ಹೊನ್ನಾಳಿ: ಭೂಮಿಗೆ ಬೀಜ ಬಿತ್ತುವ ಕಾಲದಲ್ಲಿ ಬೀಜ ನಿರ್ವಹಣೆ ಕಾರ್ಯ ಬಹು ಮುಖ್ಯ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ| ಎಚ್.ಕೆ.ರೇವಣಸಿದ್ದಪ್ಪ ಹೇಳಿದರು. ಹಿರೇಕಲ್ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಮಾವಾಸ್ಯೆ ಧರ್ಮಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅನೇಕ ರೈತರು ಕಡಿಮೆ ದರದಲ್ಲಿ ಬಿತ್ತುವ ಬೀಜ ದೊರೆಯುತ್ತದೆ ಎಂದು ಬಿಡಿ ಬೀಜಗಳನ್ನು ಕೊಂಡು ಮೋಸ ಹೋಗುತ್ತಾರೆ. ಯಾವುದೇ ಕಾರಣಕ್ಕೂ ಬಿಡಿ (ಲೂಸ್) ಬೀಜ ಕೊಂಡುಕೊಳ್ಳಬಾರದು ಎಂದರು. ಇಲಾಖೆಯಿಂದ ಅಥವಾ ಅಧಿಧಿಕೃತ ಮಾರಾಟ ಮಳಿಗೆಗಳಲ್ಲಿ ಲಭ್ಯವಿರುವ ಪ್ಯಾಕೇಟ್ ಬೀಜಗಳನ್ನು ಮಾತ್ರ ರೈತರು ತೆಗದುಕೊಳ್ಳಬೇಕು.
ಹೆಚ್ಚು ಬೀಜಗಳನ್ನು ಬಿತ್ತಿದರೆ ಇಳುವರಿ ಹೆಚ್ಚು ಬರುತ್ತದೆಎನ್ನುವ ನಂಬಿಕೆ ರೈತರಲ್ಲಿದೆ. ಇದು ತಪ್ಪು. ಹೆಚ್ಚು ಮಳೆಯಾದರೆ ಮಾತ್ರ ಹೆಚ್ಚು ಬೀಜ ಬಿತ್ತಬಹುವುದು ಕಡಿಮೆ ಮಳೆಯಾದಾಗ ನಿರ್ದಿಷ್ಟ ತೂಕದಲ್ಲಿ ಬೀಜ ಬಿತ್ತಬೇಕು ಎಂದು ಹೇಳಿದರು.
ಸಹಾಯಕ ಕೃಷಿ ಅಧಿಕಾರಿ ಶಂಷೀರ್ ಅಹ್ಮದ್ ಮಾತನಾಡಿ, ಸೋಮಾರಿಗಳ ಬೆಳೆ ಎಂದೇ ಗುರ್ತಿಸಿಕೊಂಡಿರುವ ಮೆಕ್ಕೆಜೋಳವನ್ನೇ ರೈತರು ಈಚಿನ ದಿನಗಳಲ್ಲಿ ಬೆಳೆದು ಏಕ ಬೆಳೆಗೆ ಮೊರೆ ಹೋಗಿದ್ದಾರೆ. ದಯಮಾಡಿ ಏಕ ಬೆಳೆ ಬೆಳೆಯದೇ ಬಹು ಬೆಳೆ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಅಕ್ಕಡಿ ಕಾಳುಗಳಾದ ತೊಗರೆ, ಅವರೆ, ಮಡಿಕೆ, ಹೆಸರು ಬೆಳೆಗಳನ್ನು ಬೆಳೆಯುವುದನ್ನು ರೈತರು ಮರೆತಿದ್ದಾರೆ. ಒಂದು ಕಾಲಕ್ಕೆ ಮುಖ್ಯ ಬೆಳೆ ಮಧ್ಯ ಅಕ್ಕಡಿ ಕಾಳುಗಳನ್ನು ಬೆಳೆಯುತ್ತಿದ್ದರು. ಇಂದು ತೊಗರೆ ಬೆಳೆ ಬೆಳೆಯವುದು ಕಡಿಮೆಯಾಗಿ ಅದರ ಬೆಲೆ ಗಗನಕ್ಕೇರಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರತಿ ಅಮಾವಾಸ್ಯೆ ಧರ್ಮಸಭೆಯಲ್ಲಿ ಉಪಯುಕ್ತ ಉಪನ್ಯಾಸಗಳನ್ನು ಸಂಪನ್ಮೂಲ ವ್ಯಕ್ತಿಗಳಿಂದ ಕೊಡಿಸಲಾಗುವುದು. ಇದರ ಸದುಪಯೋಗವನ್ನು ಭಕ್ತ ಸಮುದಾಯ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸಹಾಯಕ ತೋಟಗಾರಿಕೆ ಅಧಿಕಾರಿ ರೇವನಾಯ್ಕ, ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ ಮಾತನಾಡಿದರು. ರೈತ ಮುಖಂಡರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಂಪಿಎಂ ವಿಜಯಾನಂದಸ್ವಾಮಿ ಸ್ವಾಗತಿಸಿದರು. ಗುರುಪ್ರಕಾಶ್ ನಿರೂಪಿಸಿದರು.