Advertisement

ಗ್ಯಾಸ್‌ ಗೀಸರ್‌ ಬಳಸುತ್ತಿದ್ದರೆ ಜೋಕೆ..

02:29 PM Jun 18, 2023 | Team Udayavani |

ಬೆಂಗಳೂರು: ಸ್ನಾನಕ್ಕೆ ನೀರು ಕಾಯಿಸಲು ಬಳಸುವ ಗ್ಯಾಸ್‌ ಗೀಸರ್‌ಗಳು ಪ್ರಾಣಕ್ಕೆ ಕುತ್ತು ತರುವ ಸಾಧನವಾಗಿ ಮಾರ್ಪಟ್ಟಿರುವುದು ಆತಂಕಕ್ಕೀಡು ಮಾಡಿದೆ. ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಿದ್ದ ಜೋಡಿಯೊಂದು ಇತ್ತೀಚೆಗೆ ಗ್ಯಾಸ್‌ ಗೀಸರ್‌ನಿಂದ ದಾರುಣ ಅಂತ್ಯ ಕಂಡಿರುವುದು ಈ ಅಂಶಗಳಿಗೆ ಪುಷ್ಠಿ ನೀಡುತ್ತದೆ.

Advertisement

ಹೌದು, ಕಟ್ಟಿಗೆ ಒಲೆ ನಗರದಲ್ಲೆಲ್ಲೂ ಇಲ್ಲ, ಇನ್ನು ಕರೆಂಟ್‌ ಬಿಲ್‌ ದುಬಾರಿ, ಇವುಗಳ ಬಳಕೆಯೂ ಕಿರಿ-ಕಿರಿ. ಇದೆಲ್ಲ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡರೆ ನೀರು ಕಾಯಿಸಲು ಜನ ಸಾಮಾನ್ಯರಿಗೆ ಸುಲಭವಾಗಿ ಸಿಗುವ ಸಾಧನವೇ ಗ್ಯಾಸ್‌ ಗೀಸರ್‌. ನೀರು ಬೇಗ ಕಾಯುತ್ತದೆ ಎಂಬ ಕಾರಣಕ್ಕೆ ಜನ ಗ್ಯಾಸ್‌ ಗೀಸರ್‌ ನ ಮೊರೆ ಹೋಗುತ್ತಾರೆ. ಬೆಂಗಳೂರಿನಂತಹ ನಗರಗಳಲ್ಲಿ ಶೇ.60ರಷ್ಟು ಮಂದಿ ಗ್ಯಾಸ್‌ ಗೀಸರ್‌ ಬಳಸುತ್ತಿದ್ದಾರೆ. ಆದರೆ, ಗ್ಯಾಸ್‌ ಗೀಸರ್‌ ಬಳಸುವ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣಕ್ಕೆ ಕುತ್ತು ತರಲಿದೆ. ರಾಜ್ಯದಲ್ಲಿ ಕಳೆದ 3 ವಷಗಳಲ್ಲಿ 12ಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ 14ಕ್ಕೂ ಅಧಿಕ ಜನ ಗ್ಯಾಸ್‌ ಗೀಸರ್‌ ಅವಘಡಕ್ಕೆ ಬಲಿಯಾಗಿದ್ದಾರೆ.

ಗ್ಯಾಸ್‌ ಗೀಸರ್‌ನಿಂದ ವಿಷನಿಲ ಸೋರಿಗೆ ಹೇಗೆ?: ಗ್ಯಾಸ್‌ ಗೀಸರ್‌ಗೆ ಎಲ್.ಪಿ.ಜಿ ಇಂಧನ ವಾಗಿ ಬಳಕೆಯಾಗಲಿದೆ. ಇದು ಆಮ್ಲಜನಕ ಇರುವ ಕಡೆ ಉರಿದು ಕಾರ್ಬನ್‌ ಡೈ ಆಕ್ಸೈಡ್‌ ಆಗುತ್ತದೆ. ಆದರೆ, ಗ್ಯಾಸ್‌ ಗೀಸರ್‌ ಆನ್‌ ಮಾಡಿದ ವೇಳೆ ಆಮ್ಲಜನಕದ ಕೊರತೆ ಉಂಟಾ ದರೆ ಕಾರ್ಬನ್‌ ಮಾನಾಕ್ಸೆ„ಡ್‌ ಆಗಿ ಮಾರ್ಪಟ್ಟು ವಿಷಕಾರಿ ಅನಿಲ ಹೊರ ಸೂಸುತ್ತದೆ. ಇದಲ್ಲದೇ, ಗ್ಯಾಸ್‌ ಗೀಸರ್‌ ಉರಿದು ನೀರು ಬಿಸಿಯಾಗಲು ಕೊಠಡಿಯಲ್ಲಿರುವ ಆಮ್ಲಜನಕ ವನ್ನು ಅದು ಹೀರಿಕೊಳ್ಳುತ್ತದೆ. ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಇಂಧನ ಸುಡುವ ಪ್ರಕ್ರಿಯೆಯಲ್ಲಿ ಬದಲಾಗುತ್ತದೆ. ಈ ಸಂದರ್ಭ ದಲ್ಲಿ ಮಿತಿಗಿಂತ ಹೆಚ್ಚಿನ ಕಾರ್ಬನ್‌ ಮೊನಾಕ್ಸೈಡ್‌ ಉತ್ಪತ್ತಿಯಾಗುತ್ತವೆ. ಕಾರ್ಬನ್‌ ಮಾನಾಕ್ಸೈಡ್‌ ಎಂಬ ವಿಷ ಅನಿಲಕ್ಕೆ ವಾಸನೆ, ಬಣ್ಣ ಇಲ್ಲದಿರುವು ದರಿಂದ ಇದನ್ನು ಗ್ರಹಿಸಲು ಸಾಧ್ಯವಾಗುವುದಿಲ್ಲ. ಇದು ಗಾಳಿಯಲ್ಲಿ ಮಿಶ್ರಣಗೊಂಡು ಉಸಿರಾ ಡುವ ವೇಳೆ ಮನುಷ್ಯನ ದೇಹದೊಳಗೆ ಸೇರಿಕೊಂಡರೆ ಅಪಾಯ ಗ್ಯಾರೆಂಟಿ.

ದೇಹದೊಳಗೆ ಸೇರಿದರೆ ಅಪಾಯ ಕಟ್ಟಿಟ್ಟ ಬುತ್ತಿ: ಸ್ವಲ್ಪ ಪ್ರಮಾಣದಲ್ಲಿ ಕಾರ್ಬನ್‌ ಮೋನಾಕ್ಸೆ„ಡ್‌ ದೇಹದೊಳಗೆ ಸೇರಿದರೆ ಸುಸ್ತು, ದೇಹದಲ್ಲಿರುವ ಅಂಗಾಗಳ ಮೇಲೆ ಪರಿಣಾಮ, ಗಲಿಬಿಲಿ, ಫಿಟ್ಸ್‌, ಮರೆಗುಳಿತನ, ಆಯಾಸ, ತಲೆನೋವು, ನರರೋಗ, ತಲೆಸುತ್ತು ಲಕ್ಷಣವೂ ಕಂಡು ಬರಲಿದೆ. ಶೇ.20ರಷ್ಟು ದೇಹದೊಳಗೆ ಹೋದರೆ ಉಸಿರಾಟಕ್ಕೆ ಸಮಸ್ಯೆಯಾಗಲಿದೆ. ಶೇ.40ಕ್ಕೆ ಏರಿಕೆಯಾದರೆ ಮೂರ್ಚೆತಪ್ಪಿ ಬೀಳಬಹುದು. ಇದಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ದೇಹದೊಳಗೆ ಕಾರ್ಬನ್‌ ಮೋನಾಕ್ಸೈಡ್‌ ಹೋದ ಕೂಡಲೇ ಪ್ರತಿಕ್ರಿಯಿಸುವ ಸಾಮರ್ಥ್ಯ ಕಡಿಮೆ ಯಾಗುತ್ತದೆ. ಪ್ರತಿದಿನ ವಿಷಕಾರಿ ಅನಿಲ ಸ್ವಲ್ಪ ಪ್ರಮಾಣದಲ್ಲಿ ಸೇವಿಸುತ್ತಿದ್ದಂತೆ ದೀರ್ಘ‌ಕಾಲೀಕ ರೋಗಗಳು ಉಂಟಾಗಬಹುದು. ಶ್ವಾಸಕೋಶದ ಮೂಲಕ ಶೇ.40ರಷ್ಟು ಪ್ರಮಾಣ ದೇಹ ಸೇರುವವರೆಗೂ ಗೊತ್ತಾಗುವು ದಿಲ್ಲ. ದೇಹಕ್ಕೆ ಸೇರಿದ ತಕ್ಷಣ ಅಂಗಾಂಗ ನಿಷ್ಕ್ರಿ ಯವಾಗಿ ಕೋಮಾ ಸ್ಥಿತಿಗೆ ತಲುಪಿಸುವ ಸಾಧ್ಯತೆ ಗಳೂ ಇವೆ. ಆಗ ಸ್ನಾನದ ಕೋಣೆಯಿಂದ ಹೊರಗೆ ಬರುವಷ್ಟು ಶಕ್ತಿ ದೇಹದಲ್ಲಿ ಉಳಿಯುವುದಿಲ್ಲ.

ಜನ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳೇನು? :

Advertisement

 ಗ್ಯಾಸ್‌ ಗೀಸರ್‌ ಉಪಯೋಗಿಸುವ ಕೋಣೆಯಲ್ಲಿ ಆಮ್ಲಜನಕ ಗಾಳಿಯಾಡಲು ಕಿಟಕಿ ಇರಲಿ

 ಗೀಸರ್‌ ಉಪಯೋಗಿಸಿದರೆ ಕಿಟಕಿ ತೆರೆಯಿರಿ

 ಪೂರ್ತಿ ಮುಚ್ಚಿದ ಕೊಠಡಿಗಳಲ್ಲಿ ಗ್ಯಾಸ್‌ ಗೀಸರ್‌ ಗಳನ್ನು ಅಳವಡಿಸಬೇಡಿ.

 ಐಎಸ್‌ಐ ಗುಣಮಟ್ಟದ ಗೀಸರ್‌ ಬಳಕೆ ಉತ್ತಮ

 ಗ್ಯಾಸ್‌ ಗೀಸರ್‌ ಸರಿಯಾಗಿವೆಯೇ ಎಂದು ಆಗಾಗ ಪರೀಕ್ಷಿಸಿ

ಸ್ನಾನಕ್ಕೆ ತೆರಳುವ ವೇಳೆ ಗ್ಯಾಸ್‌ ಗೀಸರ್‌ ಆನ್‌ ಮಾಡಿದ್ದರೆ ಸ್ನಾನದ ಕೋಣೆಯಲ್ಲಿ ಗಾಳಿಯಾಡುತ್ತಿವೆಯೇ ಎಂದು ಪರೀಕ್ಷಿಸಿ. ಇದರ ಬಳಕೆ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. -ಡಾ.ದಿನೇಶ್‌ ರಾವ್‌, ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞ

ಇತ್ತೀಚೆಗೆ ನಡೆದ ಪ್ರಮುಖ ಅವಘಡಗಳು:

  • ಬೆಂಗಳೂರಿನ ಚಿಕ್ಕಜಾಲದ ತರಬನಹಳ್ಳಿಯಲ್ಲಿ ಕೆಲ ದಿನಗಳ ಹಿಂದೆ ಚಂದ್ರಶೇಖರ್‌, ಸುಧಾರಾಣಿ ಜೋಡಿ ಸ್ನಾನ ಮಾಡಲು ಹೋದಾಗ ಗ್ಯಾಸ್‌ ಗೀಸರ್‌ನಿಂದ ಕಾರ್ಬನ್‌ ಮೊನಾಕ್ಸೈಡ್‌ ಸೋರಿಕೆಯಾಗಿತ್ತು. ಪರಿಣಾಮ ಇಬ್ಬರೂ ಮೃತಪಟ್ಟಿದ್ದಾರೆ. ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರಲು ಚಿಂತಿಸಿದ್ದರು.
  • 2022ರಲ್ಲಿ ಗಿರಿನಗರ ಠಾಣಾ ವ್ಯಾಪ್ತಿಯಲ್ಲಿ ಸ್ನಾನಕ್ಕೆ ಜೊತೆಯಾಗಿ ತೆರಳಿದ್ದ ಪ್ರೇಮಿಗಳು ಗ್ಯಾಸ್‌ ಗೀಸರ್‌ನಲ್ಲಿ ವಿಷಾನಿಲ ಸೋರಿಕೆಯಿಂದ ಅಸುನೀಗಿದ್ದರು.
  • 2021ರಲ್ಲಿ ಮಹಾಲಕ್ಷ್ಮೀಲೇಔಟ್‌ನ ಎಂಬಿಬಿಎಸ್‌ ವಿದ್ಯಾರ್ಥಿನಿ ಸಂಪದ (23) ಗ್ಯಾಸ್‌ ಗೀಸರ್‌ ಸೋರಿಕೆಯಿಂದ ಸಾವನ್ನಪ್ಪಿದ್ದರು.
  • ಕಳೆದ ಜ.30ರಂದು ಸೂರತ್‌ನಲ್ಲಿ ವಿವಾಹವಾಗಿ ಗಂಡನ ಮನೆಗೆ ಸೇರಿದ ಮಾರನೆಯ ದಿನವೇ ಮಹಿಳೆ ಗ್ಯಾಸ್‌ ಗೀಸರ್‌ ಸೋರಿಕೆಯಿಂದ ಉಸಿರುಗಟ್ಟಿ ಅಸುನೀಗಿದ್ದಾರೆ.
  • ಮಾ.10ರಂದು ಮುಂಬೈನ ಟಿನಾ ಷಾ ಮತ್ತು ದೀಪಕ್‌ ಷಾ ದಂಪತಿ ಸ್ನಾನಕ್ಕೆ ಹೋದಾಗ ಕಾರ್ಬನ್‌ ಮೋನಾಕ್ಸೈಡ್‌ ಸೋರಿಕೆಯಾಗಿ ಮೃತಪಟ್ಟಿದ್ದರು.

-ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next