ವಿಜಯಪುರ: ರಾಜ್ಯ ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ನೀಡಿರುವ ಪ್ರಮಾಣೀಕೃತ ನಿರ್ವಹಣಾ ವಿಧಾನ (ಎಸ್‌ಒಪಿ) ದಲ್ಲಿ ಸೂಚಿಸಿರುವಂತೆ ಹೊರ ರಾಜ್ಯಗಳಿಂದ ಬರುವವರಿಗೆ ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತದೆ. ನಗರ ಪ್ರದೇಶದಲ್ಲಿ ಸಾಂಸ್ಥಿಕ ಮತ್ತು ಹೋಂ ಕ್ವಾರಂಟೈನ್ ಮಾಡಿ ನಿರ್ವಹಣೆಯಲ್ಲಿ ಲೋಪವಾಗದಂತೆ ವ್ಯವಸ್ಥಿತವಾಗಿ ನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಜೆ. ರವಿಶಂಕರ್ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ನಿಯಂತ್ರಿಸುವ ಕ್ರಮಗಳ ಕುರಿತು ನಡೆದ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಆಯಾ ತಹಶೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು, ಸ್ಥಳೀಯ ಸಂಸ್ಥೆ ಮುಖ್ಯಾಧಿ ಕಾರಿಗಳು, ಬಿಸಿಎಂ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲು ಸೂಚಿಸಿದರು.
ಗ್ರಾಮೀಣ ಪ್ರದೇಶದಲ್ಲಿ ವಸತಿ ಶಾಲೆಗಳು, ವಸತಿ ನಿಲಯಗಳಿಗೆ ಸಂಬಂಧಿ ಸಿದಂತೆ ವಾರ್ಡನ್, ಪ್ರಾಥಮಿಕ-ಪ್ರೌಢ ಶಾಲೆಗಳಿಗೆ ಆಯಾ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳ ನೋಡಲ್ ಅಧಿಕಾರಿಯಾಗಿ ನೇಮಿಸಬೇಕು. ಎರಡು ದಿನಕ್ಕೊಮ್ಮೆ ಆರೋಗ್ಯ ಇಲಾಖೆ ಸಿಬ್ಬಂದಿ ಹೆಲ್ತ್ ಸ್ಕ್ರೀನಿಂಗ್ ಮಾಡಬೇಕು. ಶಂಕಿತ ವ್ಯಕ್ತಿಗಳು ಕಂಡುಬಂದಲ್ಲಿ ತಾಲೂಕು ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರಿಸಬೇಕು. ಹೋಂ ಕ್ವಾರಂಟೈನ್ ಮಾಡಲಾದ ವ್ಯಕ್ತಿಯ ಮನೆಗೆ ನೋಟಿಸ್ ಅಂಟಿಸಬೇಕು. ನೆರ ಮನೆಯವರಿಗೆ ಕಣ್ಗಾವಲು ಹೊಣೆ ನೀಡಬೇಕು. ಹೋಂ ಕ್ವಾರಂಟೈನ್ ಮಾಡುವಾಗ ಶಂಕಿತ ವ್ಯಕ್ತಿಯ ಮೊಬೈಲ್, ಸ್ಥಿರ ದೂರವಾಣಿ ಸಂಖ್ಯೆ ದಾಖಲಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಮಾತನಾಡಿ, ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ ಇಡಲಾಗಿದ್ದು, ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಸಾಂಸ್ಥಿಕ ಹಾಗೂ ಹೋಂ ಕ್ವಾರಂಟೈನ್‌ಗೆ ಸಿದ್ಧತೆ ಮಾಡಲಾಗಿದೆ. ಜಿಲ್ಲೆಯ ಗಡಿ ಭಾಗಗಳಾದ ಧೂಳಖೇಡ ಹಾಗೂ ನಿಡಗುಂದಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದ್ದು, ವ್ಯವಸ್ಥಿತ ರೀತಿಯಲ್ಲಿ ನಿಗಾ ಇಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಎಲ್ಲೆಡೆಯೂ ಪಡಿತರ ವಿತರಿಸಲಾಗುತ್ತಿದೆ. ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿ ಮನೆ ಬಾಗಿಲಿಗೆ ಪಡಿತರ ತಲುಪಿಸಲಾಗುತ್ತಿದೆ. ಎರಡು ದಿನಗಳಲ್ಲಿ ಜಿಲ್ಲೆಯಲ್ಲಿ ಪಡಿತರ ವಿತರಣೆ ಸಂಪೂರ್ಣಗೊಳ್ಳಲಿದೆ ಎಂದು ವಿವರಿಸಿದರು. ಎಸ್ಪಿ ಅನುಪಮ್ ಅಗರವಾಲ್, ಜಿಪಂ ಸಿಇಒ ಗೋವಿಂದರೆಡ್ಡಿ, ಎಡಿಸಿ ಡಾ. ಔದ್ರಾಮ, ಡಿಎಚ್‌ಒ ಡಾ. ಮಹೇಂದ್ರ ಕಾಪ್ಸೆ, ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ. ಶರಣಪ್ಪ ಕಟ್ಟಿ, ಮುಕುಂದ ಗಲಗಲಿ, ಡಾ.ಎಂ.ಬಿ. ಬಿರಾದಾರ, ಡಾ. ಲಕ್ಕಣ್ಣನವರ ಇತರರು ಇದ್ದರು.
ಕಂಟೇನ್ಮೆಂಟ್ ವಲಯ ವ್ಯಾಪ್ತಿಯಲ್ಲಿ ತೀವ್ರ ನಿಗಾ ಇಡಲಾಗಿದ್ದು, ಆರೋಗ್ಯ ಸಂಬಂಧಿತ ಕಾಯಿಲೆಗಳಿಗಾಗಿ ಕಂಟೇನ್ಮೆಂಟ್ ವ್ಯಾಪ್ತಿಯ ಜನರು ಆರೋಗ್ಯ ಸಂಬಂಧಿತ ಕಾಯಿಲೆಗಳಿದ್ದಲ್ಲಿ ಓಪಿಡಿ ಕೇಂದ್ರದಲ್ಲಿ ತೋರಿಸಿಕೊಳ್ಳಬಹುದು. ಕಂಟೇನ್ಮೆಂಟ್ ವ್ಯಾಪ್ತಿಯಲ್ಲಿ ಓಪಿಡಿಗಳು ವಿಶೇಷವಾಗಿ ಕಾರ್ಯನಿರ್ವಹಿಸುತ್ತಿವೆ. –
ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ