ದೇವನಹಳ್ಳಿ: ಶಾಲಾ ಹಂತದಿಂದಲೇ ಮರ ಗಿಡಗಳನ್ನು ಬೆಳೆಸುವುದರ ಮೂಲಕ ಪರಿಸರದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.
ತಾಲೂಕಿನ ವಿಶ್ವನಾಥಪುರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ವತಿಯಿಂದ ಪೌಷ್ಟಿಕ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲಾ ಹಂತದಲ್ಲೇ ಪರಿಸರ ಜಾಗೃತಿ:ಜಿಪಂ ಸಿಇಒ ಕಳೆದ ಆರು ತಿಂಗಳಿನಿಂದ ಶ್ರಮವಹಿಸಿ ಶಾಲೆ, ಹಾಸ್ಟೆಲ್, ಅಂಗನವಾಡಿ ಇತರೆ ಸರ್ಕಾರಿ ಜಾಗಗಳನ್ನು ಗುರ್ತಿಸಿ ಪೌಷ್ಟಿಕ ಆಹಾರವುಳ್ಳ ತರಕಾರಿ, ಇತರೆ ಸಸಿ ಹಾಕುವುದರ ಮೂಲಕ
ಶಾಲಾ ಹಂತದಲ್ಲಿಯೇ ಪರಿಸರದ ಜಾಗೃತಿ ಯನ್ನು ಮಕ್ಕಳಲ್ಲಿ ತುಂಬಲು ಅನುಕೂಲ ವಾಗುತ್ತಿದೆ. ಪೌಷ್ಟಿಕ ಆಹಾರ ತಿನ್ನುವುದರಿಂದ ಆರೋಗ್ಯವಂತ ಮಕ್ಕಳನ್ನು ಕಾಣಬಹುದು. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಮಳೆಕೊಯ್ಲು ಅಳವಡಿಸಿಕೊಳ್ಳಿ: ಮಳೆ ಕೊಯ್ಲು ಬಯಲು ಸೀಮೆ ಜನರಿಗೆ ಮಳೆ ನೀರು ಸಂಗ್ರಹ ವರದಾನವಾಗಲಿದೆ. ಜನ ಬರಗಾಲದ ಸ್ಥಿತಿ ಅನುಭವಿಸುತ್ತಿದ್ದಾರೆ. ಪ್ರತಿಯೊಬ್ಬರು ಮಳೆಕೊಯ್ಲು ಮಾಡಿದರೆ ಅನುಕೂಲ ವಾಗುತ್ತದೆ ಎಂದರು. 6 ತಿಂಗಳ ಹಿಂದೆ ಸಭೆ:ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಲತಾ ಮಾತನಾಡಿ, ರಾಜ್ಯದಲ್ಲಿಯೇ ಮೊದಲ ಬಾರಿಗೆ ಶಾಲೆ, ಹಾಸ್ಟೆಲ್, ಅಂಗನವಾಡಿ ಜಾಗಗುರ್ತಿಸಲಾಗಿದೆ. 1669 ಶಾಲೆಗಳಲ್ಲಿ ನುಗ್ಗೆ, ಕರಿಬೇವು, ಸೀಬೆ, ಮಾವು, ಸೀತಾಫಲ ಹಾಗೂ ತರಕಾರಿ ಸಸಿ ನೀಡಿ ಮಕ್ಕಳಿಗೆ ಸಾವಯವ ಪೋಷಕಾಂಶಗಳ ಆಹಾರ ದೊರೆಯುವ ನಿಟ್ಟಿನಲ್ಲಿ ಮಾಡಲಾಗುತ್ತಿದೆ. 6 ತಿಂಗಳ ಹಿಂದೆಯೇ ಸಭೆ ಮಾಡಿ ಎಷ್ಟು ಗಿಡಗಳ ಬೇಡಿಕೆ ಇದೆ ಎಂಬುವುದರ ಮಾಹಿತಿಯನ್ನು ಪಡೆದು ತೋಟಗಾರಿಕೆ ಇಲಾಖೆ ಮೂಲಕ ಸಸಿ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ತಯಾರಿ: ಎಸ್ಸೆಸ್ಸೆಲ್ಸಿಯಲ್ಲಿ ಈ ಬಾರಿ ಮೂರನೇ ಸ್ಥಾನಕ್ಕೆ ಬಂದಿದ್ದೇವೆ. ಈಗಿನಿಂದಲೇ ಎಸ್ಸೆಸ್ಸೆಲ್ಸಿಗಾಗಿ ಮಕ್ಕಳನ್ನು ತಯಾರು ಮಾಡಿ ಮೊದಲ ಸ್ಥಾನಕ್ಕೆ ಬರಲು ಎಲ್ಲಾ ರೀತಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. ಜಿಪಂ ಅಧ್ಯಕ್ಷೆ ಜಯಮ್ಮ ಮಾತನಾಡಿ, ಇದೊಂದು ಉತ್ತಮ ಯೋಜನೆಯಾಗಿದೆ. ಕೆಡಿಪಿ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿ ಸಲಾಗಿತ್ತು. ತೋಟಗಾರಿಕೆ ಇಲಾಖೆ ಉತ್ತಮ ಕೆಲಸಕ್ಕೆ ಮುಂದಾಗಿದ್ದು ಗಾಳಿ ಉತ್ತಮ ಪರಿಸರ ನಿರ್ಮಾಣವಾಗುತ್ತದೆ ಎಂದರು. ಈ ವೇಳೆ ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ, ತಾಪಂ ಅಧ್ಯಕ್ಷೆ ಚೈತ್ರಾ, ಸದಸ್ಯೆ ಶೈಲಜಾ, ಕಾಲೇಜು ಅಭಿವೃದ್ಧಿ ಉಪಾಧ್ಯಕ್ಷ ಜಗದೀಶ್, ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ ಮಹಾಂತೇಶ್ ಮುರುಗೋಡು, ಪ್ರಭಾರ ತಾಲೂಕು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಸುಬ್ಬಣ್ಣ, ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಂಶುಪಾಲೆ ವಾಣಿಶ್ರೀ, ಮುಖ್ಯ ಶಿಕ್ಷಕ ಬಸವರಾಜ್, ದೈಹಿಕ ಶಿಕ್ಷಣ ಶಿಕ್ಷಕ ಸುಬಾನ್‌ಸಾಬ್ ಮತ್ತಿತರರಿದ್ದರು