Advertisement

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಎಚ್ಚರವಹಿಸಿ: ಕಳಸದ

11:03 AM Mar 01, 2019 | Team Udayavani |

ದಾವಣಗೆರೆ: ಬೇಸಿಗೆಯಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ಪ್ರಾದೇಶಿಕ ಆಯುಕ್ತ ಶಿವಯೋಗಿ ಸಿ.ಕಳಸದ ಪಾಲಿಕೆ ಆಯುಕ್ತರು ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಗುರುವಾರ, ಜಿಲ್ಲಾ ಪಂಚಾಯಿತಿ ಮುಖ್ಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿ ಕಾರಿಗಳ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬೇಸಿಗೆ ವೇಳೆ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಸಕಲ ಕ್ರಮ ಕೈಗೊಳ್ಳಬೇಕು ಎಂದರು. 

ಮಹಾನಗರಪಾಲಿಕೆ ಆಯುಕ್ತ ವೀರೇಂದ್ರ ಕುಂದಗೋಳ ಮಾತನಾಡಿ, ನಗರ ಪ್ರದೇಶಕ್ಕೆ ದಿನವೊಂದಕ್ಕೆ 58 ಎಂ.ಎಲ್‌.ಡಿ ನೀರಿನ ಅವಶ್ಯಕತೆ ಇದೆ. ಸದ್ಯ 60 ದಿನಗಳವರೆಗೆ ನೀರಿನ ಸಂಗ್ರಹವಿದೆ. ಜುಲೈ ತಿಂಗಳವರೆಗೂ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದಿಲ್ಲ. ನಗರದಲ್ಲಿ ಪೂರಕವಾಗಿ ಪ್ರಸ್ತುತ 827 ಬೋರ್‌ವೆಲ್‌ಗ‌ಳು ಇದ್ದು, ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗೃತಾ ಕ್ರಮ ವಹಿಸಲಾಗಿದೆ ಎಂದು ಸಭೆ ಗಮನಕ್ಕೆ ತಂದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ರಾಜು ಮಾತನಾಡಿ, ಹರಪನಹಳ್ಳಿ ಹೊರತುಪಡಿಸಿ ಜಿಲ್ಲೆಯ 37 ಹಳ್ಳಿಗಳಲ್ಲಿ ಕುಡಿಯುವ ನೀರಿನ ತೀವ್ರ ತೊಂದರೆ ಇದೆ. 39 ಟ್ಯಾಂಕರ್‌ಗಳ ಮುಖಾಂತರ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ 45 ಖಾಸಗಿ ಬೋರ್‌ವೆಲ್‌ ಗಳಿಂದಲೂ 33 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕುಡಿಯುವ ನೀರಿನ ಅನುದಾನ ಬಳಸಿಕೊಂಡು ಸಮಸ್ಯೆ ನಿವಾರಣೆಗೆ ಮುಂದಾಗಿ, ಹೆಚ್ಚುವರಿ ಹಣ ಬೇಕಾದರೆ ಪ್ರಸ್ತಾವನೆ ಸಲ್ಲಿಸಿ ಎಂದು ಪ್ರಾದೇಶಿಕ ಆಯುಕ್ತರು ಸೂಚಿಸಿದರಲ್ಲದೆ, ವಿಧಾನಸಭಾ ಕ್ಷೇತ್ರವಾರು, ಸಿಆರ್‌ಎಫ್‌ ಅನುದಾನವನ್ನು ಸೂಕ್ತ ರೀತಿ ಬಳಸಿ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ ಎಂದು ತಿಳಿಸಿದರು. 

Advertisement

ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ಮಾತನಾಡಿ, ಹಿಂಗಾರಿನಲ್ಲಿ ಶೇ.27ರಷ್ಟು ಮಳೆ ಕೊರತೆಯಾಗಿದೆ. ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕುಗಳು ಬರ ಪೀಡಿತವೆಂದು ಘೋಷಿಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆಗೆ ಶೇ.33ಕ್ಕಿಂತ ಹೆಚ್ಚಿಗೆ ಹಾನಿಯಾಗಿದೆ. 11.49 ಕೋಟಿ ರೂ. ಪರಿಹಾರ ಧನಕ್ಕಾಗಿ ಬೇಡಿಕೆ ಸಲ್ಲಿಸಿದೆ. ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಎಷ್ಟು ಪ್ರಗತಿ ಸಾ ಧಿಸಲಾಗಿದೆ ಎಂದು ಪ್ರಾದೇಶಿಕ ಆಯುಕ್ತರು ಕೇಳಿದಾಗ, ಈ ಯೋಜನೆಯಡಿ ಜಿಲ್ಲೆಯ 57 ಸಣ್ಣ ರೈತರನ್ನು ಅರ್ಹರೆಂದು ಗುರುತಿಸಲಾಗಿದೆ. 29 ಸಾವಿರ ಸಣ್ಣ ರೈತರಿಂದ ದಾಖಲೆ ಸಹಿತ ಅರ್ಜಿ ಪಡೆದಿದ್ದು, 13 ಸಾವಿರ ಅರ್ಜಿಗಳನ್ನು ಅಪ್‌ಲೋಡ್‌ ಮಾಡಿ ಗ್ರಾಮ ಲೆಕ್ಕಿಗರ ದೃಢೀಕರಣಕ್ಕೆ ಕಳುಹಿಸಲಾಗಿದೆ ಎಂದು ಶರಣಪ್ಪ ಮುದಗಲ್‌ ಮಾಹಿತಿ ನೀಡಿದರು.

ಇನ್ನುಳಿದ ರೈತರಿಂದ ಆದಷ್ಟು ಬೇಗ ಅರ್ಜಿ ಪಡೆದು ಅಪ್‌ಲೋಡ್‌ ಮಾಡಬೇಕು. ಕೃಷಿ ಮತ್ತು ಕಂದಾಯ ಇಲಾಖೆಯವರ ಸಹಕಾರದಿಂದ ತುರ್ತಾಗಿ ಈ ಯೋಜನೆ ಸಾಕಾರಗೊಳ್ಳಬೇಕು. ಪಿಡಿಒ ಮೂಲಕವೂ ಈ ಯೋಜನೆ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿ, ಅರ್ಜಿ ಸಂಗ್ರಹಿಸಿ ಎಂದು ಶಿವಯೋಗಿ ಕಳಸದ ಸೂಚಿಸಿದರು. 

ರೈತರ ಆತ್ಮಹತ್ಯೆ ಪ್ರಕರಣ ಕುರಿತು ಮಾಹಿತಿ ಕೇಳಿದಾಗ, ಕೃಷಿ ಜಂಟಿ ನಿರ್ದೇಶಕರು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 43 ರೈತ ಆತ್ಮಹತ್ಯೆ ಪ್ರಕರಣದಲ್ಲಿ 41 ಪ್ರಕರಣಗಳಿಗೆ ಪರಿಹಾರ ನೀಡಲಾಗಿದೆ. ತಾಂತ್ರಿಕ ಕಾರಣಗಳಿಗಾಗಿ 2 ಪ್ರಕರಣ ಬಾಕಿ ಇದ್ದು, 14 ಪ್ರಕರಣಗಳು ತಿರಸ್ಕಾರಗೊಂಡಿವೆ ಎಂದರು. ಆಗ, ಪ್ರಾದೇಶಿಕ ಆಯುಕ್ತರು, ತಿರಸ್ಕೃತಗೊಂಡ ಪ್ರಕರಣಗಳ ಕುಟುಂಬಗಳಿಗೆ ಇತರೆ ಯೋಜನೆಗಳಡಿ ಸೌಲಭ್ಯ ಒದಗಿಸಿಕೊಡಬೇಕು. ಆತ್ಮಹತ್ಯೆಗೊಳಗಾದ ರೈತರ ಕುಟುಂಬದವರಿಗೆ ಮಾನಸಿಕ ಸ್ಥೈರ್ಯ ತುಂಬಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಾಂತ್ವನ ಮತ್ತು ಎನ್‌ಜಿಒ ಗಳು ಆಪ್ತಸಮಾಲೋಚನೆ ನಡೆಸಿ ಎಂದು ಸಲಹೆ ನೀಡಿದಲ್ಲದೆ, ಕೃಷಿ ಇಲಾಖೆ ಕೂಡ ಪರಿಹಾರ ನೀಡಿ ಸುಮ್ಮನಾಗದೇ ಸಂತ್ರಸ್ತ ಕುಂಟುಂಬಕ್ಕೆ 2 ಸಾವಿರ ರೂ. ಜೀವಾವಧಿ ಪಿಂಚಣಿ, ಮಕ್ಕಳಿಗೆ ಉಚಿತ ಶಿಕ್ಷಣ, ಹಾಸ್ಟೆಲ್‌, ವಸತಿ ಸೇರಿದಂತೆ ಸಾಮಾಜಿಕ, ಮಾನಸಿಕ ಮತ್ತು ಆರ್ಥಿಕವಾಗಿ ನೆರವು ನೀಡಬೇಕೆಂದರು.

ಸಹಕಾರ ಇಲಾಖೆ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 64,219 ಸಾಲ ಪಡೆದವರಲ್ಲಿ 62,159 ಮಂದಿ ಸಾಲ ಮನ್ನಾ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ. ಇದುವರೆಗೆ 14,538 ಜನರಿಗೆ ಒಟ್ಟು 55 ಕೋಟಿ ಸಾಲ ಮನ್ನಾ ಹಣ ಜಮೆಯಾಗಿದೆ ಎಂದು ತಿಳಿಸಿದರು. 

ಲೀಡ್‌ ಬ್ಯಾಂಕ್‌ ವಿಭಾಗೀಯ ಪ್ರಬಂಧಕ ಎನ್‌.ಟಿ.ಎರ್ರಿಸ್ವಾಮಿ ಮಾತನಾಡಿ, ರಾಷ್ಟ್ರೀಕೃತ ಸೇರಿದಂತೆ ಇತರೆ ಬ್ಯಾಂಕ್‌ಗಳಲ್ಲಿನ 68,650 ರೈತರು ಸಾಲ ಮನ್ನಾ ಯೋಜನೆಯಡಿ ಅರ್ಹರಿದ್ದು, 68,367 ದಾಖಲೆ ಅಪ್‌ಲೋಡ್‌ ಆಗಿದೆ. ಜಿಲ್ಲೆಯು ಸಾಲ ಮನ್ನಾ ಯೋಜನೆಯಡಿ ಪ್ರಯೋಜನ ಪಡೆದ 2ನೇ ಸ್ಥಾನದಲ್ಲಿದೆ. ಒಟ್ಟು 28,480 ಜನರಿಗೆ 105.62 ಕೋಟಿ ಸಾಲ ಮೊತ್ತ ಜಮಾ ಆಗಿದೆ ಎಂದು ಮಾಹಿತಿ ನೀಡಿದರು. ಆಗ, ಪ್ರಾದೇಶಿಕ ಆಯುಕ್ತರು, ಲೀಡ್‌ ಬ್ಯಾಂಕ್‌, ಸಹಕಾರ ಮತ್ತು ಡಿಸಿಸಿ ಬ್ಯಾಂಕ್‌ಗಳು ಸಹಕಾರದೊಂದಿಗೆ ರೈತರಿಗೆ ಅನುಕೂಲ ಮಾಡಬೇಕು. ಸಾಲಗಾರರಿಗೆ ಯಾವುದೇ ರೀತಿಯ ಒತ್ತಡ, ನೋಟಿಸ್‌ ನೀಡಬಾರದು ಎಂದು ಹೇಳಿದರು.

ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿದ ನಂತರ ಹೆಚ್ಚುವರಿ ಸೇರಿ ನೀಡಿದ ಒಟ್ಟು 44 ಲಕ್ಷ ಮಾನವ ದಿನಗಳಲ್ಲಿ ಶೇ.99 ಪ್ರಗತಿ ಸಾಧಿ ಸಲಾಗಿದೆ. ಫೆ.2ನೇ ತಾರೀಕಿನವರೆಗೆ ಕೂಲಿ ಹಣ ಪಾವತಿಸಲಾಗಿದೆ. ಸಾಮಗ್ರಿ ಘಟಕದಲ್ಲಿ 65 ಕೋಟಿ ರೂ. ಬಾಕಿ ಇದೆ ಎಂದು ಸಭೆಗೆ ಅಧಿಕಾರಿ ತಿಳಿಸಿದಾಗ, ಆದಷ್ಟು ಬೇಗ ಬಾಕಿ ಕೂಲಿ ಹಣ ಪಾವತಿಸಲು ಕ್ರಮ ಜರುಗಿಸಬೇಕು ಎಂದು ಕಳಸದ ಹೇಳಿದರು.
 
ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಮಾತನಾಡಿ, ಈ ಬಾರಿ 10ನೇ ತರಗತಿ ಫಲಿತಾಂಶ ಹೆಚ್ಚಿಸಲು ಮಕ್ಕಳನ್ನು ತಯಾರು ಮಾಡಲಾಗಿದೆ. ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಗುಂಪು ಆಪ್ತಸಮಾಲೋಚನೆ ನಡೆಸಲಾಗಿದೆ ಎಂದಾಗ, ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗದಂತೆ ಸೂಕ್ತ ಕ್ರಮವಹಿಸಿ ಎಂದು ಪ್ರಾದೇಶಿಕ ಆಯುಕ್ತರು ಸೂಚಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಕರ ವಸೂಲಿ ಪ್ರಮಾಣ ಕಡಿಮೆ ಇದ್ದು, ಮಳಿಗೆಗಳು, ಜಾಹೀರಾತು, ನೀರಿನ ಕರ ಮತ್ತು ಇತರೆ ಸೇರಿದಂತೆ ಬಾಕಿ ಇರುವ ವಸೂಲಿ ಸಂಗ್ರಹಿಸಬೇಕು. ಆಹಣವನ್ನು ನೀರು-ಸ್ವತ್ಛತೆ ಸೇರಿದಂತೆ ಇತರೆ ತುರ್ತು ಕೆಲಸಗಳಿಗೆ ಬಳಸಿಕೊಳ್ಳಬಹುದು ಎಂದು ಕಳಸದ ಸಲಹೆ ನೀಡಿದರು. 

ಸರ್ಕಾರಿ ಜಮೀನು ಹಾಗೂ ಕೆರೆ ಒತ್ತುವರಿ ಹೆಚ್ಚಾಗಿ ಮಾಡಲಾಗುತ್ತಿದ್ದು, ಸಾರ್ವಜನಿಕರು, ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಕೆರೆ ಒತ್ತುವರಿ ತೆರವುಗೊಳಿಸುವಂತೆ ಇದೇ ಸಂದರ್ಭದಲ್ಲಿ ಅವರು ಸೂಚಿಸಿದರು. ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ, ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಎಚ್‌. ಬಸವರಾಜೇಂದ್ರ ಈ ಸಂದರ್ಭದಲ್ಲಿದ್ದರು. 

ಸ್ಮಾರ್ಟ್‌ ಸಿಟಿ ಯೋಜನೆ
ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಸ್ತುತ 32 ಕಾಮಗಾರಿಗಳು ಪ್ರಗತಿಯಲ್ಲಿವೆ. ಇನ್ನು ಎರಡು ಟೆಂಡರ್‌ ಮಾತ್ರ ಟೆಕ್ನಿಕಲ್‌ ಮಂಜೂರಾತಿ ದೊರೆಯಬೇಕಿದೆ ಎಂದು ಸ್ಮಾರ್ಟ್‌ ಸಿಟಿ ಯೋಜನೆ ಅಧಿಕಾರಿ ಹೇಳಿದರು. ಆಗ, ಪ್ರಾದೇಶಿಕ ಆಯುಕ್ತರು, ಫೇಸ್‌ 1ರ ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳು ಕ್ಷಿಪ್ರ ಗತಿಯಲ್ಲಿ ಸಾಗಬೇಕು. ಟ್ರಾಫಿಕ್‌, ಇತರೆ ಸುರಕ್ಷತಾ ಕ್ರಮಗಳನ್ನೊಳಗೊಂಡು ಕೆಲಸ ಆಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next