ಬೀದರ: ಯುವಕರು ಸಮಯದ ಮೌಲ್ಯಕ್ಕೆ ಹೆಚ್ಚು ಗಮನ ಕೊಡಬೇಕು. ಹೊಸ ವರ್ಷದ ಜೀವನದಲ್ಲಿ ಗುರಿ, ಕನಸುಗಳೊಂದಿಗೆ ಸಾಧನೆ ಮಾಡಬೇಕೆಂಬ ಛಲದೊಂದಿಗೆ ಮುನ್ನುಗ್ಗಬೇಕು ಎಂದು ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ಕರೆ ನೀಡಿದರು.
ನಗರದಲ್ಲಿ ಯುವ ರಾಷ್ಟ್ರ ಸಂಘಟನೆ ಹಮ್ಮಿಕೊಂಡಿದ್ದ ನಶೆ ಮುಕ್ತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ
ಅವರು, ಸಂಸ್ಕೃತಿ, ಪರಂಪರೆಯಲ್ಲಿ ದೇಶ ಶ್ರೀಮಂತಿಕೆ ಹೊಂದಿದ್ದು, ನಾವು ಅಪಾರ ಸಂಪತ್ತನ್ನು ಹೊಂದಿದ್ದೇವೆ. ಆದರೆ, ನಾವು ಅದರ ಬಳಕೆ ಮಾಡಿಕೊಳ್ಳದೇ ಉದಾಸೀನತೆ ತೋರಿಸುತ್ತಿದ್ದೇವೆ. ಯುವ ಜನರು ಇಂದು ದುಶ್ಚಟಗಳ ದಾಸರಾಗಿ ತಮ್ಮ ಅಮೂಲ್ಯವಾದ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅವರಲ್ಲಿ ಅರಿವು ಮೂಡಿಸುವ ದಿಸೆಯಲ್ಲಿ ಸಂಘಟನೆ ನಶೆ ಮುಕ್ತ ಕಾರ್ಯಕ್ರಮ ಸಂಘಟಿಸಿದೆ ಎಂದು ಹೇಳಿದರು.
ಯುವ ರಾಷ್ಟ್ರ ಸಂಸ್ಥಾಪಕ ಅಂಬ್ರೇಶ ಮಾತನಾಡಿ, ದೇಶವನ್ನು ಆಳಿದ ಬ್ರಿಟಿಷರು ತಮ್ಮ ಸಂಸ್ಕೃತಿ, ಸಂಪ್ರದಾಯವನ್ನು ಇಲ್ಲಿ ಬಿಟ್ಟು ಹೋದರು. ಭಾರತೀಯ ಸಂಸ್ಕೃತಿ, ಪರಂಪರೆ ಇಂದಿಗೂ ಜೀವಂತವಾಗಿದೆ. ಯುವಕರು ಕೆಟ್ಟ ಚಟಗಳನ್ನ ತೊರೆದು ಆರೋಗ್ಯವಂತ ಜೀವನ ನಡೆಸಬೇಕು. ಈ ನಿಟ್ಟಿನಲ್ಲಿ ಸಂಘಟನೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಜಗದೀಶ ಬಿರಾದಾರ ಮಾತನಾಡಿ, ಭವ್ಯ ಭಾರತದ ನಿರ್ಮಾಣ ಮಾಡಬೇಕಿರುವ ಯುವ ಪಡೆಯೇ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು. ಜಿಪಂ ಸದಸ್ಯ ಗುಂಡುರೆಡ್ಡಿ, ಪಿಎಸ್‌ಐ ಸಂಗಮೇಶ ಘಂಟಿ, ಗುತ್ತಿಗೆದಾರ ಗುರುನಾಂಥ್ ಕೋಳ್ಳೂರು, ವಿರೂಪಾಕ್ಷ ಗಾದಗಿ, ರವಿ ಸ್ವಾಮಿ, ಸಂದೀಪ ಶೆಟ್ಟಿಗಾರ, ಚಂದ್ರಕಾಂತ ಹಿರೇಮಠ ಮತ್ತಿತರರು ಇದ್ದರು.