Advertisement

ಮುಂದಿನ ಪರೀಕ್ಷೆಗಳ ಪಾರದರ್ಶಕತೆ ಬಗ್ಗೆ ಭರವಸೆ ಮೂಡಿಸಿ

01:56 AM May 10, 2022 | Team Udayavani |

ರಾಜ್ಯದಲ್ಲಿ ಪಿಎಸ್‌ಐ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮದ ಆರೋಪಗಳು ದಿನೇ ದಿನೆ ಬೇರೆ ರೀತಿಯ ತಿರುವು ಪಡೆಯುತ್ತಿದ್ದು ಇಡೀ ನೇಮಕಾತಿ ವ್ಯವಸ್ಥೆಯ ಬಗ್ಗೆಯೇ ಅನುಮಾನ ಪಡುವಂತಾಗಿದೆ. ಈ ಹಿಂದೆ ನಡೆದಿರಬಹುದಾದ ಹಾಗೂ ಮುಂದೆ ನಡೆಯಬಹುದಾದ ನೇಮಕಾತಿ ಪರೀಕ್ಷೆಗಳ ಬಗ್ಗೆ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ. ಈಗಾಗಲೇ ಒಂದೆರಡು ತಿಂಗಳಲ್ಲಿ ಹಲವು ನೇಮಕಾತಿ ಪರೀಕ್ಷೆಗಳು ನಿಗದಿಯಾಗಿವೆ. ಶಿಕ್ಷಣ ಇಲಾಖೆ ಸಹಿತ ಕೆಲವು ಇಲಾಖೆಗಳಲ್ಲಿ ನೇಮಕಾತಿ ಪರೀಕ್ಷೆಗೆ ಅಭ್ಯರ್ಥಿಗಳು ಅಣಿಯಾಗಿದ್ದಾರೆ.

Advertisement

ಹಲವು ರೀತಿಯ ಅಕ್ರಮಗಳ ವಿಶ್ವರೂಪವನ್ನೇ ನೋಡಿರುವ ಲಕ್ಷಾಂತರ ಅಭ್ಯರ್ಥಿಗಳು ಮುಂದಿನ ಪರೀಕ್ಷೆಗಳ ಬಗ್ಗೆ ಸಹಜವಾದ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಭವಿಷ್ಯದ ಪ್ರಶ್ನೆಯಾಗಿರುವ ಈ ವಿಚಾರದಲ್ಲಿ ರಾಜ್ಯ ಸರಕಾರ ಅಭ್ಯರ್ಥಿಗಳಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ನಡೆಸಬೇಕಿದೆ. ಜತೆಗೆ ಇಡೀ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಮುಂದಾಗಬೇಕಾಗಿದೆ. ಕೆಪಿಎಸ್‌ಸಿ ಅಥವಾ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಯುವ ಪರೀಕ್ಷೆಗಳು ವಿಶ್ವಾಸಾರ್ಹ ಎಂಬ ನಂಬಿಕೆ ಮೂಡಿಸುವ ಕೆಲಸ ಆಗಬೇಕಾಗಿದೆ.

ಪರೀಕ್ಷೆ ಕೇಂದ್ರಗಳೇ ಅಕ್ರಮದ ಮೂಲ ಎಂಬುದು ಇತ್ತೀಚೆಗಿನ ತನಿಖೆಯಲ್ಲೂ ಗೊತ್ತಾಗಿರುವುದರಿಂದ ಆ ವ್ಯವಸ್ಥೆ ಸರಿಪಡಿಸಲು ಸರಕಾರ ಮುಂದಾಗಬೇಕಾಗಿದೆ. ಜಿಲ್ಲಾ ಮಟ್ಟ ದಲ್ಲಿಯೂ ಪರೀಕ್ಷೆ ವ್ಯವಸ್ಥೆ ಸಂಪೂರ್ಣ ನಿಗಾದಡಿ ಆಗಬೇಕಾಗಿದೆ. ಸ್ವಲ್ಪ ವ್ಯತ್ಯಾಸವಾದರೂ ಕಠಿನ ಕ್ರಮ ಹಾಗೂ ಸಂಬಂಧಪಟ್ಟವರ ಹೊಣೆಗಾರಿಕೆ ಮಾಡಬೇಕಾಗಿದೆ.

ಶಿಕ್ಷಣ, ಆರೋಗ್ಯ, ಪೊಲೀಸ್‌, ಲೋಕೋಪಯೋಗಿ, ಸಮಾಜ ಕಲ್ಯಾಣ, ಕೃಷಿ-ತೋಟಗಾರಿಕೆ, ಸಹಕಾರ ಹೀಗೆ ರೈತರು ಹಾಗೂ ಜನಸಾಮಾನ್ಯರಿಗೆ ಹತ್ತಿರವಾದ ಇಲಾಖೆಗಳು. ಇಲ್ಲಿನ ನೇಮಕಾತಿಗಳಲ್ಲಿ ಅಕ್ರಮಗಳು ನಡೆದರೆ ಮುಂದೆ ಬೇರೆಯೇ ರೀತಿಯ ಅಪಾಯ ಕಟ್ಟಿಟ್ಟ ಬುತ್ತಿ.

ಹೀಗಾಗಿ ಯಾವುದೇ ಇಲಾಖೆಯ ನೇಮಕಾತಿಯಲ್ಲೂ ಅಕ್ರಮಕ್ಕೆ ಅವಕಾಶ ಇಲ್ಲದಂತೆ ಅರ್ಹರಿಗೆ ಉದ್ಯೋಗ ಸಿಗುವ ವಾತಾವರಣ ನಿರ್ಮಾಣವಾಗಬೇಕಾಗಿದೆ. ಇಂತಹ ವ್ಯವಸ್ಥೆ ಮಾಡುವ ಹೊಣೆಗಾರಿಕೆ ಮತ್ತು ಜವಾಬ್ದಾರಿ ಸರಕಾರದ ಮೇಲಿದೆ. ಒಂದು ಬಾರಿ ನೇಮಕಾತಿ ಪರೀಕ್ಷಾ ವ್ಯವಸ್ಥೆ ಮೇಲೆ ಅಪನಂಬಿಕೆ ಅಥವಾ ಅನುಮಾನ ಬಂದರೆ ಅದನ್ನು ಸರಿಪಡಿಸಲು ವರ್ಷಗಳು ಬೇಕಾಗುತ್ತವೆ. ಜತೆಗೆ ಗುಮಾನಿ ದೊಡ್ಡ ಪ್ರಮಾಣದ ಅನಾಹುತವನ್ನೂ ಸೃಷ್ಟಿಸುತ್ತದೆ. ಪಿಎಸ್‌ಐ ನೇಮಕಾತಿ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಿಚಾರದಲ್ಲಿ ಕೇಳಿಬಂದಿರುವ ಆರೋಪ, ಆಗಿರುವ ಲೋಪದ ಬಗ್ಗೆ ಅಧ್ಯಯನ ಮಾಡಿ ಮುಂದಿನ ದಿನಗಳಲ್ಲಿ ಇದಕ್ಕೆ ಇತಿಶ್ರೀ ಹಾಡಬೇಕಾಗಿದೆ.

Advertisement

ರಾಜ್ಯ ಸರಕಾರ ಈ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಂಡು ಮೊಳಕೆಯಲ್ಲೇ ಚಿವುಟಿ ಹಾಕಬೇಕು ಎಂಬಂತೆ ಇದೀಗ ಎದ್ದಿರುವ ಪರೀಕ್ಷಾ ನೇಮಕಾತಿ ಅಕ್ರಮದ ಜಾಲವನ್ನು ಹತ್ತಿಕ್ಕಿ ಸಾರ್ವಜನಿಕರಲ್ಲಿ ಪರೀಕ್ಷಾ ವ್ಯವಸ್ಥೆ ಮೇಲೆ ನಂಬಿಕೆ ಬರುವಂತೆ ಮಾಡಬೇಕು. ಇಲ್ಲದಿದ್ದರೆ ಆಡಳಿತ ವ್ಯವಸ್ಥೆಯ ಪರಿಣಾಮವಷ್ಟೇ ಅಲ್ಲದೆ ರಾಜ್ಯಕ್ಕೂ ಇದೊಂದು ಕಪ್ಪು ಚುಕ್ಕೆಯಾಗಿ ಪರಿಣಮಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next