Advertisement

ಕರ್ನಾಟಕದ ಪರಂಪರೆಯ ವಾರಸುದಾರರಾಗಿ

09:49 PM Nov 01, 2019 | Team Udayavani |

ಮೈಸೂರು: ಕರ್ನಾಟಕದ ಇತಿಹಾಸ ಮತ್ತು ಪರಂಪರೆ ಅತ್ಯಂತ ಶ್ರೀಮಂತವಾಗಿದ್ದು, ಅಖಂಡ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಯುವ ಪೀಳಿಗೆ ಪಾಲುದಾರರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು. 64ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

Advertisement

ಯುವಜನರು ನಾಡಿನ ಬಗ್ಗೆ ಆಳವಾದ ಅಧ್ಯಯನ ಹಾಗೂ ವ್ಯಾಸಂಗದ ಜೊತೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಬಗ್ಗೆ ಅಭಿರುಚಿ ಬೆಳೆಸಿಕೊಳ್ಳಬೇಕು. ನಮ್ಮ ಪರಂಪರೆಯ ವಾರಸುದಾರರಾಗಿ ಕನ್ನಡತನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ವಾತಂತ್ರ ಪೂರ್ವದಲ್ಲಿ ಹಲವು ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರ ಹಲವು ಪ್ರದೇಶಗಳನ್ನು ಒಂದುಗೂಡಿಸಿ, 1956ರ ನವೆಂಬರ್‌ 1 ರಂದು ಕರ್ನಾಟಕ ಏಕೀಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್‌ 1 ರಂದು ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸಿಕೊಂಡು ಬಂದಿದ್ದೇವೆ. ಬಹಳ ವಿಶಾಲವಾದ ಪ್ರದೇಶದಲ್ಲಿ ಕನ್ನಡ ಮಾತನಾಡುವ ಜನರು ನೆಲೆಸಿದ್ದು, ಮಹಾಭಾರತದ ಭೀಷ್ಮಪರ್ವದಲ್ಲಿ “ಕರ್ನಾಟಕ’ದ ಉಲ್ಲೇಖವಿದೆ. ಇದು ನಮ್ಮ ನಾಡಿನ ಪ್ರಾಚೀನತೆಯ ಬಗ್ಗೆ ತಿಳಿಸಲಿದೆ ಎಂದರು.

ಸುದೀರ್ಘ‌ ಹೋರಾಟದ ಫ‌ಲವಾಗಿ 1956 ರ ನವೆಂಬರ್‌ 1 ರಂದು ಕನ್ನಡ ಮಾತನಾಡುವ ಪ್ರದೇಶಗಳೆಲ್ಲ ಅಖಂಡವಾಗಿ ಮೈಸೂರು ರಾಜ್ಯದಲ್ಲಿ ಒಂದುಗೂಡಿದವು. ಬಳಿಕ 1973 ರಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸು ಅವರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದರು ಎಂದು ಕರ್ನಾಟಕ ಏಕೀಕರಣ ಹೋರಾಟವನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಎಸ್‌.ಎ. ರಾಮದಾಸ್‌, ತನ್ವೀರ್‌ ಸೇಠ್, ಎಲ್‌. ನಾಗೇಂದ್ರ, ಸಂಸದ ಪ್ರತಾಪ್‌ ಸಿಂಹ, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಉಪ ಮೇಯರ್‌ ಶಫಿ ಅಹಮ್ಮದ್‌ ಸೇರಿದಂತೆ ಅಧಿಕಾರಿಗಳು ಇದ್ದರು.

Advertisement

“ಬಾರಿಸು ಕನ್ನಡ ಡಿಂ ಡಿಂಮವಾ’ ಘೋಷಣೆ
ಕಲಾತಂಡಗಳ ವೈಭವ: ಕನ್ನಡ ರಾಜ್ಯೋತ್ಸವದ ಮೆರವಣಿಗೆ ಅಚ್ಚುಕಟ್ಟಾಗಿ ನಡೆಯಿತು. ಕಲಾತಂಡಗಳ ವೈಭವ ರಾಜ್ಯೋತ್ಸವ ಸಂಭ್ರಮವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತು. “ಬಾರಿಸು ಕನ್ನಡ ಡಿಂ ಡಿಂಮವಾ’ ಎಂಬ ಘೋಷಣೆ ಕನ್ನಡ ಕಾರ್ಯಕರ್ತರಿಂದ ಕೇಳಿ ಬಂತು. ಕಂಸಾಳೆ, ನಂದಿಧ್ವಜ ಕುಣಿತ, ವೀರಗಾಸೆ ಜಾನಪದ ಸಂಸ್ಕೃತಿಯನ್ನು ನೆನಪಿದವು.

ಪೊಲೀಸ್‌ ಬ್ಯಾಂಡ್‌ನೊಂದಿಗೆ ಕನ್ನಡ ತಾಯಿ ಭುವನೇಶ್ವರಿ ದೇವಿಯ ಮೆರವಣಿಗೆ ಚಾಮರಾಜ ಒಡೆಯರ್‌ ಸರ್ಕಲ್‌ನಿಂದ ಶುರುವಾಗಿ ಕೆಆರ್‌ ಸರ್ಕಲ್‌, ಸಯ್ನಾಜಿ ರಾವ್‌ ರಸ್ತೆ, ಕೆಆರ್‌ ಆಸ್ಪತ್ರೆ ಸರ್ಕಲ್‌, ಇರ್ವೀನ್‌ ರಸ್ತೆ, ಅಶೋಕ ರಸ್ತೆ ಮೂಲಕ ಟೌನ್‌ಹಾಲ್‌ನಲ್ಲಿ ಸಮಾಪ್ತಿಯಾಯಿತು. ಬೆಮೆಲ್‌ ನೌಕರರ ಭುವನೇಶ್ವರಿ ಸ್ತಬ್ಧಚಿತ್ರ ಇದಕ್ಕೆ ಸಾಥ್‌ ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next