Advertisement
ಆಸ್ತಿಯನ್ನು ಆರ್ಥಿಕ ಮೌಲ್ಯದಿಂದ ನೋಡಿ ಉಳಿತಾಯ ಮಾಡಿದವರು ಸಂಪತ್ತನ್ನು ಹೊಂದುವುದರೊಂದಿಗೆ, ತಮ್ಮ ಸಂಪಾದನೆ ಬಹು ಅಮೂಲ್ಯ ವಾದದ್ದು ಎಂದು ಭಾವಿಸುತ್ತಾರೆ. ಅವರು ಚಿನ್ನಕ್ಕೆ ಆದ್ಯತೆ ಕೊಡುತ್ತಾರೆ. ಇದು ಕಾಲಕ್ರಮೇಣ ಬೆಲೆ ಹೆಚ್ಚಿಸಿಕೊಳ್ಳುತ್ತದೆ ಎಂಬ ನಂಬಿಕೆ ಅವರದ್ದು. 25 ವರ್ಷಗಳ ಹಿಂದೆ 50 ಸಾವಿರ ರೂ.ಗೆ ಖರೀದಿಸಿದ್ದ ಬಂಗಾರ ಇವತ್ತು 20 ಲಕ್ಷ ರೂ. ಬೆಲೆ ಬಾಳುವುದನ್ನು ಕಂಡು ಸಂಭ್ರಮ ಪಡುವವರಿದ್ದಾರೆ. ಹೂಡಿಕೆದಾರರಿಗೆ ಇದು ವಾರ್ಷಿಕ ಶೇ.16ರ ಸರಾಸರಿ ದರದಲ್ಲಿ ಬೆಳೆದ ಹೂಡಿಕೆಯ ಒಟ್ಟು ಮೊತ್ತ. ಆದರೆ ಮೌಲ್ಯವನ್ನು ಗಮನಿಸಿದರೆ ಇದು ಕಡಿಮೆಯೇ. ಆದ್ದರಿಂದ ಹೂಡಿಕೆದಾರರಾಗಿ ಬದಲಾಗಬೇಕಿದ್ದರೆ ಆಸ್ತಿಯನ್ನು ಆರ್ಥಿಕ ಮೌಲ್ಯದಿಂದ ನೋಡಬೇಕು. ಅಂಥ ಮನಃಸ್ಥಿತಿಯಲ್ಲಿ ಮೌಲ್ಯವನ್ನು ಅರಿತು ಯೋಜನೆ ಹಾಕಿಕೊಳ್ಳಲು ಸಾಧ್ಯವಾಗುತ್ತದೆ.
ಉಳಿತಾಯ ಮಾಡುವವರು ಹಣಕಾಸು ಲೆಕ್ಕಾಚಾರದಲ್ಲಿ ವಿಫಲರಾಗುತ್ತಾರೆ. ಏಕೆಂದರೆ ಅವರು ತಮ್ಮ ಸಂಪತ್ತಿನ ಬೆಳವಣಿಗೆ ಗಿಂತ ಸಂರಕ್ಷಣೆಗೆ ಆದ್ಯತೆ ನೀಡುತ್ತಾರೆ. ಪ್ರತಿಯೊಂದು ರೂ. ಕೂಡ ಪ್ರತೀ ದಿನ ಬಡ್ಡಿ ಗಳಿಸುತ್ತದೆ ಎಂಬ ಸೂಕ್ಷ್ಮ ಸಂವೇದನೆಯನ್ನು ಅವರು ಕಳೆದುಕೊಂಡಿರುತ್ತಾರೆ. ಅನುತ್ಪಾದಕ ಆಸ್ತಿಗಳಲ್ಲಿ ಅವರ ಸಂಪತ್ತು ಇರುತ್ತದೆ. ಉಳಿತಾಯಗಾರರು ಬ್ಯಾಂಕ್ ಖಾತೆಗಳಲ್ಲಿ ಹಣ ಇಡುವುದು ಸಾಮಾನ್ಯ. ಹೂಡಿಕೆದಾರರು ಹಾಗಲ್ಲ, ಅವರು ತಮ್ಮ ಬಂಡವಾಳವನ್ನು ಚೆನ್ನಾಗಿ ದುಡಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾರೆ. ಎಲ್ಲ ಹೂಡಿಕೆಗಳು ದೀರ್ಘಕಾಲಿಕವಾಗಿ ಇರಬೇಕೆಂದೇನಿಲ್ಲ ಎಂಬುದು ಅವರಿಗೆ ಗೊತ್ತಿರುತ್ತದೆ. ತಮ್ಮ ಹೂಡಿಕೆ ಉತ್ತಮ ಮಟ್ಟದಲ್ಲಿ ಆದಾಯ ಕೊಡಬೇಕು, ಅದಕ್ಕಾಗಿ ಏನು ಮಾಡಬೇಕು ಎಂದು ಹೂಡಿಕೆದಾರರು ಯೋಚಿಸುತ್ತಾರೆ.
Related Articles
ಬದುಕಿನಲ್ಲಿ ಆಗುವಂತೆ ಹೂಡಿಕೆಯ ವಿಚಾರ ದಲ್ಲೂ ಕೆಲವು ಸಲ ಏರಿಳಿತ ಆಗುತ್ತದೆ. ಅದನ್ನು ನಿಭಾಯಿಸಲು ಕಲಿಯಬೇಕು. ಉಳಿತಾಯಗಾರರು ಎಲ್ಲಿ ದಾರಿ ತಪ್ಪುತ್ತೇವೆಯೋ ಎಂಬ ಆತಂಕದಲ್ಲಿ ಇರುತ್ತಾರೆ. ಹೀಗಾಗಿ ಸೇವೆ ಒದಗಿಸುವವರಿಂದ ಅವಾಸ್ತವಿಕ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಹೂಡಿಕೆದಾರರು ತಮ್ಮ ಹೂಡಿಕೆಯ ಆಯ್ಕೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಉತ್ಸುಕರಾಗಿರುತ್ತಾರೆ. ಮತ್ತು ತಮಗೆ ತಾವೇ ಜವಾಬ್ದಾರರಾಗಿರುತ್ತಾರೆ.
Advertisement