ಬೀದರ: ಇತ್ತೀಚೆಗೆ ದಿನೇದಿನೇ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆಯು ಸಾಕಷ್ಟು ನಿಗಾವಹಿಸಿದೆ. ಬರೀ ಪೊಲೀಸ್ ಇಲಾಖೆಯಷ್ಟೇ ಈ ಬಗ್ಗೆ ನಿಗಾ ವಹಿಸಿದರೆ ಸಾಲದು ಪ್ರತಿ ಇಲಾಖೆಗಳ ಅಧಿಕಾರಿಗಳು, ಸೈಬರ್ ದಾಳಿಯ ಈ ಬಗ್ಗೆ ಎಚ್ಚೆತ್ತುಕೊಂಡು ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಹೇಳಿದರು.
ಕೇಂದ್ರ ಸರ್ಕಾರದ ಎನ್‌ಇಜಿಡಿ ಸಾಮರ್ಥ್ಯಾಭಿವೃದ್ಧಿ ಯೋಜನೆಯಡಿ ಆಡಳಿತ ತರಬೇತಿ ಸಂಸ್ಥೆ ಮೈಸೂರು ಮತ್ತು ಇ-ಆಡಳಿತ ಕೇಂದ್ರ ಬೆಂಗಳೂರು ಇವರ
ಸಹಯೋಗದೊಂದಿಗೆ ಬೀದರ ಜಿಲ್ಲಾ ತರಬೇತಿ ಸಂಸ್ಥೆಯು ಗ್ರೂಪ್ “ಎ’ ವೃಂದದ ಅಧಿಕಾರಿಗಳಿಗಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ಇಲಾಖೆಗಳು ಈಗ ಇ-ಆಡಳಿತಕ್ಕೆ ಸಿದ್ಧವಾಗಬೇಕಿದೆ. 20 ವರ್ಷಗಳ ಹಿಂದೆ ಇಡೀ ದೇಶದಲ್ಲಿ ಕರ್ನಾಟಕ ರಾಜ್ಯಕ್ಕೆ ಈ ಆಡಳಿತ ಅನುಷ್ಠಾನ ರಾಜ್ಯ ಖ್ಯಾತಿ ಇತ್ತು. ಇದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಈಗ ಪ್ರತಿಯೊಂದು ವಿಷಯಕ್ಕೂ ಮತ್ತು ಸಮಸ್ಯೆಗಳ ಪರಿಹಾರಕ್ಕೆ ನಾವುಗಳು ಹಲವಾರು ಆಪ್‌ಗ್ಳ ಸಹಾಯ ಪಡೆಯುವುದು ಅನಿವಾರ್ಯವಾಗಿದೆ. ಈ ಡಿಟಿಟಲ್ ತಂತ್ರಜ್ಞಾನದ ಸಮರ್ಥ ಬಳಕೆಯನ್ನು ಪ್ರತಿಯೊಂದು ಇಲಾಖೆಯ ಪ್ರತಿಯೊಬ್ಬ ಅಧಿಕಾರಿಗಳು ಬಳಸಿಕೊಳ್ಳಬೇಕು ಎಂಬುದು ಈ ಕಾರ್ಯಾಗಾರದ ಉದ್ದೇಶವಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಮಾತನಾಡಿ, ಜಿಲ್ಲಾಮಟ್ಟದ ಅಧಿಕಾರಿಗಳು ಬಹಳಷ್ಟು ಜವಾಬ್ದಾರಿಯುತ ಸ್ಥಾನದಲ್ಲಿರುತ್ತೀರಿ. ಆರೋಗ್ಯ, ಖಜಾನೆ ಮತ್ತು ಆರ್‌ಟಿಒದಂತಹ ಅನೇಕ ಕಚೇರಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇರುವ ಡೇಟಾದ ಮೌಲ್ಯವು ಅತ್ಯಂತ ಮಹತ್ವದ್ದಾಗಿರುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಸೈಬರ್ ಸೆಕ್ಯೂರಿಟಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಸಹಾಯಕ ಆಯುಕ್ತರಾದ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಗರೀಮಾ ಪನ್ವಾರ್ ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ತರಬೇತಿ ಸಂಸ್ಥೆಗಳ ಮೂಲಕ ತರಬೇತಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಪ್ರತಿಯೊಬ್ಬರಲ್ಲಿ ಕೂಡ ಜ್ಞಾನ ಪಡೆದುಕೊಳ್ಳುವ ದಾಹ ಇರಬೇಕು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನದ ಬಗ್ಗೆ ಇಲಾಖೆಗಳ ಅಧಿಕಾರಿಗಳು ತಿಳಿದು, ಹೊಸ-ಹೊಸ ತಂತ್ರಜ್ಞಾನಗಳನ್ನು ಕಚೇರಿಯ ಕೆಲಸ ಕಾರ್ಯಗಳಲ್ಲಿ ಬಳಸಿಕೊಂಡು ಪ್ರತಿಯೊಂದು ಚಟುವಟಿಕೆಗಳ ವೇಗ ಪಡೆದುಕೊಳ್ಳಲಿ ಎನ್ನುವ ಉದ್ದೇಶದಿಂದ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಡಾ| ದಯಾನಂದ, ಬಸವರಾಜ ಪೂಜಾರಿ ಮತ್ತು ಶ್ರೀನಿವಾಸ ಕೆ. ಅವರು ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ಬಗ್ಗೆ ಮಾಹಿತಿ
ನೀಡಿದರು. ಕಾರ್ಯಾಗಾರದಲ್ಲಿ ಭಾಗವಹಿಸಿದ ಅ ಧಿಕಾರಗಿಳಿಂದ ಕಾರ್ಯಾಗಾರದ ಮೌಲ್ಯಮಾಪನದ ವಿವರ ಪಡೆಯಲಾಯಿತು. ಅಧಿ ಕಾರಿಗಳಿಗೆ ಪ್ರಮಾಣ
ಪತ್ರ ನೀಡಲಾಯಿತು.
ಜಿಪಂ ಸಿಇಒ ಜಹೀರಾ ನಸೀಮ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ| ಗೋಪಾಲ್ ಎಂ.ಬ್ಯಾಕೋಡ್ ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಸಂಸ್ಥೆಯ ಬೋಧಕ ಶಿವಾನಂದ ಸ್ವಾಮಿ, ಈ ಆಡಳಿತ ಮತ್ತು ದತ್ತಾಂಶ ವಿಶ್ಲೇಷಣಾ ಕೇಂದ್ರ ಕಲಬುರಗಿಯ ಹಿರಿಯ ಬೋಧಕಿ ಕವಿತಾ, ಸಿಬ್ಬಂದಿಗಳಾದ ವಿನಾಯಕ ಮರಕುಂದೆ, ಸಾವಿತ್ರಮ್ಮ ಇದ್ದರು.