ರಾಮನಗರ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಬಾರದಂತೆ ತಡೆಗಟ್ಟಲು ಜಿಲ್ಲೆಯ ಜನತೆಯ ಸಹಕಾರ ಅವಶ್ಯಕವಿದೆ. ವೈಯಕ್ತಿಕ ಸ್ವಚ್ಛತೆ ಕಾಪಾ ಡಿಕೊಂಡು ಮುಂಜಾಗ್ರತೆ ವಹಿಸಿದರೆ ಕೊರೊನಾ ವೈರಸ್ ಹಾವಳಿ ತಪ್ಪಿಸಬಹುದು ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಗಾಣಕಲ್ ನಟರಾಜು ತಿಳಿಸಿದರು.
ಆರೋಗ್ಯ ಇಲಾಖೆ ವತಿಯಿಂದ ನಗರದ ಐಜೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೊರೊನಾ ವೈರಸ್ ಬಗ್ಗೆ ತಿಳುವಳಿಕೆ ಮೂಡಿಸಲು ಹಮ್ಮಿಕೊಂಡಿದ್ದ ಜಾಗೃತಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರೆಸ್ ಸೋಂಕು ರಾಮನಗರ ಜಿಲ್ಲೆಯಲ್ಲಿ ಕಂಡುಬಂದಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮ ವಹಿಸಿದರೆ ವೈರೆಸ್ ಹರಡುವುದನ್ನು ತಡೆಯಬಹುದು ಎಂದರು.
ಕೆಮ್ಮುವಾಗ ಮತ್ತು ಸೀನುವಾಗ ಬಾಯಿಗೆ ಕರವಸ್ತ್ರ ಅಡ್ಡ ಹಿಡಿಯುಬೇಕು. ಕೈಗಳನ್ನು ಆಗಾಗ್ಗೆ ಚೆನ್ನಾಗಿ ತೊಳೆಯಬೇಕು. ಸರಳ ನೈರ್ಮಲ್ಯ ಅಭ್ಯಾಸ ಮಾಡಿಕೊಂಡು ಕೆಮ್ಮು, ನೆಗಡಿ ಇತ್ಯಾದಿ ಅನಾರೋಗ್ಯದ ಲಕ್ಷಣಗಳನ್ನು ಹೊಂದಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಬಾರದು ಎಂದರು.
ಪರಿಸರ ನಮಗೆ ಆಹಾರ, ಗಾಳಿ, ನೀರು ನೀಡುತ್ತದೆ. ಹೀಗಾಗಿ ಪರಿಸರ ಮಾಲಿನ್ಯ ವಾಗದಂತೆ ಎಚ್ಚರವಹಿಸಬೇಕಾದ ಹೊಣೆ ನಮ್ಮ ಮೇಲಿದೆ ಎಂದರು. ರಾಮನಗರ ತಾಲೂಕಿನಲ್ಲಿ ಸ್ವಚ್ಛ ಶುಕ್ರವಾರ ಅಂಗವಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಈ ವಾರ ಸಚ್ಛ ಶುಕ್ರವಾರದ ಅಂಗವಾಗಿ ಗಿಡಗಳಿಗೆ ನೀರುಣಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೋಮಶೇಖರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಗೌಡ, ತಾಲೂಕು ವೈದ್ಯಾಧಿಕಾರಿ ಡಾ. ಶಶಿಕಲಾ, ಕ್ಷೇತ್ರ ಸಮನ್ವಯ ಅಧಿಕಾರಿ ಸಂಪತ್ತು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್.ಗಂಗಾಧರ್, ಹಾಗೂ ಆರೋಗ್ಯ ಇಲಾಖೆಯ ಡಾ. ರಾಜು, ಡಾ. ಚಂದ್ರು, ಐಜೂರು ಪ್ರೌಢಶಾಲೆ ಮುಖ್ಯ ಶಿಕ್ಷಕ ರಾಮು ಅವರು ಉಪಸ್ಥಿತರಿದ್ದರು.