Advertisement

ಗ್ರೀನ್‌ ಜೋನ್‌ನಿಂದ ಡೇಂಜರ್‌ ಜೋನ್‌ ಸ್ಥಿತಿ ಬೇಡ!

05:30 PM Apr 18, 2020 | Suhan S |

ಕೊಪ್ಪಳ: ಜಿಲ್ಲೆಯ ಜನತೆ ನಾವು ಗ್ರೀನ್‌ ಜೋನ್‌ ನಲ್ಲಿದ್ದೇವೆ ಎಂದು ಬೇಕಾಬಿಟ್ಟಿ ಎಲ್ಲೆಂದರಲ್ಲಿ ರಸ್ತೆಗಿಳಿದು ಸುತ್ತಾಟ ನಡೆಸಬೇಡಿ. ಪಕ್ಕದ ಕೇವಲ 30 ಕಿಲೋ ಮೀಟರ್‌ ಅಂತರದ ಹೊಸಪೇಟೆಯಲ್ಲಿ 11 ಕೋವಿಡ್ 19 ಸೋಂಕು ದೃಢಪಟ್ಟಿವೆ. ನಮ್ಮಲ್ಲಿ ಕೋವಿಡ್ 19  ಸೋಂಕಿಲ್ಲ. ನಮಗೆ ಯಾವ ಭಯವಿಲ್ಲ ಎಂದು ನಿರ್ಲಕ್ಷ್ಯ ಭಾವನೆ ತಾಳಬೇಡಿ. ನಾವು ಡೇಂಜರ್‌ ಜೋನ್‌ನಲ್ಲಿದ್ದೇವೆ. ದಯವಿಟ್ಟು ಎಲ್ಲರೂ ಮನೆಯಲ್ಲೇ ಇರಿ ಎಂದು ಅಧಿಕಾರಿ ವಲಯ ಪದೇ ಪದೇ ಹೇಳುತ್ತಿದೆ.

Advertisement

ಹೌದು.. ಕೋವಿಡ್ 19  ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ಜನತೆಯಲ್ಲಿ ನೆಮ್ಮದಿ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ ನೋಡಿದರೂ ಬರಿ ಕೋವಿಡ್ 19  ಸೋಂಕಿನ ಮಾತು. ಯಾವ ಜಿಲ್ಲೆಯಲ್ಲಿ ಏಷ್ಟೆಷ್ಟು ಜನಕ್ಕೆ ಸೋಂಕುಎಂಬುದೇ ಮಾತಾಗಿದೆ. ಜಿಲ್ಲೆಯಲ್ಲಿ ಈ ವರೆಗೂ ಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆಯಂತೂ ಹಗಲು-ರಾತ್ರಿ ನಿದ್ದೆಗೆಟ್ಟು ಕೆಲಸ ಮಾಡಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. ಕೊಪ್ಪಳ ಜಿಲ್ಲೆಯಲ್ಲಿ ಈವರೆಗೂ ಕೊರೊನಾ ಸೋಂಕು ಕಾಣಿಸಿಕೊಂಡಿಲ್ಲ. ಆದರೂ ಜಿಲ್ಲೆಗೆ 22 ಸಾವಿರ ಗುಳೆ ಹೋಗಿದ್ದ ಜನರು ವಾಪಸ್ಸಾಗಿದ್ದಾರೆ. ಇವರ ಮೇಲೆ ಜಿಲ್ಲಾಡಳಿತವು ಹೆಚ್ಚಿನ ನಿಗಾ ಇರಿಸಿದೆ.

ಇನ್ನೂ ಬಳ್ಳಾರಿ, ಬಾಗಲಕೋಟೆ, ವಿಜಯಪುರ ಹಾಗೂ ಗದಗ ಜಿಲ್ಲೆಯಲ್ಲಿ ಕೊರೊನಾ ಸೋಂಕುದೃಢಪಟ್ಟಿವೆ. ಗಡಿ ಜಿಲ್ಲೆಗಳ ಮಧ್ಯದಲ್ಲಿ ಕೊಪ್ಪಳ ಜಿಲ್ಲೆಯಿದೆ. ಈವರೆಗೂ ಸೋಂಕಿಲ್ಲದೇ ಇರುವುದು ಸಮಾಧಾನದ ಸಂಗತಿಯಾದರೂ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಹೊಸಪೇಟೆಯಲ್ಲಿ 11 ಸೋಂಕಿದೆ ಎಚ್ಚರ: ಕೊಪ್ಪಳ ಜಿಲ್ಲಾ ಕೇಂದ್ರಕ್ಕೆ ಹೊಸಪೇಟೆಯೂ ಕೇವಲ 30 ಕಿಲೋ ಮೀಟರ್‌ ಅಂತರದಲ್ಲಿದೆ. ಅಲ್ಲಿ 11 ಕೋವಿಡ್ 19  ಸೋಂಕು ದೃಢಪಟ್ಟಿವೆ. ಗುರುವಾರ ಒಂದೇ ದಿನ 7 ಸೋಂಕು ಪತ್ತೆಯಾಗಿರುವುದು ಮತ್ತಷ್ಟು ಆತಂಕ ಮನೆ ಮಾಡಿದೆ. ನಾವು ಪಕ್ಕದ ಜಿಲ್ಲೆಯಲ್ಲಿನ ಕೊರೊನಾ ಆರ್ಭಟವನ್ನು ಕಣ್ಣಾರೆ ನೋಡುತ್ತಿದ್ದೇವೆ. ಅದರ ಬಗ್ಗೆ ಜಿಲ್ಲೆಯ ಜನತೆ ಅತ್ಯಂತ ಕಟ್ಟೆಚ್ಚರ ವಹಿಸುವ ಅಗತ್ಯವಿದೆ. ಇದೆಲ್ಲವನ್ನು ಅರಿತು ರಸ್ತೆಗಿಳಿಯುವುದನ್ನು ಕಡಿಮೆ ಮಾಡಬೇಕಿದೆ. ಅಧಿಕಾರಿ ವಲಯ, ವೈದ್ಯರು, ಪೊಲೀಸ್‌ ಪಡೆಯು ಹಗಲು-ರಾತ್ರಿಯು ಕೆಲಸ ಮಾಡುತ್ತಲೇ ಇದೆ. ಜಿಲ್ಲೆಯಲ್ಲಿ ಮೊದಲಿದ್ದ ಲಾಕ್‌ಡೌನ್‌ ಬಿಗಿ ಈಗ ಕಡಿಮೆಯಾಗಿದೆ. ಜನತೆ ಎಲ್ಲೆಂದರಲ್ಲಿ ಬೈಕ್‌ಗಳಲ್ಲಿ ಸುತ್ತಾಡುತ್ತಿದ್ದಾರೆ. ಇಲ್ಲಿನ ಜನತೆಗೆ ಕೋವಿಡ್ 19 ಸೋಂಕಿನ ಭಯವೇ ಇಲ್ಲದಂತಾಗಿದೆ.

ನಮಗೆ ಯಾವುದೇ ಸೋಂಕು ಬರಲ್ಲ ಎಂದು ಸುಮ್ಮನೆ ಸುತ್ತಾಡುತ್ತಿರುವುದು ಪ್ರಜ್ಞಾವಂತ ನಾಗರಿಕ ವಲಯದಲ್ಲಿ ಬೇಸರ ತರಿಸಿದೆ. ಇನ್ನಾದರೂ ಎಚ್ಚೆತ್ತು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ಸಾಧ್ಯವಾದಷ್ಟು ಮನೆಯಲ್ಲಿಯೇ ಇರಬೇಕು ಎಂದು ಪ್ರತಿಯೊಬ್ಬರು ಮನವಿ ಮಾಡುತ್ತಿದ್ದಾರೆ. ಇದಕ್ಕೆ ಜಿಲ್ಲೆಯ ಜನತೆ ಸ್ಪಂದಿಸಲೇಬೇಕಿದೆ.

Advertisement

264 ಜನರ ವರದಿ ನೆಗಟಿವ್‌: ಇನ್ನೂ ಕೋವಿಡ್ 19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತವು ನಿರಂತರ ಯುದ್ಧೋಪಾದಿಯಲ್ಲಿ ಹೋರಾಟ ಮಾಡುತ್ತಲೇ ಇದೆ. ಜಿಲ್ಲೆಯಿಂದ ಗುಳೆ ಹೋದ ಜನರು ವಾಪಸ್ಸಾಗಿದ್ದು, ಮುಂಬೈ, ದೆಹಲಿ ಸೇರಿ ಇತರೆ ಹಾಟ್‌ಸ್ಪಾಟ್‌ ಇರುವ ಸ್ಥಳಗಳಿಗೆ ಜನ ಪ್ರವಾಸ ಮಾಡಿದ್ದಾರೆ. ಹೀಗಾಗಿ ದಿನೇ ದಿನೆ ಜನರ ಗಂಟಲು ದ್ರವ ಸಂಗ್ರಹಿಸಿ ಲ್ಯಾಬ್‌ ಗೆ ಕಳಿಸಲಾಗುತ್ತಿದೆ. ಈ ವರೆಗೂ 286 ಜನರ ಗಂಟಲು ದ್ರವ ಸಂಗ್ರಹಿಸಿದ್ದು, 262 ಜನರ ವರದಿ ನೆಗಟಿವ್‌ ಎಂದು ಬಂದಿದೆ. ಇನ್ನೂ 24 ಜನರ ವರದಿ ಬರುವುದು ಬಾಕಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next