Advertisement

ಮೂರನೇ ಅಲೆ ಬಗ್ಗೆ ಈಗಿನಿಂದಲೇ ಎಚ್ಚರಿಕೆ ವಹಿಸಿ

03:36 AM Jun 19, 2021 | Team Udayavani |

ಮಹಾರಾಷ್ಟ್ರದ ಕೊರೊನಾ ಟಾಸ್ಕ್ ಫೋರ್ಸ್‌ ಇನ್ನು 2ರಿಂದ 4 ವಾರಗಳಲ್ಲಿ ಕೊರೊನಾ ಮೂರನೇ ಅಲೆ ಬಾಧಿಸಬಹುದು ಎಂದು ಎಚ್ಚರಿಕೆ ನೀಡಿದೆ. ಈಗಿನಿಂದಲೇ ಮೂರನೇ ಅಲೆ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆಯೂ ಅಲ್ಲಿನ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಇತ್ತ ರಾಜ್ಯದಲ್ಲೂ ನವೆಂಬರ್‌ ವೇಳೆಗೆ ಮೂರನೇ ಅಲೆ ಬರಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.

Advertisement

ಮಹಾರಾಷ್ಟ್ರದ ಟಾಸ್ಕ್ ಫೋರ್ಸ್‌ ವರದಿ ವಿಚಾರದಲ್ಲಿ ಸ್ವಲ್ಪ ಮಟ್ಟಿನ ಗೊಂದಲಗಳಿದ್ದರೂ ಮೂರನೇ ಅಲೆ ಬರುವ ಸಾಧ್ಯತೆಗಳನ್ನಂತೂ ತಳ್ಳಿಹಾಕುವಂತಿಲ್ಲ. ಇದು ಅವಲಂಬಿಸಿರುವುದು ಜನರ ವರ್ತನೆಯನ್ನು. ಕೊರೊನಾ ನಿಯಂತ್ರಣದಲ್ಲಿ ಜನರ ಸ್ಪಂದನೆ ಹೇಗಿರುತ್ತದೆಯೋ ಅದಕ್ಕೆ ತಕ್ಕನಾಗಿ ಮೂರನೇ ಅಲೆ ಬಗ್ಗೆ ನಿರೀಕ್ಷೆ ಮಾಡಬಹುದು ಎಂದು ಹೇಳುತ್ತಾರೆ ತಜ್ಞರು. ಸದ್ಯ ಮಹಾರಾಷ್ಟ್ರದ ಟಾಸ್ಕ್ ಫೋರ್ಸ್‌ನ ಸದಸ್ಯರೊಬ್ಬರು ಇನ್ನು 2ರಿಂದ 4 ವಾರದಲ್ಲಿ ಮೂರನೇ ಅಲೆ ಬರಬಹುದು ಎಂಬ ವರದಿಯನ್ನೇ ತಳ್ಳಿಹಾಕಿದ್ದಾರೆ. ಈ ರೀತಿ ಮೂರನೇ ಅಲೆ ಇಂತಿಷ್ಟೇ ಸಮಯದಲ್ಲಿ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವೇ ಇಲ್ಲ ಎಂಬುದು ಅವರ ಮಾತು. ಅಂದರೆ ಅಮೆರಿಕದಲ್ಲಿ ಮೊದಲ ಅಲೆಯಿಂದ ಎರಡನೇ ಅಲೆಗೆ 14ರಿಂದ 15 ವಾರಗಳ ಅಂತರವಿತ್ತು. ಆದರೆ ಇಂಗ್ಲೆಂಡ್‌ ನಲ್ಲಿ ಎಂಟು ವಾರಗಳಲ್ಲೇ ಮತ್ತೂಂದು ಅಲೆ ಬಂದಿತು. ನಾವು ಲೆಕ್ಕಾಚಾರ ಹಾಕುವಾಗ ಇಂತಿಷ್ಟು ಸಮಯದಲ್ಲಿ ಬರಬಹುದು ಎಂದು ಅಂದಾಜು ಮಾಡಲು ಮಾತ್ರ ಸಾಧ್ಯವಾಗುತ್ತದೆ. ಆದರೆ ಇಷ್ಟೇ ದಿನದಲ್ಲಿ ಬರಲಿದೆ ಎಂದು ಹೇಳಲಾಗುವುದಿಲ್ಲ ಎಂದು ಮಹಾರಾಷ್ಟ್ರ ಟಾಸ್ಕ್ ಫೋರ್ಸ್‌ನ ಸದಸ್ಯ ಡಾ| ರಾಹುಲ್‌ ಪಂಡಿತ್‌ ಹೇಳಿದ್ದಾರೆ.

ಆದರೆ ಮೂರನೇ ಅಲೆ ಯಾವಾಗ ಬರಲಿದೆ ಎಂಬ ಲೆಕ್ಕಾಚಾರ ಹಾಕುವ ಬದಲು ಜನರು ಕೊರೊನಾ ವಿಚಾರದಲ್ಲಿ ಹುಷಾರಾಗಿ ಇರಬೇಕು ಎಂದು ವೈದ್ಯರು ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ 5 ಹಂತಗಳ ಅನ್‌ ಲಾಕ್‌ ಘೋಷಿಸಲಾಗಿದೆ. ಈಗಾಗಲೇ ಜನ ಯಥೇಚ್ಚವಾಗಿ ರಸ್ತೆಗಿಳಿಯಲು ಆರಂಭಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ, ಇದು ತಪ್ಪು. ಅನ್‌ ಲಾಕ್‌ ಎಂದಾಕ್ಷಣ ರಸ್ತೆಗಿಳಿಯುವುದಲ್ಲ. ಸರಕಾರದ ನಿಯಮಗಳನ್ನು ಪಾಲನೆ ಮಾಡಿಕೊಂಡು, ಅಗತ್ಯವಿದ್ದರಷ್ಟೇ ರಸ್ತೆಗೆ ಇಳಿಯಬೇಕು. ಇಲ್ಲದಿದ್ದರೆ, ಮತ್ತೆ ಗುಂಪು ಗುಂಪಾಗಿ ಸೇರುವುದು, ಮಾಸ್ಕ್ ಧರಿಸದೇ ಓಡಾಡುವುದು ಸೇರಿದಂತೆ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದರೆ ತತ್‌ಕ್ಷ ಣವೇ ಪ್ರಕರಣಗಳು ಹೆಚ್ಚಾಗಬಹುದು. ಪ್ರಕರಣಗಳು ಹೆಚ್ಚಾದ ತತ್‌ಕ್ಷಣ ಅದನ್ನು ಮತ್ತೂಂದು ಅಲೆ ಎಂದು ಕರೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳುತ್ತಾರೆ ತಜ್ಞರು.

ಕರ್ನಾಟಕದಲ್ಲಿ ಈಗಾಗಲೇ ಲಾಕ್‌ ಡೌನ್‌ ನಿಂದ ಕೊಂಚ ಆರಾಮ ನೀಡಲಾಗಿದೆ. ಸೋಮವಾರದಿಂದ ಇನ್ನಷ್ಟು ವಿನಾಯಿತಿ ನೀಡುವ ಸಾಧ್ಯತೆ ಇದೆ. ಇನ್ನಷ್ಟು ವಿರಾಮ ಕೊಟ್ಟಿದ್ದಾರೆ ಎಂದ ಕೂಡಲೇ ಕೊರೊನಾ ಸಂಪೂರ್ಣವಾಗಿ ಹೋಗಿದೆ ಎಂದಲ್ಲ. ಈಗಲೂ ರಾಜ್ಯದಲ್ಲಿ 5 ರಿಂದ 7 ಸಾವಿರದ ಒಳಗೆ ಹೊಸ ಪ್ರಕರಣಗಳು ಬರುತ್ತಿವೆ. ಲೆಕ್ಕಾಚಾರದಲ್ಲಿ ಪಾಸಿಟಿವಿಟಿ ರೇಟ್‌ ಕಡಿಮೆ ಇರಬಹುದು ಆದರೆ ಪ್ರಕರಣಗಳ ಸಂಖ್ಯೆಯಂತೂ ಹೆಚ್ಚಾಗಿಯೇ ಇದೆ. ಹೀಗಾಗಿ ಜನ ಯಾವುದೇ ಕಾರಣಕ್ಕೂ ಮೈಮರೆಯದೇ ಕೊರೊನಾ ನಿಯಮಗಳನ್ನು ಪಾಲಿಸಿಕೊಂಡೇ ಹೋಗುವ ಮೂಲಕ ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next