Advertisement
ಅತಿವೃಷ್ಟಿ ಬಾಧಿತ ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಡಳಿತದ ಅಧಿ ಕಾರಿಗಳೊಂದಿಗೆ ಶನಿವಾರ ಸಂಜೆ ಬೆಂಗಳೂರಿನಿಂದ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿಗಳು, ಮನೆ ಹಾನಿ, ಬೆಳೆ ಹಾನಿ, ಮೂಲ ಸೌಕರ್ಯಗಳ ಹಾನಿ, ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತಂತೆ ಮಾಹಿತಿ ಪಡೆದುಕೊಂಡರು.
Related Articles
Advertisement
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಮಾತನಾಡಿ, 1,361 ಕಿ.ಮೀ. ಗ್ರಾಮೀಣ ರಸ್ತೆ, 971 ಪ್ರಾಥಮಿಕ ಶಾಲೆ, 38 ಅಂಗನವಾಡಿಗಳಿಗೆ ಹಾನಿಯಾಗಿರುವ ಕುರಿತು ವರದಿ ಸಲ್ಲಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಎನ್ ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರ ಅನುದಾನ ಬಿಡುಗಡೆಗೊಳಿಸಿದ್ದು, ದುರಸ್ತಿ ಕಾರ್ಯ ಆರಂಭಿಸಲಾಗಿದೆ. ನದಿ ಪಾತ್ರದ ಪ್ರವಾಹದ ಬಗ್ಗೆ ನಿಗಾ ವಹಿಸಲು ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ತಗ್ಗು ಪ್ರದೇಶದ ಜನ ವಸತಿಗಳ ಸಂಪರ್ಕದಲ್ಲಿದ್ದು, ಕಾಲಕಾಲಕ್ಕೆ ಮಾಹಿತಿ ನೀಡಲಾಗುತ್ತದೆ. ಅಗತ್ಯ ಬಿದ್ದರೆ ಸ್ಥಳಾಂತರಿಸುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.
ಕೃಷಿ ಬೆಳೆ ಹಾನಿ ಕುರಿತು ಮಾಹಿತಿ ನೀಡಿದ ಕೃಷಿ ಜಂಟಿ ನಿರ್ದೇಶಕ ಮಂಜುನಾಥ್, ಪ್ರಾಥಮಿಕ ಸರ್ವೇಯಲ್ಲಿ 9,372 ಹೆಕ್ಟೇರ್ ಹಾನಿ ನಮೂದಿಸಲಾಗಿತ್ತು. ಬೆಳೆಯಲ್ಲಿ ನೀರು ನಿಂತು ಫಸಲು ಹಳದಿ ರೂಪಕ್ಕೆ ತಿರುಗಿದ ಪರಿಣಾಮ ಹಾನಿ ಪ್ರಮಾಣ ಹೆಚ್ಚಾಗಿದೆ. 27 ಸಾವಿರ ಹೆಕ್ಟೇರ್ ಹಾನಿಯಾಗಿರುವ ಕುರಿತು ವರದಿ ಸಲ್ಲಿಕೆಯಾಗಿದೆ. ಮರು ಜಂಟಿ ಸಮೀಕ್ಷೆ ಕೈಗೊಂಡು ನಿಖರ ವರದಿ ಸಲ್ಲಿಸಲಾಗುವುದು ಎಂದರು.
ಕಾರ್ಮಿಕ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್ ಶಿವರಾಂ ಹೆಬ್ಟಾರ್ ಅವರು ಸ್ವಕ್ಷೇತ್ರದಿಂದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ, ಹಾವೇರಿ ಜಿಲ್ಲೆಯ ಬೆಳೆ ಹಾನಿ ಸೇರಿದಂತೆ ಜಿಲ್ಲೆಯ ಮಳೆ ಮತ್ತು ಹಾನಿಯ ಸ್ಥಿತಿಗತಿ ಕುರಿತು ಮುಖ್ಯಮಂತ್ರಿಗಳಿಗೆ ವಿವರಿಸಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆರಂಭದಲ್ಲಿ ವಿಡಿಯೋ ಸಂವಾದಲ್ಲಿ ಭಾಗವಹಿಸಿ, ಮುಖ್ಯಮಂತ್ರಿಗಳಿಗೆ ಉತ್ತರ ಕನ್ನಡ ಜಿಲ್ಲೆಯ ಹಾನಿಯ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಡಾ|ಎನ್.ತಿಪ್ಪೇಸ್ವಾಮಿ, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಬೆಳೆ ಹಾನಿಯ ನಿಖರ ವರದಿ ನೀಡಿ
ಹಾವೇರಿ ಜಿಲ್ಲೆಯಲ್ಲಿ 27 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿರುವುದು ವಾಸ್ತವಾಂಶಗಳನ್ನು ಒಳಗೊಂಡಿಲ್ಲ ಅನಿಸುತ್ತದೆ. ಈ ಕುರಿತು ಪುನರ್ ಪರಿಶೀಲನೆ ನಡೆಸಬೇಕು. ಹಾನಿಯ ಪ್ಲಾಟ್ ಗಳಿಗೆ ಭೇಟಿ ನೀಡಿ ವಾಸ್ತವತೆಯನ್ನು ಪರಿಶೀಲಿಸಿ ಮೂರ್‍ನಾಲ್ಕು ದಿನ ತಡವಾದರೂ ನಿಖರ ವರದಿ ನೀಡಬೇಕೆಂದು ಕೃಷಿ ಇಲಾಖಾ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದರು.
ಮೂಲ ಸೌಕರ್ಯ ಕಲ್ಪಿಸಿ: ತಗ್ಗು ಪ್ರದೇಶದ ಜನರನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಬೇಕು. ವರದಾ, ಕುಮದ್ವತಿ ಸೇರಿದಂತೆ ನದಿಗಳ ಏರಿಳಿತದ ಬಗ್ಗೆ ಗಮನ ಹರಿಸಬೇಕು. ಶಿವಮೊಗ್ಗದಲ್ಲಿ ಹೆಚ್ಚು ಮಳೆಯಾದರೆ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಗಮನ ಹರಿಸಿ, ಅತಿವೃಷ್ಟಿಯಿಂದ ತೊಂದರೆಗೊಳಗಾದ ಜನರಿಗೆ ಕಾಳಜಿ ಕೇಂದ್ರಗಳನ್ನು ತೆರೆಯಬೇಕು. ಉತ್ತಮ ಗುಣಮಟ್ಟದ ಆಹಾರದ ಜೊತೆಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು. ಕಾಳಜಿ ಕೇಂದ್ರಕ್ಕೆ ಬರಲು ಒಪ್ಪದೇ ಸಂಬಂಧಿಕರ ಮನೆಗೆ ತೆರಳುವ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಅವರಿಗೆ ಡ್ರೈರೇಷನ್ ನೀಡಲು ಕ್ರಮ ವಹಿಸಬೇಕು. –ಬಸವರಾಜ ಬೊಮ್ಮಾಯಿ, ಸಿಎಂ