Advertisement

ಡೆಂಘೀ ಜ್ವರ ಹರಡದಂತೆ ಮುನ್ನೆಚ್ಚರಿಕೆ ವಹಿಸಿ

08:55 AM May 27, 2019 | Suhan S |

ಹಾವೇರಿ: ಮಳೆ ಆರಂಭಕ್ಕೂ ಮುನ್ನವೇ ಡೆಂಘೀ ಜ್ವರ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆರೋಗ್ಯ, ಶಿಕ್ಷಣ, ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಆಡಳಿತಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಲೀಲಾವತಿ ಸೂಚಿಸಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ರಾಷ್ಟ್ರೀಯ ಡೆಂಘೀ ನಿಯಂತ್ರಣ ಮುನ್ನೆಚ್ಚರಿಕೆ ಕುರಿತಂತೆ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೂನ್‌ ಮತ್ತು ಅಕ್ಟೋಬರ್‌ ತಿಂಗಳು ಡೆಂಘೀ ಹರಡುವಿಕೆಗೆ ಪ್ರಶಸ್ತ ಕಾಲವಾಗಿದೆ. ಶುದ್ಧ ನೀರಿನ ನಿಲ್ಲುವಿಕೆಯಿಂದ ಡೆಂಘೀ ಜ್ವರಕ್ಕೆ ಕಾರಣವಾಗುವ ಈಡೀಸ್‌ ಈಜಿಪ್ಟ್ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಸೊಳ್ಳೆಗಳ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಪಾತ್ರ ಪ್ರಮುಖವಾಗಿವೆ ಎಂದು ಹೇಳಿದರು.

ಡೆಂಘೀ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇಲ್ಲ. ಮುನ್ನೆಚ್ಚರಿಕೆ ಕ್ರಮದಿಂದ ಡೆಂಘೀ ನಿಯಂತ್ರಣ ಮಾಡಬಹುದು. ಜ್ವರದ ಲಕ್ಷಣಗಳು ಕಂಡುಬಂದರೆ ಯಾವುದೇ ಗಾಬರಿಗೆ ಒಳಗಾಗದೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಳೆ ನೀರು, ನಳದ ನೀರು ನಿಲ್ಲದಂತೆ ಕ್ರಮವಹಿಸಬೇಕು. ಸಂಗ್ರಹಿಸಿಟ್ಟ ಶುದ್ಧ ನೀರು ಪದೇ ಪದೇ ಬದಲಾಯಿಸಬೇಕು. ನಿಂತ ಶುದ್ಧ ನೀರಿನಲ್ಲಿ ಹಗಲು ವೇಳೆಯಲ್ಲಿ ಡೆಂಘೀ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಸೊಳ್ಳೆಗಳ ಸಂತಾನಹರಣವೇ ಡೆಂಘೀ ನಿಯಂತ್ರಣಕ್ಕೆ ಮುಖ್ಯವಾಗುತ್ತದೆ. ಈ ಕುರಿತಂತೆ ಸಮುದಾಯದ ಜನರಿಗೆ ವ್ಯಾಪಕ ಅರಿವು ಮತ್ತು ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.

ಶಾಲೆ ಮತ್ತು ಅಂಗನವಾಡಿ ಪ್ರದೇಶದ ಸುತ್ತಮುತ್ತ ಸೊಳ್ಳೆಮುಕ್ತ ವಾತಾವರಣ ಕಲ್ಪಿಸುವುದು, ಶಾಲಾ ಮಕ್ಕಳಿಗೆ ಮಳೆಗಾಲದ ಸಂದರ್ಭದಲ್ಲಿ ಮೈತುಂಬ ಉಡುಪು ಧರಿಸುವಂತೆ ಕ್ರಮವಹಿಸುವುದು, ಶಾಲಾ ಮಕ್ಕಳ ಮೂಲಕ ಪೋಷಕರಿಗೆ ಡೆಂಘೀ ಮುನ್ನೆಚ್ಚರಿಕೆ ಕುರಿತಂತೆ ಜಾಗೃತಿ ಮೂಡಿಸಲು ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಕ್ರಮವಹಿಸಬೇಕು. ಈ ಕುರಿತಂತೆ ಶಿಕ್ಷಣ ಇಲಾಖಾ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಸಭೆ ಕರೆದು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

Advertisement

ಕಲ್ಲು ಕ್ವಾರಿಗಳಲ್ಲಿ ಮಳೆಬಿದ್ದು ನೀರು ಸಂಗ್ರಹವಾಗಿ ಸೊಳ್ಳೆ ಉತ್ಪಾದನೆಯಾಗಿ ಡೆಂಘೀ ಹರಡುವಿಕೆಗೆ ಕಾರಣವಾಗುತ್ತದೆ. ಡೆಂಘೀ ಮುಕ್ತ ಕ್ವಾರಿಗಳನ್ನಾಗಿ ಪರಿವರ್ತಿಸಲು ಹಾಗೂ ತಮ್ಮ ಕಲ್ಲು ಗಣಿಗಳಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಸೊಳ್ಳೆಪರದೆ ವಿತರಣೆ ಸೇರಿದಂತೆ ಹಲವು ಮುಂಜಾಗ್ರತಾ ಕ್ರಮಕೈಗೊಳ್ಳಲು ಸೂಚಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ ಹಾಗೂ ಗ್ರಾಪಂಗಳಲ್ಲಿ ಘನ ತ್ಯಾಜ್ಯವಸ್ತುಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಗಟಾರಗಳಲ್ಲಿ ನೀರು ನಿಲ್ಲದಂತೆ ಕ್ರಮವಹಿಸಬೇಕು. ನೀರಿನ ಪೈಪ್‌ಗ್ಳನ್ನು ಸಕಾಲಕ್ಕೆ ದುರಸ್ತಿಗೊಳಿಸಬೇಕು. ಮಳೆ ನೀರು ರಸ್ತೆ ತಗ್ಗುಗಳಲ್ಲಿ ನಿಲ್ಲದಂತೆ ಕ್ರಮವಹಿಸಬೇಕು. ಸಕಾಲಕ್ಕೆ ನೀರಿನ ಸಂಗ್ರಹ ತೊಟ್ಟಿಗಳನ್ನು ಸ್ವಚ್ಛ ಮಾಡಬೇಕು. ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳ ಮೂಲಕ ಡೆಂಘೀ ನಿಯಂತ್ರಣಕ್ಕೆ ಆದ್ಯತೆ ಮೇಲೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಕೃಷಿ ಹೊಂಡಗಳಲ್ಲಿ ಲಾರ್ವಾ ಮೀನು ಬಿಡುವುದು ಹಾಗೂ ಲಾರ್ವಾ ಮೀನುಗಳ ಸಂಗ್ರಹಣೆ ಮತ್ತು ಸಂತಾನೋತ್ಪತ್ತಿಗೆ ಆದ್ಯತೆ ನೀಡುವಂತೆ ಕೃಷಿ ಮತ್ತು ಮೀನುಗಾರಿಕಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಆಸ್ಪತ್ರೆ ಒಳಗೊಂಡಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಳ ರೋಗಿಗಳಿಗೆ ಕಡ್ಡಾಯವಾಗಿ ಸೊಳ್ಳೆ ಪರೆದಗಳ ವಿತರಣೆ, ಶಾಲಾ-ಕಾಲೇಜುಗಳ ಶಿಕ್ಷಕರಿಗೆ, ಪಿಡಿಒ ಹಾಗೂ ಗ್ರಾಪಂಸದಸ್ಯರಿಗೆ ಡೆಂಘೀ ಕುರಿತಂತೆ ನಿರಂತರ ಆರೋಗ್ಯ ಶಿಕ್ಷಣ ನೀಡಬೇಕು. ಲಾರ್ವಾ ಸಮೀಕ್ಷೆ ಹಾಗೂ ಸೊಳ್ಳೆ ಉತ್ಪತ್ತಿಗಳ ನಿರ್ಮೂಲನೆ ಕುರಿತಂತೆ ಮೇಲ್ವಿಚಾರಣೆಗೆ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ನಿರುಪಯುಕ್ತ ಟಯರ್‌ ಹಾಗೂ ಎಳೆ ನೀರಿನ ಚಿಪ್ಪಿನಲ್ಲಿ ಮಳೆ ನೀರು ಸಂಗ್ರಹವಾಗಿ ಡೆಂಘೀ ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಈ ಕುರಿತಂತೆ ಸೂಕ್ತ ನಿರ್ವಹಣೆಗೆ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಕಂಟ್ರೋಲರ್‌ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಕ್ತ ನಿರ್ದೇಶನ ನೀಡಿದರು.

ಜಿಲ್ಲಾ ರೋಗವಾಹನ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಸುಹಿಲ್ ಹರವಿ ಸಭೆಗೆ ಮಾಹಿತಿ ನೀಡಿ, ಡೆಂಘೀ ವೈರಸ್‌ನಿಂದ ಜ್ವರ ಹರಡುತ್ತದೆ. ನಾಲ್ಕು ಬಗೆಯ ವೈರಸ್‌ಗಳು ಡೆಂಘೀ ಕಾರಣವಾಗಿವೆ. ಈಡೀಸ್‌ ಈಜಿಪ್ತಿ ಸೊಳ್ಳೆ ಕಚ್ಚುವುದರಿಂದ ರೋಗ ಹರಡುತ್ತದೆ. ರೋಗವಾಹಕವಾದ ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲ ಇಲಾಖೆಗಳು ಮುನ್ನೆಚ್ಚರಿಕೆ ವಹಿಸಬೇಕು. ಜೂನ್‌ನಿಂದ ಅಕ್ಟೋಬರ್‌ವರೆಗೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ ಎಂದು ವಿವರಿಸಿದರು.

ವಿಪರೀತ ಜ್ವರ, ದೇಹದ ಮೇಲೆ ಸಣ್ಣ ಸಣ್ಣ ಗಂಧೆಗಳು, ಕಣ್ಣುಗಳ ಹಿಂಭಾಗ, ಮಾಂಸಖಂಡ ಹಾಗೂ ಕೀಲುಗಳಲ್ಲಿ ವಿಪರಿತ ನೋವು, ತಲೆನೋವು, ಬಾಯಿ, ಮೂಗು, ವಸಡುಗಳಿಂದ ರಕ್ತಸ್ರಾವ ಡೆಂಘೀ ಲಕ್ಷಣವಾಗಿವೆ. ರಕ್ತ ಪರೀಕ್ಷೆ ಮಾಡಿಸುವುದರ ಮೂಲಕ ರೋಗ ಪತ್ತೆ ಮಾಡಬಹುದು ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಘವೇಂದ್ರಸ್ವಾಮಿ ಹಾಗೂ ವಿವಿಧ ತಾಲೂಕು ಆರೋಗ್ಯಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಣ, ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next