Advertisement

ಅಂದವನ್ನು ಹೆಚ್ಚಿಸುವ ಕಾಸ್ಮೆಟಿಕ್‌ ಬಗ್ಗೆ ಇರಲಿ ಎಚ್ಚರ!

11:00 PM Nov 18, 2019 | mahesh |

ಯುವತಿಯರು ತಾವು ಅಂದವಾಗಿ ಕಾಣಬೇಕೆಂದು ಮೇಕಪ್‌ನ ಮೊರೆ ಹೋಗುತ್ತಾರೆ. ಹಲವು ಸೌಂದರ್ಯ ವರ್ಧಕಗಳು ಕಾಸ್ಮೆಟಿಕ್‌ಗಳಾಗಿದ್ದು, ಇವುಗಳ ಬಗ್ಗೆ ಜಾಗೃತಿ ಅಗತ್ಯ. ಇವುಗಳ ಬಳಕೆ ಹೇಗೆ ಮಾಡಬೇಕೆಂಬ ಮಾಹಿತಿ ಇಲ್ಲಿದೆ.

Advertisement

ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂಬುದು ಎಲ್ಲ ಸ್ತ್ರೀಯರ ಬಯಕೆ. ಅದಕ್ಕಾಗಿ ತನ್ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಮೇಕಪ್‌ ಮೊರೆ ಹೋಗುತ್ತಾರೆ. ಕಣ್ಣು, ತುಟಿ, ಕೆನ್ನೆಯ ಅಂದವನ್ನು ಇನ್ನಷ್ಟು ಹೆಚ್ಚಿಸುವ ಮೇಕಪ್‌ ಮಾಡಿಕೊಂಡು ಸಮಾರಂಭಗಳಲ್ಲಿ ಮಿಂಚುವ ಯುವತಿ, ಮಹಿಳೆಯರು ಇತರರಿಗಿಂತ ಆಕರ್ಷಕವಾಗಿ ಕಾಣಿಸಿಕೊಳ್ಳುತ್ತಾರೆ. ಕೆಲವರು ಯಾವಾಗಲಾದರೊಮ್ಮೆ ಸಮಾರಂಭಗಳಿಗೆ ತೆರಳುವಾಗ ಮೇಕಪ್‌ ಮಾಡಿಕೊಂಡರೆ ಇನ್ನು ಕೆಲವರಿಗೆ ದಿನನಿತ್ಯ ಕಚೇರಿಗೆ, ಕಾಲೇಜಿಗೆ ತೆರಳುವಾಗ ಮೇಕಪ್‌ ಮಾಡಿಕೊಳ್ಳುತ್ತಾರೆ.

ಏನೂ ಇಲ್ಲವೆಂದರೂ ತುಟಿಗೆ ಲಿಫ್ಸ್ಟಿಕ್‌ ಹಚ್ಚದೆ ಹೊರಗೆ ಹೋಗುವ ಮಹಿಳೆಯರ ಸಂಖ್ಯೆ ವಿರಳ. ಮೇಕಪ್‌ ಬಗ್ಗೆ ಅತೀವ ಆಸಕ್ತಿ ಇರುವ ಯುವತಿಯರಂತೂ ಶಾಪಿಂಗ್‌ ಗೆ ಹೋದಾಗೆಲ್ಲ ಮೇಕಪ್‌ ಕಿಟ್‌ ಖರೀದಿಸುತ್ತಾರೆ. ಸದಾ ಹೊಸತು ಮಾರುಕಟ್ಟೆಯಲ್ಲೇನಿದೆ ಅನ್ನುವುದರ ಮೇಲೆ ಕುತೂಹಲ. ಪದೇಪದೆ ತ್ವಚೆಯನ್ನು ಪ್ರಯೋಗಕ್ಕೆ ಒಡ್ಡುತ್ತಾರೆ. ಕೊನೆಗೆ ಮೇಕಪ್‌ ಮೇಲೆ ಅವಲಂಬಿತವಾಗಿ ಅದಿಲ್ಲದೆ ಮನೆಯಿಂದ ಹೊರಗೆ ಹೋಗಲಿಕ್ಕೆ ಅಸಾಧ್ಯ ಅನ್ನುವ ಮಟ್ಟಿಗೆ ಪರದಾಡಿ ಬಿಡುತ್ತಾರೆ.

ಚರ್ಮದ ಸಮಸ್ಯೆ
ಸ್ತ್ರೀಯರ ಸೌಂದರ್ಯವನ್ನು ಇಮ್ಮಡಿಗೊಳಿಸುವ ಸೌಂದರ್ಯವರ್ಧಕಗಳು ಹಲವಾರು ಬಾರಿ ತ್ವಚೆಯನ್ನು ಹಾಳು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮುಖದ ಕ್ರಿಮ್‌ಗಳನ್ನು ದಿನನಿತ್ಯ ಬಳಕೆ ಮಾಡುವುದರಿಂದ ಮೊಡವೆಗಳು ಉಂಟಾಗುವ ಸಾಧ್ಯತೆ ಇದೆ. ಕಣ್ಣುಗಳಿಗೆ ಹೊಳಪು ನೀಡುವ ವಾಟರ್‌ ಪ್ರೂಫ್‌ ಮಸ್ಕಾರಗಳನ್ನು ನಿರಂತರ ಬಳಕೆ ಮಾಡಿದರೆ, ಕಣ್ಣಿನ ರೆಪ್ಪೆಗಳೇ ಒಣಗಿ ಹೋಗುವ ಸಾಧ್ಯತೆ ಇದೆ. ಇದೇ ರೀತಿ ಹೊಳೆಯುವ ಮೈ ಕಾಂತಿಗಾಗಿ, ಕಾಂತಿಭರಿತ ಮುಖಕ್ಕಾಗಿ ಹಚ್ಚುವ ಎಲ್ಲ ಕ್ರೀಮ್‌ಗಳು ಮುಖದ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತವೆ. ಚರ್ಮ ಸುಕ್ಕುಗಟ್ಟುವುದು, ಚರ್ಮ ಒಣಗುವುದು, ಸಣ್ಣ ಕಜ್ಜಿಗಳು, ಮೊಡವೆಗಳು ಬೀಳುವುದು ಸಾಮಾನ್ಯವಾಗಿ ದಿನನಿತ್ಯ ಮೇಕಪ್‌ ಬಳಸುವುದರ ಪರಿಣಾಮವಾಗಿರುತ್ತದೆ. ಯಾವುದೇ ಕ್ರೀಮ್‌ನ್ನು ಪ್ರತಿದಿನ ಬಳಸುವುದಕ್ಕಿಂತ ಅಪರೂಪಕ್ಕೊಮ್ಮೊಮ್ಮೆ ಬಳಕೆ ಮಾಡಬಹುದು. ಹಾಗೆ ಬಳಸುವಾಗಲೂ ಮುಖದಲ್ಲಿ ಮೊಡವೆ ಕಾಣಿಸಿಕೊಂಡಲ್ಲಿ ಕ್ರೀಮ್‌ ಹಚ್ಚಿಕೊಳ್ಳದಿರುವುದೇ ಒಳಿತು ಎಂಬುದು ವೈದ್ಯರ ಅಭಿಪ್ರಾಯ.

ಮೇಕಪ್‌ ಸ್ವಚ್ಛತೆಯ ಬಗ್ಗೆ ಇರಲಿ ಎಚ್ಚರ
ಸುಂದರವಾಗಿ ಕಾಣಲು ಮೇಕಪ್‌ ಬಳಸುವಾಗ ಅದನ್ನು ಸರಿಯಾದ ವಿಧಾನದಲ್ಲಿ ಸ್ವತ್ಛ ಮಾಡಿಕೊಳ್ಳುವ ಬಗ್ಗೆಯೂ ಗಮನಹರಿಸಬೇಕು. ಇದರ ಪರಿಣಾಮ ನೇರವಾಗಿ ತ್ವಚೆಯ ಮೇಲೆ ಬೀಳುತ್ತದೆ. ಕಣ್ಣಿನ ಮೇಕಪ್‌ ತೆಗೆಯುವಾಗ ನೀರಿನಲ್ಲಿ ತೊಳೆಯುವುದರಿಂದ ಅದು ಕಣ್ಣಿಗೆ ಹೋಗಬಹುದು. ಕೊಬ್ಬರಿ ಅಥವಾ ಆಲೀವ್‌ ಎಣ್ಣೆಯನ್ನು ಹತ್ತಿಯಲ್ಲಿ ಅದ್ದಿ ಒರೆಸಿಕೊಳ್ಳಿ. ಐ ಶ್ಯಾಡೊ, ಐ ಲೈನರ್‌ ಮತ್ತು ಮಸ್ಕಾರ ಹೋಗುವವರೆಗೂ ತೊಳೆದುಕೊಳ್ಳಬೇಕು. ಮೇಕಪ್‌ ತೆಗೆಯಲು ವೈಪ್ಸ್‌ ಮಾತ್ರ ಬಳಸುವುದರಿಂದ ಮುಖದಲ್ಲಿ ಕಲೆ, ಮೊಡವೆಗಳಾಗಿ ಮುಖ ಹಾನಿಯಾಗುವ ಸಂಭವವಿರುತ್ತದೆ. ಮೇಕಪ್‌ ತೆಗೆಯುವಲ್ಲಿ ಕ್ಲೆನ್ಸರ್‌ ಹೆಚ್ಚು ಪರಿಣಾಮಕಾರಿ. ತ್ವಚೆಗೆ ಸರಿಹೊಂದುವ ಕ್ಲೆನ್ಸರ್‌ ಖರೀದಿಸಿ, ಹತ್ತಿಯಿಂದ ಕ್ಲೆನ್ಸರ್‌ ಅದ್ದಿಕೊಂಡು ಒರೆಸಿ ಮೇಕಪ್‌ ತೆಗೆಯಬಹುದು. ಕೆನ್ಸರ್ನಲ್ಲಿ ಮೇಕಪ್‌ ತೆಗೆದ ಅನಂತರ ಹದವಾದ ಬಿಸಿ ನೀರಿನಲ್ಲಿ ಮುಖ ತೊಳೆಯಿರಿ.

Advertisement

ಬೆಚ್ಚನೆ ನೀರು
ಮೇಕಪ್‌ ತೆಗೆಯಲು ನೈಸರ್ಗಿಕ ಅಂಶವೆಂದರೆ ಮೊದಲು ತಣ್ಣಗಿನ ನೀರಿನಿಂದ ಮುಖ ತೊಳೆದುಕೊಂಡು ಹಾಲು, ಮೊಸರನ್ನು ಹತ್ತಿಯ ಸಹಾಯ ದಿಂದ ಮುಖಕ್ಕೆ ಹಚ್ಚಿ ಅನಂ ತರ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆದು ಕೊಂಡರೆ ತ್ವಚೆ ತಾಜಾ ಆಗಿ, ಮೇಕಪ್‌ ಒಂದಿಷ್ಟೂ ಉಳಿಯದೆ ಹೋಗುತ್ತದೆ.
ಸ್ವಚ್ಛವಾಗಿರಲಿ ರಾತ್ರಿ ಯಾವುದೇ ಕಾರಣಕ್ಕೂ ಮೇಕಪ್‌ ತೆಗೆಯದೆ ಎಂದಿಗೂ ಮಲಗಬೇಡಿ. ರಾತ್ರಿಯಿಡೀ ಮೇಕಪ್‌ ಮುಖದ ಮೇಲಿದ್ದರೆ ಅದು ತ್ವಚೆಯ ರಂಧ್ರವನ್ನು ಮುಚ್ಚಿ ಮೊಡವೆ ಏಳಲು ಅನುವು ಮಾಡಿಕೊಡುತ್ತದೆ. ಹಾಗೆಯೇ ಕಣ್ಣಿಗೆ ಬಳಸಿದ ಮೇಕಪ್‌ ಕೂಡ ಹಾಗೇ ಉಳಿಸಿದರೆ ಕಣ್ಣಿನ ಉರಿ, ಅಲರ್ಜಿ ಉಂಟಾಗುತ್ತದೆ.

ಸರಿಯಾಗಿ ಗಮನಿಸಿಕೊಳ್ಳಿ
ಯಾವುದೇ ಒಂದು ವಸ್ತುವನ್ನು ಉಪಯೋಗಿಸಲು ನಿರ್ದಿಷ್ಟ ಸಮಯದ ಮಿತಿ ಇರುತ್ತದೆ. ಹಾಗೆಯೇ ಮೇಕಪ್‌ ಸಾಮಗ್ರಿಗಳಿಗೂ ಕೂಡ. ಅದಕ್ಕೆ ನೀಡಿರುವ ಅವಧಿ ಮುಗಿದ ಅನಂತರ ಯಾವುದೇ ಕಾರಣಕ್ಕೂ ಅದನ್ನು ಹಚ್ಚಿಕೊಳ್ಳಬೇಡಿ. ಅವಧಿ ಮುಗಿದ ಮೇಕಪ್‌ ಸಾಮಗ್ರಿಗಳನ್ನು ಹಚ್ಚಿಕೊಂಡರೆ ಚರ್ಮ ಅಂದಗೆಡುವುದರಲ್ಲಿ ಎರಡು ಮಾತಿಲ್ಲ. .

ನೈಸರ್ಗಿಕ ವಸ್ತುಗಳನ್ನು ಹೆಚ್ಚಾಗಿ ಬಳಸಿ
ಮೇಕಪ್‌ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಕೆಲವೊಮ್ಮೆ ಮುಖಕ್ಕೆ ಫೌಂಡೇಶನ್‌ ಅಥವಾ ಇತರ ಕ್ರೀಂ ಹಚ್ಚುವಾಗ ತಣ್ಣೀರಿನಲ್ಲಿ ಮುಖವನ್ನು ಸರಿಯಾಗಿ ತೊಳೆದು ಒಣಗಿಸಿ ಹಾಕದೇ, ನೇರವಾಗಿ ಹಾಕುವುದರಿಂದ ಮುಖದ ಮೇಲಿನ ಮಣ್ಣು ಬೆರೆತು ಕಜ್ಜಿಗಳಾಗುವ ಸಾಧ್ಯತೆಗಳಿವೆ. ಇನ್ನೂ ಕೆಲವು ಮುಖಗಳಿಗೆ ಮೇಕಪ್‌ ಹೊಂದಿಕೊಳ್ಳುವುದೂ ಇಲ್ಲ. ಅಂತಹವರು ಮೇಕಪ್‌ ಮಾಡಿ ತಮ್ಮ ಸೌಂದರ್ಯವನ್ನೇ ಕಳೆದುಕೊಳ್ಳುತ್ತಾರೆ. ಹಾಗಾಗಿ ಮೇಕಪ್‌ಗೆ ನೈಸರ್ಗಿಕ ಮೇಕಪ್‌ ವಸ್ತುಗಳನ್ನೇ ಬಳಸುವುದು ಉತ್ತಮ. ನೈಸರ್ಗಿಕವಾಗಿ, ಮನೆಯಲ್ಲೇ ಸಿಗುವ ಬಾದಾಮಿ, ಅಲೋವೆರಾ, ಅರಿಸಿನ ಮಿಶ್ರಿತ ಗಂಧ ಮುಂತಾದವುಗಳನ್ನು ಮುಖಕ್ಕೆ ದಿನಂಪ್ರತಿ ಹಚ್ಚಿಕೊಳ್ಳುವುದರಿಂದ ಮುಖ ಕಾಂತಿಯುತವಾಗುತ್ತದೆ.

- ಪ್ರಜ್ಞಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next