Advertisement

ದಿಗ್ಬಂಧನದ ವೇಳೆ ಕ್ರಿಕೆಟಿಗರಿಗೆ ಬುಕ್ಕಿಗಳ ಆಮಿಷ

12:16 AM Apr 20, 2020 | Sriram |

ದುಬಾೖ: ಕೋವಿಡ್ 19 ವೈರಸ್‌ನಿಂದಾಗಿ ಪೂರ್ಣ ವಿಶ್ವವೇ ದಿಗ್ಬಂಧನಕ್ಕೆ ಒಳಗಾಗಿರುವ ಸಂದರ್ಭದಲ್ಲಿ ಕ್ರಿಕೆಟ್‌ ವಲ ಯದಲ್ಲಿ ಬುಕ್ಕಿಗಳು ಸದ್ದಿಲ್ಲದೆ ತಮ್ಮ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ಅಲೆಕ್ಸ್‌ ಮಾರ್ಷ್‌ ಇಂತಹದೊಂದು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

Advertisement

” ಬುಕ್ಕಿಗಳು ಕ್ರಿಕೆಟಿಗರ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಸಖ್ಯ ಬಳಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮನೆ ಯಲ್ಲಿ ಉಳಿದಿರುವ ಕಾರಣ ಕ್ರಿಕೆಟಿಗರು ಸಾಮಾಜಿಕ ಜಾಲತಾಣ ದಲ್ಲಿ ಸಕ್ರಿಯರಾಗಿರುವ ಸಂದರ್ಭ ನೋಡಿಕೊಂಡು ಬುಕ್ಕಿಗಳು ತಮ್ಮ ಖಾತೆ ತೆರೆದು ಆ್ಯಕ್ಟಿವ್‌ ಆಗುತ್ತಾರೆ. ಕೋವಿಡ್ 19 ವೈರಸ್‌ ಲಾಕ್‌ಡೌನ್‌ ಸಮಯದಲ್ಲಿ ತಮ್ಮ ವ್ಯವಹಾರಕ್ಕೆ ಚೆನ್ನಾಗಿ ಬಳಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಆಟಗಾರರನ್ನು ಹೇಗಾದರೂ ಮಾಡಿ ಫಿಕ್ಸಿಂಗ್‌ ಬಲೆಗೆ ಬೀಳಿಸಬೇಕೆಂಬುದು ಅವರ ಉದ್ದೇಶ. ವಿಶ್ವದೆಲ್ಲೆಡೆ ಕ್ರಿಕೆಟ್‌ ಚಟುವಟಿಕೆ ಇಲ್ಲದಿದ್ದರೂ ಬುಕ್ಕಿಗಳೆಲ್ಲ ತಮ್ಮ ಸಮಾಜ ಘಾತುಕ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ನಮ್ಮ ಸಂಪರ್ಕದಲ್ಲಿರುವ ಆಟಗಾರರಿಗೆ, ಸಿಬಂದಿಗೆ ಈಗಾಗಲೇ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದು ಬುಕಿಗಳಿಂದ ದೂರವಿರುವ ಮುನ್ನೆಚ್ಚರಿಕೆ ನೀಡಿದ್ದೇವೆ’ ಎಂದು ಅಲೆಕ್ಸ್‌ ಮಾರ್ಷ್‌ ತಿಳಿಸಿದ್ದಾರೆ.

ವೇತನ ಕಡಿತವೇ ದಾಳ
ವಿವಿಧ ದೇಶಗಳ ಕ್ರಿಕೆಟ್‌ ಮಂಡಳಿಗಳು ಕೋವಿಡ್ 19ದಿಂದಾಗಿ ಆರ್ಥಿಕ ಹೊಡೆತಕ್ಕೆ ಸಿಕ್ಕಿವೆ, ಮಾತ್ರವಲ್ಲ ಕ್ರಿಕೆಟಿಗರ ವೇತನಕ್ಕೆ ಕತ್ತರಿ ಹಾಕಿವೆ. ಇದನ್ನೇ ದಾಳವಾಗಿಟ್ಟುಕೊಂಡು ಬುಕ್ಕಿಗಳು ಕ್ರಿಕೆಟಿಗರಿಗೆ ಹೆಚ್ಚಿನ ಆಮಿಷವೊಡ್ಡು ತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ ಭದ್ರತಾ ಮುಖ್ಯಸ್ಥ, “ಇಂತಹ ಸಮಯವನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಆಟಗಾರರ ಬಗ್ಗೆ ನಮಗೆ ನಂಬಿಕೆ ಇದೆ, ಒಳ್ಳೆಯದು ಕೆಟ್ಟದನ್ನು ಅವರು ಸರಿಯಾಗಿಯೇ ಅರಿತಿದ್ದಾರೆ’ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಕ್ರಿಕೆಟಿಗರನ್ನು ಬಲೆಗೆ ಬೀಳಿಸಲು ಹೊಂಚು ಹಾಕುತ್ತಿರುವ ಬುಕ್ಕಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ತನಿಖಾ ಸಂಸ್ಥೆ (ಎಸಿಯು) ಮುಖ್ಯಸ್ಥ ಅಜಿತ್‌ ಸಿಂಗ್‌ ಆಟಗಾರರಿಗೆ ಸೂಚನೆ ನೀಡಿದ್ದಾರೆ.

“ಸದ್ಯ ಪರಿಸ್ಥಿತಿ ಎಸಿಯು ನಿಯಂತ್ರಣದಲ್ಲಿದೆ, ಯಾವ ರೀತಿಯಲ್ಲಿ ಬುಕ್ಕಿಗಳು ಸಂಪರ್ಕ ಮಾಡಬಹುದು ಎನ್ನುವುದರ ಬಗ್ಗೆ ಆಟಗಾರರಿಗೆ ಮುನ್ನೆಚ್ಚರಿಕೆ ನೀಡಿದ್ದೇವೆ. ಅಭಿಮಾನಿ ಸೋಗಿನಲ್ಲಿ ಬಂದು ಭೇಟಿಯಾಗಬಹುದು ಅಥವಾ ಮತ್ಯಾವುದೋ ರೀತಿಯಲ್ಲಿ ನಿಮ್ಮನ್ನು ಫಿಕ್ಸಿಂಗ್‌ ಖೆಡ್ಡಾಕ್ಕೆ ಬೀಳಿಸಬಹುದು, ಆಮಿಷವೊಡ್ಡಿದರೆ ತತ್‌ಕ್ಷಣ ಎಸಿಯುಗೆ ಮಾಹಿತಿ ನೀಡುವಂತೆ ಆಟಗಾರರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next