Advertisement

ಗ್ರಾಹಕ ಸುರಕ್ಷತೆಯಲ್ಲಿ  ಜವಾಬ್ದಾರಿಗಳ ಅರಿವಿರಲಿ 

06:00 AM Mar 25, 2018 | |

ಮಾರುಕಟ್ಟೆಯಲ್ಲಿ ಗ್ರಾಹಕ ತನ್ನ ಹಕ್ಕು ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿವಳಿಕೆಯನ್ನು ಹೊಂದಿರಬೇಕಾದ್ದು ಅವಶ್ಯಕ. ತಾನು ಮೋಸ ಹೋದಂತಹ ಅಥವಾ ಶೋಷಣೆಗೊಳಗಾದ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದರ ಅರಿವು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರಬೇಕು. 

Advertisement

1962ರಲ್ಲಿ ಅಮೆರಿಕದ ಅಧ್ಯಕ್ಷ ಜಾನ್‌ ಎಫ್. ಕೆನಡಿ ಗ್ರಾಹಕರ ಹಕ್ಕುಗಳ ವಿಧೇಯಕವನ್ನು ಸ್ವೀಕರಿಸುವ ಸಮಯದಲ್ಲಿ ಗ್ರಾಹಕರೇ ಮಾರುಕಟ್ಟೆಯ ಪ್ರಮುಖ ಭಾಗವಾಗಿದ್ದರೂ ಅವರನ್ನು ಮಾರುಕಟ್ಟೆಯಲ್ಲಿ ನಿರಂತರವಾಗಿ ಶೋಷಿಸಲಾಗುತ್ತಿದೆ. ಗ್ರಾಹಕರ ಸುರಕ್ಷತೆಯ ವಿಚಾರದಲ್ಲಿ ಮಾರುಕಟ್ಟೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಿದ್ದರು. ಅದಾದ ಬಳಿಕ ದಶಕಗಳೇ ಸರಿದಿವೆ. ಗ್ರಾಹಕರ ಸಂರಕ್ಷಣೆಯನ್ನು ಗುರಿಯಾಗಿರಿಸಿಕೊಂಡು ನೂರಾರು ಕಾನೂನು ನ್ಯಾಯಾಲಯಗಳು, ಸಂಘಗಳು ಸ್ಥಾಪಿತವಾಗಿವೆ. ಹೋರಾಟಗಳು ನಡೆದಿವೆ. ಆದರೆ ಅವರಂದು ಆಡಿದ್ದ ಅದೇ ಮಾತು ಈ ಹೊತ್ತಿಗೂ ಅನ್ವಯವಾಗುತ್ತಿರುವುದು ನಿಜಕ್ಕೂ ವಿಪರ್ಯಾಸ. 

ನಮಗೆಲ್ಲಾ ಗೊತ್ತಿರುವ ಹಾಗೆ ಗ್ರಾಹಕರ ಹಕ್ಕು ಮತ್ತು ಸುರಕ್ಷತೆಯ ಸಲುವಾಗಿ ಮಾರ್ಚ್‌ 15ನ್ನು ವಿಶ್ವ ಗ್ರಾಹಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೆ ಭಾರತದಲ್ಲಿ ಡಿ.24ರಂದು ರಾಷ್ಟ್ರೀಯ ಗ್ರಾಹಕ ದಿನವನ್ನು ಆಚರಿಸಲಾಗುತ್ತದೆ. ಈ ಎರಡೂ ಗ್ರಾಹಕರ ದಿನಾಚರಣೆ ಎನ್ನುವಂಥದ್ದು ಕೇವಲ ತೋರಿಕೆಗೆ ಮಾತ್ರ ಸೀಮಿತ ಎನ್ನುವಂತಾಗಿ ಬಿಟ್ಟಿರುವುದು ಬೇಸರದ ಸಂಗತಿ. ಈ ದಿನಗಳಂದು ಅಲ್ಲಲ್ಲಿ ಒಂದಷ್ಟು ಗ್ರಾಹಕ ಜಾಗೃತಿಯ ಕಾರ್ಯಕ್ರಮಗಳು ನಡೆಯುತ್ತವೆ ಹಾಗೂ ಪತ್ರಿಕೆಗಳಲ್ಲಿ ವರದಿಯಾಗುತ್ತದೆ ಎನ್ನೋದು ಬಿಟ್ಟರೆ ನಿಜಕ್ಕೂ ಗ್ರಾಹಕರಿಗೆ ತಲುಪಬೇಕಾದ ಮಾಹಿತಿ ಮತ್ತು ಎಚ್ಚರಿಕೆ ಇನ್ನೂ ತಲುಪುತ್ತಿಲ್ಲ ಎನ್ನುವುದು ಸತ್ಯ. ಹಾಗಂತ ಮೊದಲಿನ ದಿನಗಳಿಗೆ ಹೋಲಿಸಿದರೆ ಗ್ರಾಹಕರಲ್ಲಿ ಒಂದಷ್ಟು ಜಾಗೃತಿ ಮೂಡಿರುವುದನ್ನು ಖಂಡಿತ ಒಪ್ಪಿಕೊಳ್ಳಬೇಕಾಗುತ್ತದೆ. ಅದೇ ಹೊತ್ತಿನಲ್ಲಿ ಎಲ್ಲರಲ್ಲೂ ಈ ಜಾಗೃತಿ ಮೂಡಿಲ್ಲ ಎನ್ನುವುದು ಮುಖ್ಯವಾಗುತ್ತದೆ.

 ಅಷ್ಟಕ್ಕೂ ಗ್ರಾಹಕ ಎಂದರೆ ಯಾರು? ಮಾರುಕಟ್ಟೆಯಲ್ಲಿ ಹಣ ಅಥವಾ ಹಣದ ರೂಪವನ್ನು ನೀಡಿ ಮಾರಾಟಕ್ಕಲ್ಲದೆ ತನ್ನ ಅಥವಾ ಇತರರ ಉಪಯೋಗಕ್ಕಾಗಿ ವಸ್ತು ಅಥವಾ ಸೇವೆಗಳನ್ನು ಖರೀದಿಸುವ ವ್ಯಕ್ತಿಯನ್ನು ಗ್ರಾಹಕ ಎನ್ನುತ್ತಾರೆ. ಇಂತಹ ಗ್ರಾಹಕ ಕಲಬೆರಕೆ, ಅವಧಿ ಮೀರಿದ ಉತ್ಪನ್ನ, ಕಾಳಸಂತೆ, ಅಗತ್ಯಕ್ಕಿಂತ ಅಧಿಕ ರಸಾಯನಿಕಗಳ ಬಳಕೆ, ಉತ್ಪ್ರೇಕ್ಷಿತ ಜಾಹೀರಾತುಗಳು, ನಕಲಿ ಉತ್ಪನ್ನಗಳು, ಆಕ್ರಮ ದಾಸ್ತಾನು ಇತ್ಯಾದಿಗಳ ಮೂಲಕ ನಿತ್ಯನಿರಂತರವಾಗಿ ಶೋಷಣೆಗೆ ಒಳಗಾಗುತ್ತಲೇ ಇದ್ದಾನೆ. ಗ್ರಾಹಕರಲ್ಲಿ ಗ್ರಾಹಕ ಹಕ್ಕು ಮತ್ತು ಕರ್ತವ್ಯಗಳ ತಿಳಿವಳಿಕೆಯ ಕೊರತೆ ಹಾಗೂ ಅವರು ಸಂಘಟಿತರಾಗದೆ ಇರುವುದು ಈ ಎಲ್ಲ ಶೋಷಣೆಗೂ ಕುಮ್ಮಕ್ಕು ನೀಡುತ್ತದೆ. ಮಾರುಕಟ್ಟೆಯಲ್ಲಿ ಗ್ರಾಹಕ ತನ್ನ ಹಕ್ಕು ಮತ್ತು ಜವಾಬ್ದಾರಿಗಳ ಬಗ್ಗೆ ತಿಳಿವಳಿಕೆಯನ್ನು ಹೊಂದಿರಬೇಕಾದ್ದು ಅವಶ್ಯಕ. ತಾನು ಮೋಸ ಹೋದಂತಹ ಅಥವಾ ಶೋಷಣೆಗೊಳಗಾದ ಸಂದರ್ಭದಲ್ಲಿ ಏನು ಮಾಡಬೇಕು ಎನ್ನುವುದರ ಅರಿವು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರಬೇಕು. ಇಂತಹ ಶೋಷಣೆಗಳನ್ನು ತಡೆಗಟ್ಟಲೆಂದೇ 1986ರಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆ ಯನ್ನು ಜಾರಿಗೆ ತರಲಾಗಿದೆ ಮತ್ತು ಆ ಕಾಯಿದೆಯ ಮೂಲಕ ಗ್ರಾಹಕರಿಗೆಂದೆ ವಿಶೇಷವಾಗಿ ಆರು ಹಕ್ಕುಗಳನ್ನು ನೀಡಲಾಗಿದೆ. 

ಸುರಕ್ಷತೆಯ ಹಕ್ಕು: ಗ್ರಾಹಕರು ತಮ್ಮ ಆರೋಗ್ಯ ಅಥವಾ ಜೀವಕ್ಕೆ ಹಾನಿ ಯುಂಟು ಮಾಡುವ ಉತ್ಪನ್ನ ಅಥವಾ ನ್ಯೂನತೆಗಳನ್ನು ಒಳಗೊಂಡ ಉತ್ಪನ್ನಗಳಿಂದ ರಕ್ಷಣೆಯನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ

Advertisement

ಮಾಹಿತಿ ಪಡೆಯುವ ಹಕ್ಕು: ಗ್ರಾಹಕರು ತಾವು ಖರೀದಿಸಲು ಇಚ್ಚಿಸುವ ಯಾವುದೇ ವಸ್ತುವಿನ ಕುರಿತಾದ ಸಂಪೂರ್ಣ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ

ಆಯ್ಕೆಯ ಹಕ್ಕು: ಗ್ರಾಹಕರು ತಮಗೆ ಇಷ್ಟವಾದ ವಸ್ತುಗಳನ್ನು ಮಾತ್ರ ಖರೀದಿ ಸುವ ಹಕ್ಕನ್ನು ಹೊಂದಿದ್ದಾರೆ

ಆಲಿಸುವ ಹಕ್ಕು: ಗ್ರಾಹಕರು ತಮಗಾದ ಶೋಷಣೆ ಅಥವಾ ಅನ್ಯಾಯದ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸುವ ಹಕ್ಕನ್ನು ಹೊಂದಿದ್ದಾರೆ ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವ ಹಕ್ಕು: ಗ್ರಾಹಕರು ತಾವು ಖರೀದಿಸಿದ ವಸ್ತುಗಳಲ್ಲಿ ದೋಷಗಳಿದ್ದಲ್ಲಿ ಅಥವಾ ಸೇವೆಯಲ್ಲಿ ನ್ಯೂನತೆ ಗಳಿದ್ದಲ್ಲಿ ಅದಕ್ಕೆ ತಕ್ಕ ಪರಿಹಾರವನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ

ಗ್ರಾಹಕ ಶಿಕ್ಷಣದ ಹಕ್ಕು : ಗ್ರಾಹಕರು ತಮ್ಮ ಹಕ್ಕು ಮತ್ತು ಕಾನೂನುಗಳ ಬಗೆಗೆ ಹಾಗು ಖರೀದಿಯ ಸಂದರ್ಭದಲ್ಲಿ ವಸ್ತುಗಳ ಬಗೆಗೆ ಸಂಪೂರ್ಣ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿದ್ದಾರೆ  ಕಾನೂನು ಬದ್ಧವಾಗಿ ಕೊಡಲ್ಪಟ್ಟ ಇಷ್ಟೆಲ್ಲಾ ಹಕ್ಕುಗಳ ಜೊತೆಗೆ ಗ್ರಾಹಕನಿಗೆ ವಿಶ್ವ ಸಂಸ್ಥೆಯು ಮೂಲಭೂತ ಅವಶ್ಯಕತೆಗಳನ್ನು ಪಡೆಯುವ ಮತ್ತು ಮಾಲಿನ್ಯಮುಕ್ತ ಪರಿಸರವನ್ನು ಹೊಂದುವ ಎರಡು ಹಕ್ಕುಗಳನ್ನು ನೀಡಿದೆ. ಈ ಎಲ್ಲಾ ಹಕ್ಕುಗಳ ಜೊತೆಗೆ ಗ್ರಾಹಕನು ಕೆಲವೊಂದು ಜವಾಬ್ದಾರಿಗಳನ್ನು ಹೊಂದಿರುತ್ತಾನೆ ಎನ್ನುವುದು ಗಮನದಲ್ಲಿರಬೇಕು. 

ಮುಖ್ಯವಾಗಿ ಗಾಹಕನಿಗೆ ತನ್ನ ಹಕ್ಕುಗಳ ಅರಿವು ಇರಬೇಕು. ವಸ್ತುಗಳ ಗುಣಮಟ್ಟದ ಅರಿವಿರಬೇಕು. ಉದಾಹರಣೆಗೆ ಅಗ್‌ಮಾರ್ಕ್‌, ಐಎಸ್‌ಐ, ಹಾಲ್‌ಮಾರ್ಕ್‌ ಇತ್ಯಾದಿಗಳ ಕುರಿತು ತಿಳಿವಳಿಕೆ ಇರಬೇಕು. ಶೋಷಣೆಗೆ ಒಳಗಾದ ಸಂದರ್ಭದಲ್ಲಿ ದೂರು ನೀಡಲು ಅವನು ಸಿದ್ಧನಿರಬೇಕು. ಸಣ್ಣ ಮೊತ್ತ ಎನ್ನುವ ಕಾರಣಕ್ಕೆ ದೂರು ನೀಡದೆ ಇರಬಾರದು. ಉತ್ಪ್ರೇಕ್ಷಿತ ಜಾಹೀರಾತುಗಳನ್ನು ನೋಡಿ ಮೋಸ ಹೋಗಬಾರದು. ವಸ್ತುಗಳನ್ನು ಖರೀದಿಸಿದಾಗ ಕಡ್ಡಾಯವಾಗಿ ರಶೀದಿ ಪಡೆದುಕೊಳ್ಳಬೇಕು. ವಸ್ತುಗಳನ್ನು ಎಚ್ಚರದಿಂದ ಪರಿಶೀಲಿಸಿ ಖರೀದಿಸಬೇಕು. ಕಾಳಸಂತೆಯಲ್ಲಿ ಖರೀದಿ ಮಾಡಬಾರದು ಮತ್ತು ನಕಲಿ ಪದಾರ್ಥಗಳನ್ನು ಖರೀದಿಸಬಾರದು.ಅವಸರದಲ್ಲಿ ಖರೀದಿ ಒಳ್ಳೆಯದಲ್ಲ ಎನ್ನುವುದು ಕೂಡ ಗಮನದಲ್ಲಿರಲಿ.

ಅಂದಹಾಗೆ ಹತ್ತಿರದಲ್ಲಿನ ಗ್ರಾಹಕ ನ್ಯಾಯಾಲಯಗಳ ಬಗೆಗೆ ನಾವು ಮಾಹಿತಿ ಹೊಂದಿರಬೇಕು. ದೂರು ಕೊಡುವುದು ಹೇಗೆ ಎನ್ನುವ ಜಿಜ್ಞಾಸೆ ಬೇಕಾಗಿಲ್ಲ. ಗ್ರಾಹಕನ (ದೂರುದಾರ) ಹೆಸರು ವಿಳಾಸ, ಕಕ್ಷಿದಾರನ ಹೆಸರು ವಿಳಾಸ ಮತ್ತಿತರ ವಿವರಗಳು, ಖರೀದಿಗೆ ಸಂಬಂಧಿಸಿದ ಶೋಷಣೆ ಅಥವಾ ನ್ಯೂನತೆಯ ಬಗ್ಗೆ ಮಾಹಿತಿ, ದೂರಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಅಪೇಕ್ಷಿಸುವ ಪರಿಹಾರದ ರೂಪ ಇತ್ಯಾದಿಗಳನ್ನು ಒಂದು ಖಾಲಿ ಹಾಳೆಯಲ್ಲಿ ವಿವರವಾಗಿ ಬರೆದು ದೂರು ನೀಡಿದರೆ ಸಾಕು.  ಗ್ರಾಹಕ ನ್ಯಾಯಲಯಗಳು ಬಹಳ ಚೆನ್ನಾಗಿ ಹೋರಾಟವನ್ನು ಕಾಯ್ದು ಕೊಳುತ್ತವೆ. ಅವುಗಳು ಗ್ರಾಹಕರ ಅನ್ಯಾಯಗಳಿಗೆ, ಶೋಷಣೆಗಳಿಗೆ ಸೂಕ್ತ ಪರಿಹಾರ ಒದಗಿಸಿದ ಸಹಸ್ರಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಹಾಗಾಗಿ ವಸ್ತು ತಯಾರಿಕಾ ಅಥವಾ ಸೇವೆ ನೀಡುವ ಕಂಪೆನಿಗಳಿಂದ, ಮಾರಾಟ ಗಾರರಿಂದ/ ಮಧ್ಯವರ್ತಿಗಳಿಂದ ನಮಗೆ ಅನ್ಯಾಯವಾಗಿದೆ ವಂಚನೆ ಯಾಗಿದೆ ಅನ್ನಿಸಿದ್ದಲ್ಲಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗುವ‌ ಕೆಲಸವನ್ನು ನಾವು ಮಾಡಬೇಕು. ಗ್ರಾಹಕ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈ ಕುರಿತು ಮಾಹಿತಿ ಮತ್ತು ಜ್ಞಾನವನ್ನು ಪಸರಿಸುವಂಥ ಕೆಲಸ ಆಗಬೇಕಾದ್ದು ಇಂದಿನ ತುರ್ತು ಅಗತ್ಯ.

ನಮಗಾದ ಅನ್ಯಾಯದ ಬಗ್ಗೆ “ಹೋಗಲಿ…’ ಎಂದು ಉದಾಸೀನ ಮಾಡಿದರೆ ಅದು ಮಾರಾಟಗಾರರಿಗೆ ಮತ್ತಷ್ಟು ಗ್ರಾಹಕರನ್ನು ಶೋಷಿಸಲು ಪ್ರೋತ್ಸಾಹ ಕೊಡುತ್ತದೆ ಎನ್ನುವುದು ನೆನಪಿರಲಿ.

ನರೇಂದ್ರ ಎಸ್‌. ಗಂಗೊಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next