Advertisement

ವಸ್ತುಗಳ ಖರೀದಿ ಮುನ್ನ ಎಚ್ಚರಿಕೆ ವಹಿಸಿ

04:42 PM Mar 17, 2022 | Team Udayavani |

ಬೀದರ: ಗ್ರಾಹಕರು ಪ್ರತಿಯೊಂದು ವಸ್ತುವಿನ ಬಗ್ಗೆ ನಿಖರವಾಗಿ ತಿಳಿದುಕೊಂಡು ವಾರಂಟಿ ಮತ್ತು ಗ್ಯಾರಂಟಿ ಬಗ್ಗೆ ಖಾತರಿಪಡಿಸಿಕೊಂಡು ರಸೀದಿಯೊಂದಿಗೆ ಖರೀದಿ ಮಾಡಬೇಕು ಎಂದು ಹಿರಿಯ ಸಿವಿಲ್‌ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿದ್ರಾಮ ಟಿ.ಪಿ. ಕರೆ ನೀಡಿದರು.

Advertisement

ನಗರದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಗ್ರಾಹಕರ ದಿನಾಚರಣೆ ಮತ್ತು ಸಿಎಸ್‌ಸಿ (ಕಾಮನ್‌ ಸರ್ವಿಸ್‌ ಸೆಂಟರ್‌) ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಸಕಲ ಸೌಲತ್ತುಗಳ ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಉತ್ತಮ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.

ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಮಾತನಾಡಿ, ನ್ಯಾಯಬೆಲೆ ಅಂಗಡಿಗಳು ಈಗ ಇಂದಿನಿಂದಲೇ ಸಿಎಸ್‌ಸಿ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಈ ಕೇಂದ್ರಗಳಲ್ಲಿ ನ್ಯಾಯೋಚಿತ ಡಿಜಿಟಲ್‌ ಹಣಕಾಸು, ಆಧಾರ ಕಾರ್ಡ್‌, ಡಿಜಿಟಲ್‌ ಪೇಮೆಂಟ್‌, ಪೆನ್ಸನ್‌ ಸೇರಿದಂತೆ ಇತ್ಯಾದಿ ಸರ್ಕಾರಿ ಸೇವೆಗಳು ಲಭ್ಯ. ಖಾಸಗಿ ವಲಯದ ಕೇಂದ್ರಗಳಲ್ಲಿ ಜನರಿಗೆ ಸರಿಯಾಗಿ ದೊರಕದೆ ದುರ್ಬಳಕೆಯಾಗುತ್ತಿರುವುದನ್ನು ಮನಗಂಡು ಸರ್ಕಾರ ನ್ಯಾಯಬೆಲೆ ಅಂಗಡಿಗಳಿಗೆ ಸಿಎಸ್‌ಸಿ ಕೇಂದ್ರಗಳನ್ನಾಗಿ ಪರಿವರ್ತಿಸಿದೆ. ಸರ್ಕಾರದ ಸಕಲ ಸೌಲತ್ತುಗಳ ಲಾಭ ಪಡೆದುಕೊಳ್ಳಬೇಕೆಂದರು.

ಮಾಹಿತಿ ಕೇಂದ್ರದ ಜಿಲ್ಲಾಧ್ಯಕ್ಷ ಬಸವರಾಜ ಪವಾರ್‌ ಮಾತನಾಡಿ, ಜಿಲ್ಲೆಯಲ್ಲಿ 736 ಸಿಎಸ್‌ಸಿ ಕೇಂದ್ರಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಪ್ರತಿ ಸಿಎಸ್‌ಸಿ ರವರು 5 ಕೆ.ಜಿ. ಗಾತ್ರದ ಮಿನಿ ಗ್ಯಾಸ್‌ ಸಿಲೆಂಡರ್‌ಅನ್ನು ತಲಾ 20ರಂತೆ ಪಡೆದು ಪಡಿತರ ಮತ್ತು ಇತರೆ ಗ್ರಾಹಕರಿಗೆ ವಿತರಿಸಲು ಸೌಲಭ್ಯ ಒದಗಿಸಲಾಗಿದೆ. ಇದರಿಂದ ಈ ಹಿಂದೆ ಆಗುತ್ತಿದ್ದ ದುರ್ಬಳಕೆ ಮತ್ತು ಸಮಯ, ಹಣವೂ ಉಳಿತಾಯವಾಗಲಿದೆ. ಉತ್ತಮ ಸೇವೆ ದೊರಕಲಿದೆ ಎಂದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆಯನ್ನು ಪರಿಹಾರ ಆಯೋಗವನ್ನಾಗಿ ಮಾಡಲಾಗಿದೆ ಎಂದು ಆಯೋಗದ ಜಿಲ್ಲಾಧ್ಯಕ್ಷ ಮಾಬು ಸಾಹೇಬ್‌ ಛಬ್ಬಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಿಎಸ್‌ಸಿ ಕೇಂದ್ರ, ಪೆಟ್ರೋಲ್‌ ಬಂಕ್‌, ಗ್ಯಾಸ್‌ ಏಜೆನ್ಸಿಗಳ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next