹಟ್ಟಿಯ ಯಂಕಪ್ಪ, ಮೌನೇಶ, ಪರಸಪ್ಪ. 

ನೀರಿನ ಸಮಸ್ಯೆ: ತಾಂಡಾಗಳಲ್ಲಿ ನೀರಿಗಾಗಿ ಲಕ್ಷಾಂತರ ರೂ. ವ್ಯಯಿಸಿದರೂ ಜನರಿಗೆ ಹನಿ ನೀರು ಸಿಕ್ಕಿಲ್ಲ. ಲಿಂಬೆಪ್ಪನ ತಾಂಡಾ, ರೂಪಚಂದ್ರಪ್ಪನ ತೋಟ, ಮೀಸೆ ಖೀರೆಪ್ಪನ ತಾಂಡಾ ಹಾಗೂ ರಾಮಪ್ಪನ ತಾಂಡಾಗಳಿಗೆ ನೀರು ಒದಗಿಸುವ ಯೋಜನೆ ರೂಪಿಸಿ ರಾಮಪ್ಪನ ತಾಂಡಾ ಹೊರವಲಯದಲ್ಲಿ ನೀರು ಸಂಗ್ರಹ ತೊಟ್ಟಿ ನಿರ್ಮಿಸಲಾಗಿದೆ. ಮೂರು ವರ್ಷವಾದರೂ ಯೋಜನೆ ಪೂರ್ಣಗೊಂಡಿಲ್ಲ. 20 ಮನೆಗಳಿರುವ ರೂಪಚಂದ್ರಪ್ಪನ ತೋಟಕ್ಕೆ ಇಲಾಖೆ ಅಧಿಕಾರಿಗಳೇ ಕಿರು ನೀರು ಸರಬರಾಜು ಯೋಜನೆಯಡಿ ಮೀಸೆ ಖೀರೆಪ್ಪನ ತಾಂಡಾದಿಂದ ಪೈಪಲೈನ್‌ ಮಾಡಿಸಿ ಗುಮ್ಮಿ ಅಳವಡಿಸಿದ್ದಾರೆ. ಆದರೆ ಅದಕ್ಕೆ ಹನಿ ನೀರು ಸರಬರಾಜಾಗಿಲ್ಲ. ನೀರಿನ ಬವಣೆ ತಪ್ಪಿಲ್ಲ ಎನ್ನುತ್ತಾರೆ. ರಾಮಪ್ಪನ ತಾಂಡಾದ ಕಾಮಣ್ಣ ನಾಯ್ಕ, ಶೇಟಪ್ಪ ನಾಯ್ಕ, ಮಾನಪ್ಪ, ರಾಜು.

Advertisement

 ರಸ್ತೆ ಕಾಮಗಾರಿ ನನೆಗುದಿಗೆ: ರಾಮಜಿ ನಾಯ್ಕ ತಾಂಡಾ-ಹಡಗಲಿ ರಸ್ತೆಯನ್ನು ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಅಭಿವೃದ್ಧಿ ಮಾಡಲಾಗುತ್ತಿದೆ. ರಸ್ತೆ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು ಮರಂ ಹಾಕಿ ಎರಡು ವರ್ಷವಾದರೂ ಇತ್ತಕಡೆ ಬಂದಿಲ್ಲ. ರಸ್ತೆ ಕಾಮಗಾರಿಯಿಂದಾಗಿ ಒಡೆದ ನೀರು ಪೂರೈಕೆ ಪೈಪ್‌ಗ್ಳನ್ನು ನೀರಗಂಟಿಗಳು ಜೆಸಿಬಿ ಮೂಲಕ ರಸ್ತೆ ಅಗೆದು ಪೈಪ್‌ಗ್ಳನ್ನು ದುರಸ್ತಿಗೊಳಿಸಿ ನೀರು ಪೂರೈಸುತ್ತಿದ್ದಾರೆ. ಆದರೆ ಪೈಪ್‌ಲೈನ್‌ ಸೋರಿಕೆಯಿಂದಾಗಿ ಸರಿಯಾಗಿ ನೀರು ತಲುಪುತ್ತಿಲ್ಲ. ಇದೇ ರಸ್ತೆಯಲ್ಲಿ ಬರುವ ಎರಡು ಹಳ್ಳಗಳಿಗೆ ಆಡ್‌ಪಾತ್‌
(ಸೇತುವೆ ನಿರ್ಮಿಸ) ನಿರ್ಮಿಸಬೇಕು. ಹಡಗಲಿಯಲ್ಲಿ ಮನೆಗಳನ್ನು ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಬೇಕು ಎಂಬ ಬೇಡಿಕೆ ಈಡೇರಿಲ್ಲ.

ಅಂಗನವಾಡಿ ಇಲ್ಲ: ಮೀಸೆ ಖೀರೆಪ್ಪನ ತಾಂಡಾದಲ್ಲಿ ಅಂಗನವಾಡಿ ಕೇಂದ್ರ ತೆರೆಯುವಂತೆ ಇಲಾಖೆಗೆ, ಚುನಾಯಿತ ಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಗಮನ ಹರಿಸಿಲ್ಲ. ಇಲ್ಲಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ಇಲ್ಲದೇ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಹಾಳಾದ ರಸ್ತೆ: ಹಡಗಲಿ-ವೇಣ್ಯಪ್ಪನ ತಾಂಡಾ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ಮಾಡಿ ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ, ಗ್ರಾಪಂದಲ್ಲಿ ತಾಂಡಾದ ಜನರು ಯಾವುದೇ ಯೋಜನೆ ಲಾಭ ಪಡೆಯಲು ಆಗುತ್ತಿಲ್ಲ. ಗ್ರಾಪಂ ಸಿಬ್ಬಂದಿ ಜಾತಿ ಆಧಾರದ ಮೇರೆ ಕೆಲಸ ಮಾಡುತ್ತಾರೆ ಎಂದು ತಾಂಡಾ ನಿವಾಸಿಗಳು ದೂರಿದ್ದಾರೆ. 

ಚುನಾವಣೆ ಬಂದಾಗ ನೆನಪಾಗುವ ತಾಂಡಾ-ದೊಡ್ಡಿಗಳು, ಗೊಲ್ಲರಹಟ್ಟಿಗಳು ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವಾಗ ನೆನಪಾಗುವುದಿಲ್ಲ, ಮತಯಾಚಿಸಲು ಮನೆ ಬಾಗಿಲಿಗೆ ಕೈ ಮುಗಿದು ಬರುವ ರಾಜಕಾರಣಿಗಳು ಗೆದ್ದ ನಂತರ ನಾವು ಅವರ ಮನೆ ಬಾಗಿಲಿಗೆ ಹೋದರೂ ಮಾತನಾಡಿಸುವುದಿಲ್ಲ. ಸಂಸದರಂತೂ ಈ ಭಾಗದ ಹಳ್ಳಿಗಳನ್ನೇ ನೋಡಿಲ್ಲ ಎನ್ನುತ್ತಾರೆ ಲಿಂಬೆಪ್ಪನ ತಾಂಡಾದ ಧರ್ಮಣ್ಣ ನಾಯ್ಕ. ಇಂತಹ ಹತ್ತು ಹಲವು ಸಮಸ್ಯೆಗಳಿಂದ ಬೇಸತ್ತ ನಿವಾಸಿಗಳು ಈ ಬಾರಿ ಲೋಕಸಭೆ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ.

„ದೇವಪ್ಪ ರಾಠೊಡ

Advertisement

Udayavani is now on Telegram. Click here to join our channel and stay updated with the latest news.

Next