ಶಿರಸಿ: ಮಕ್ಕಳಿಗೆ ಸಂಯಮದ ಶಿಕ್ಷಣ ಕಲಿಸಬೇಕಾಗಿರುವುದು ಇಂದಿನ ಅಗತ್ಯ. ಶಾಸ್ತ್ರೀಯ ಸಂಗೀತ, ಯೋಗ ಇದನ್ನು ಸಾಧಿಸಲು ನೆರವಾಗುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ತಾಲೂಕಿನ ತಾರಗೋಡಲ್ಲಿ ಶುಕ್ರವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನುಡಿದರು.
ಮಕ್ಕಳ ಕೈಯಲ್ಲಿ ಮೊಬೈಲ್ ಬಂದಿದೆ. ಶಾರೀರಿಕ ವ್ಯಾಯಾಮ ಕಡಿಮೆ ಆಗುತ್ತಿದೆ. ಬೌದ್ಧಿಕ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ವ್ಯಸನಕ್ಕೆ ಒಳಗಾದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ, ಪಾಲಕರ ಜವಾಬ್ದಾರಿ ಹೆಚ್ಚಿದೆ ಎಂದರು.
ಮದ್ಯಪಾನ, ತಂಬಾಕಿನಂಥ ದುರ್ವ್ಯಸನಗಳ ಸಾಲಿಗೆ ಮೊಬೈಲೂ ಸೇರಿದೆ. ಮಕ್ಕಳನ್ನು ಈ ವ್ಯಸನದಿಂದ ದೂರಗೊಳಿಸಬೇಕಾಗಿದೆ. ಮಕ್ಕಳ ವಿದ್ಯಾರ್ಹತೆ ಅಂಕಗಳಿಗೆ ಸೀಮಿತವಾಗಬಾರದು. ಅದನ್ನು ಮಾತ್ರ ನೋಡಬಾರದು. ಬದಲಿಗೆ ಅಂತಸತ್ವ ನೋಡಬೇಕು. ಮಕ್ಕಳು ಪ್ರೌಢಶಾಲೆ ಹಂತದಲ್ಲೇ ಬ್ರಹ್ಮಚರ್ಯ ಕೆಡಿಸಿಕೊಳ್ಳುವ ಆತಂಕ ಇದೆ. ಇದಕ್ಕೆ ಕಡಿವಾಣ ಹಾಕದೇ ಇದ್ದರೆ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಕೊರತೆ ಆಗಲಿದೆ ಎಂದರು.
ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನಮ್ಮ ಸಂಸ್ಕೃತಿ ಕಲಿಸುವ ಶಾಲೆಗಳು ಬೇಕು. ನಮ್ಮ ರಾಷ್ಟ್ರದ ಕುರಿತು ಅಭಿಮಾನ ಬೆಳೆಸಬೇಕು. ಶಾಲೆಗಳು ರಾಷ್ಟ್ರ ಪ್ರೇಮಿಯನ್ನು ಸೃಷ್ಟಿಸುವಂತಾಗಬೇಕು ಎಂದರು.
ಸ್ವರ್ಣವಲ್ಲೀ ಶ್ರೀಗಳು ಹಸಿರು ಸ್ವಾಮೀಜಿ. ಭಗವದ್ಗೀತಾ ಅಭಿಯಾನದ ರೂವಾರಿಗಳು. ಅವರು ತಮ್ಮ ಪೂರ್ವಾಶ್ರಮದಲ್ಲಿ ಕಲಿತ ಶಾಲೆಯ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ನನ್ನ ಪುಣ್ಯ. ಈ ಬಗ್ಗೆ ಹೆಮ್ಮೆ ಎನಿಸುತ್ತಿದೆ ಎಂದರು.
ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬೀರಪ್ಪ ಪಟಗಾರ, ಸದಾಶಿವಳ್ಳಿ ಗ್ರಾಪಂ ಅಧ್ಯಕ್ಷ ನಾಗರಾಜ ಹೆಗಡೆ, ಶಾಲಾ ಮುಖ್ಯ ಶಿಕ್ಷಕಿ ತಾರಾ ಲೋಕೇಶ್ವರ ಇತರರಿದ್ದರು.
ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಭಟ್ಟ ಸ್ವಾಗತಿಸಿದರು. ಗೋಪಾಲಕೃಷ್ಣ ತಾರಗೋಡ ಫಲ ಸಮರ್ಪಿಸಿದರು. ಗಜಾನನ ಭಟ್ಟ ಕುಂಬ್ರಿಗದ್ದೆ ವಂದಿಸಿದರು. ಅನಂತ ಭಟ್ ಹುಳಗೋಳ, ಶಶಿಕಾಂತ ಹೆಗಡೆ ನಿರ್ವಹಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನ ನಡೆಯಿತು.
ಕಾರ್ಯಕ್ರಮದಲಿ ಹಲವರಿಗೆ ಸನ್ಮಾನ: ಕಾರ್ಯಕ್ರಮದ ಅಂಗವಾಗಿ ಶಿಕ್ಷಕರಾದ ಸುರೇಖಾ ಶಾಸ್ತ್ರಿ, ಶ್ಯಾಮಲಾ ಹೆಗಡೆ, ರೇಣುಕಾ ಶಿರಾಲಿ, ರೇಷ್ಮಾ ಗೋಕರ್ಣ, ಪ್ರಶಾಂತ ಹೆಗಡೆ, ವಸಂತ ನಾಯ್ಕ, ಮಹಾಲಕ್ಷೀ ಬೈಂದೂರಕರ, ಸುಜಾತಾ ಹೆಗಡೆ, ಪಾಂಡುರಂಗ ಶೆಟ್ಟಿ, ಜಯಶ್ರೀ ಲೇಲೆ, ಬಿ.ಎನ್. ರೋಡ್ರಿಗಿಸ್, ಮಧುಮತಿ ಮೊಗೇರ, ಲಕ್ಷೀ ನಾರಾಯಣ ಹೆಗಡೆ, ಪ್ರೇಮಾ ಭಟ್ಟ, ತಾರಾ ಲೋಕೇಶ್ವರ, ಉಮಾ ಭಟ್ಟ, ಗಣಪತಿ ಹೆಗಡೆ, ಜ್ಯೋತಿ ಅಗೇರ, ಚಿತ್ರಾ ಮೊಗೇರ ಅವರನ್ನು ಸನ್ಮಾನಿಸಲಾಯಿತು. ಇದರ ಜತೆ ಈ ವರೆಗೆ ಎಸ್.ಡಿ.ಎಂಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಪ್ರಭಾಕರ ಹೆಗಡೆ, ಸುಬ್ರಾಯ ಹೆಗಡೆ, ಮಧುಕೇಶ್ವರ ಹೆಗಡೆ, ಬೀರಪ್ಪ ಪಟಗಾರ ಅವರನ್ನು ಗೌರವಿಸಲಾಯಿತು.
ಅಗ್ನಿಹೋತ್ರಿ ನರಸಿಂಹ ಭಟ್ಟ, ನಿವೃತ್ತ ನ್ಯಾಯಾಧೀಶ ನಾರಾಯಣ ಹೆಗಡೆ, ಉದ್ಯಮಿ ಸೂರ್ಯನಾರಾಯಣ ಹೆಗಡೆ, ಸಮಾಜ ಸೇವಕ ದತ್ತಾತ್ರೇಯ ಹೆಗಡೆ ಅಂಬಳಿಕೆ, ಪ್ರಾಚಾರ್ಯ ಎಸ್.ಹೆಗಡೆ, ನಿವೃತ್ತ ಸೇನಾಧಿಕಾರಿ ಶ್ರೀಧರ ಹೆಗಡೆ, ಯೋಧ ನಾಗರಾಜ ಪೂಜಾರಿ, ನಿವೃತ್ತ ಹವಾಲ್ದಾರ ಪಾಂಡುರಂಗ ಶೆಟ್ಟಿ, ನಿವೃತ್ತ ಇಂಜಿನಿಯರ್ ಶ್ರೀಪಾದ ಭಟ್ಟ, ಸಹಕಾರಿಗಳಾದ ಶಂಭುಲಿಂಗ ಹೆಗಡೆ, ಭಾಸ್ಕರ ಹೆಗಡೆ, ಗಣಪತಿ ಭಟ್ಟ, ರಘುಪತಿ ಭಟ್ಟ, ಚಿತ್ರಕಾರ ಜಿ.ಎಂ.ಹೆಗಡೆ, ಸಾಧಕ ವಿದ್ಯಾರ್ಥಿಗಳಾದ ರಶ್ಮಿಹೆಗಡೆ, ಶೃತಿ ಭಟ್ಟ, ರಾಜಗುರು ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಶ್ರೀಗಳು ಕಲಿತ ಶಾಲೆ! ಸ್ವರ್ಣವಲ್ಲೀ ಶ್ರೀಗಳು ಪೂರ್ವಾಶ್ರಮದಲ್ಲಿ ಕಲಿತ ತಾರಗೋಡ ಶಾಲೆಗೆ ಆಗಮಿಸಿ ಅಮೃತ ಮಹೋತ್ಸವದಲ್ಲಿ ಪಾಲ್ಗೊಂಡರು. ಶಾಲೆಗೆ ಆಗಮಿಸಿದಅವರು ಶಾರದಾ ಪೂಜೆ ನಡೆಸಿದರು. ಕಲ್ಪ ವೃಕ್ಷ ವೃಕ್ಷಾರೋಪಣ ನಡೆಸಿದರು. ಶಾಲೆಯಲ್ಲಿ ಓಡಾಡಿ ತಮ್ಮ ಕಲಿಕಾ ದಿನಗಳನ್ನು ನೆನಪಿಸಿಕೊಂಡರು.
ಮಕ್ಕಳ ಆಸಕ್ತಿ ಗಮನಿಸಿ ಅದಕ್ಕೆ ಪೂರಕವಾಗಿ ಪ್ರೋತ್ಸಾಹ ನೀಡಿದರೆ ಅದ್ಭುತ ಬೆಳವಣಿಗೆ ಸಾಧ್ಯ. –
ಸ್ವರ್ಣವಲ್ಲೀ ಶ್ರೀ
ಇಡೀ ಕರ್ನಾಟಕದ ರಾಜ್ಯದಲ್ಲಿ ಮೆರಿಟ್ ಆಧಾರದಲ್ಲಿ ಶಿಕ್ಷಕರನ್ನು ಪಡೆದರೆ ಅದು ಸರಕಾರಿ ಶಾಲೆಯಲ್ಲಿ ಮಾತ್ರ. ಕಾಲಕಾಲಕ್ಕೆ ಶಾಲೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗುಣಮಟ್ಟದ ಶಿಕ್ಷಣ ಕೊಡುವ ಜವಾಬ್ದಾರಿ ನಮ್ಮದು
. –ಕೋಟ ಶ್ರೀನಿವಾಸ ಪೂಜಾರಿ, ಸಚಿವ