ಕೆ.ಆರ್.ನಗರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಮಹತ್ವದ್ದಾಗಿದ್ದು, ಜವಾಬ್ದಾರಿಯುತವಾಗಿ ಮತಚಲಾಯಿಸಬೇಕು ಎಂದು ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ತಾಪಂ ಇಒ ಲಕ್ಷ್ಮೀಮೋಹನ್ ತಿಳಿಸಿದರು.
ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಡೆದ ಕಡ್ಡಾಯ ಮತದಾನದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಭದ್ರತೆ ಮತ್ತು ಜನರ ಹಿತಕ್ಕಾಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡುವಾಗ ಎಚ್ಚರ ವಹಿಸಿ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಮ್ಮೆ ಮತದಾರರಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ 5 ವರ್ಷದ ಅವಧಿ ನಿಗದಿಯಾಗಿರುವುದರಿಂದ ಆ ದಿನಗಳಲ್ಲಿ ಉತ್ತಮ ಮತ್ತು ಜನಪರ ಕಾರ್ಯ ಮಾಡುವವರನ್ನು ಆರಿಸಬೇಕು. ಸಮರ್ಥ ನಾಯಕರನ್ನು ಆರಿಸದಿದ್ದರೆ ದೇಶದ ಭದ್ರತೆಗೆ ಧಕ್ಕೆಯುಂಟಾಗಿ ಭಾರತದ ಭವಿಷ್ಯ ಮಂಕಾಗುತ್ತದೆ. ಈ ವಿಚಾರದಲ್ಲಿ ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.
ಚುನಾಯಿತರು ಮತದಾರರ ಸೇವಕರಾಗಿದ್ದು, ಅದನ್ನು ಪಾಲಿಸುವವರು ಮತ್ತು ಮತದಾರರ ಆಶೋತ್ತರಗಳಿಗೆ ಸ್ಪಂದಿಸುವವರಿಗೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಿ ಇತರರನ್ನು ಪ್ರೇರೇಪಿಸಬೇಕು. ಚುನಾವಣೆಯನ್ನು ಹಬ್ಬದಂತೆ ಆಚರಿಸಬೇಕು. ಮತದಾರರು ಭ್ರಷ್ಟರಾದರೆ ಜನಪ್ರತಿನಿಧಿಗಳು ಕಡು ಭ್ರಷ್ಟರಾಗುತ್ತಾರೆ. ಆದ್ದರಿಂದ ಹಣ, ಹೆಂಡ, ಜಾತಿ ಪ್ರಭಾವಕ್ಕೆ ಒಳಗಾಗದೇ ಮುಕ್ತವಾಗಿ ಮತ ಚಲಾಯಿಸಿ ಎಂದರು.
ಈ ಸಂದರ್ಭದಲ್ಲಿ ಎಂಎನ್‌ಆರ್‌ಇಜಿ ಯೋಜನೆಯ ತಾಲೂಕು ನಿರ್ದೇಶಕ ಗಿರೀಶ್ ವಿವಿ ಪ್ಯಾಟ್ ಮೂಲಕ ಮತದಾನ ಮಾಡುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ತಾಪಂ ಮೇಲ್ವಿಚಾರಕ ಕುಬೇರ, ಪಿಡಿಒ ನಾಗರಾಜು, ಬಿಲ್‌ಕಲೆಕ್ಟರ್ ಶ್ರೀನಿವಾಸ್ ಇತರರಿದ್ದರು.