Advertisement

ಮಾಧ್ಯಮ ಸಮಾಜದ ಪ್ರತಿಬಿಂಬವಾಗಲಿ

06:37 AM Feb 12, 2019 | Team Udayavani |

ಬೆಂಗಳೂರು: ಸಮಾಜದ ಹೊಣೆಗಾರಿಕೆ ಹೊತ್ತಿರುವ ಮಾಧ್ಯಮಗಳು ಯಾವತ್ತೂ ಸಮಾಜದ ಪ್ರತಿಬಿಂಬವಾಗಿ ಕಾರ್ಯನಿರ್ವಹಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಹೇಳಿದರು. 

Advertisement

ಅಂಬೇಡ್ಕರ್‌ ಭವನದಲ್ಲಿ ಸೋಮವಾರ ಕರ್ನಾಟಕ ಮಾಧ್ಯಮ ಅಕಾಡೆಮಿ ಹಮ್ಮಿಕೊಂಡಿದ್ದ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರ ಸಮಾಜ ಮುಖೀಯಾಗಿರದೆ ವ್ಯಾಪರೀಕರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಕಳೆದ 30 ವರ್ಷಗಳಿಂದ ಮಾಧ್ಯಮ ಕ್ಷೇತ್ರವನ್ನು ನೋಡುತ್ತಿದ್ದೇನೆ. ಹಲವು ಮಂದಿ ಹಿರಿಯ ಪತ್ರಕರ್ತರು ಒಂದು ಹೊತ್ತಿನ ಊಟವಿಲ್ಲದೆ ಹಸಿದು ಕೊಂಡು ಪತ್ರಿಕೋದ್ಯಮಕ್ಕಾಗಿ ತ್ಯಾಗ ಮಾಡಿದ್ದಾರೆ. ಅಂತವರನ್ನು ಯುವ ಪತ್ರಕರ್ತರು ಮಾದರಿಯಾಗಿ ತೆಗೆದುಕೊಳ್ಳಬೇಕು.ಆದರೆ ಆ ಕೆಲಸವಾಗುತ್ತಿಲ್ಲ. ರಾಜಕೀಯ ಕ್ಷೇತ್ರದ ಮುಖಂಡರಿಗೆ ಕಡಿವಾಣ ಹಾಕಿದ ರೀತಿಯಲ್ಲೆ ಮಾಧ್ಯಮ ಕ್ಷೇತ್ರಕ್ಕೆ ಸ್ವಯಂ ನಿಯಂತ್ರಣ ಅಗತ್ಯವಿದೆ ಎಂದರು.

ಮಾಧ್ಯಮ ಕ್ಷೇತ್ರದಲ್ಲಿನ ಕೆಲಸ ಸಮಾಜ ಸೇವೆ ಮಾಡಿದಂತೆ.ಅದನ್ನು ಗಮನದಲ್ಲಿಟ್ಟುಕೊಂಡು ಯುವ ಪತ್ರಕರ್ತರು ಕಾರ್ಯನಿರ್ವಹಿಸಬೇಕು.ದೇಶದಲ್ಲಿನ ಮಹತ್ವದ ಬದಲಾವಣೆಯ ಬಗ್ಗೆ ಬೆಳಕು ಚೆಲ್ಲಬೇಕು.ಆ ನಿಟ್ಟಿನಲ್ಲಿ ಪ್ರಶಸ್ತಿಗಳು ಮತ್ತಷ್ಟು ಸಾಮಾಜಿಕ ಹೊಣೆಗಾರಿಕೆಯನ್ನು ಹೆಚ್ಚಿಸಲಿ ಎಂದು ಆಶಿಸಿದರು.

ಬಣ್ಣ ಹಾಕದೇ ನಾವು ನಾಟಕ ಮಾಡ್ತಿದ್ದೇವೆ: ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪಿಸಿದ ಸಚಿವ ಡಿ.ಕೆ.ಶಿವಕುಮಾರ್‌, ನಾಟಕ ಕಲಾವಿದರು ಬಣ್ಣಹಾಕಿ ಕೊಂಡು ನಾಟಕ ಮಾಡುತ್ತಾರೆ. ಆದರೆ ನಾವು ಬಣ್ಣ ಹಾಕಿಕೊಳ್ಳದೇ ನಾಟಕವಾಡುತ್ತಿದ್ದೇವೆ. ಈ ಹಿಂದೆ, ಶಾಸಕರನ್ನು ದೇವರಂತೆ ನೋಡುವ ಪರಿಸ್ಥಿತಿ ಇತ್ತು.ಆದರೆ ಇಂದು ಕಳ್ಳರ ರೀತಿಯಲ್ಲಿ ನೋಡಲಾಗುತ್ತಿದೆ ಇದಕ್ಕೆಲ್ಲ ಮಾಧ್ಯಮಗಳು ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.

Advertisement

ಸುದ್ದಿಯನ್ನು ವೇಗವಾಗಿ ಹೇಳುವ ಧಾವಂತದಲ್ಲಿ ಮಾಧ್ಯಮಗಳು ಇಂದು ಹಲವು ರೀತಿಯ ಅನಾಹುತಗಳಿಗೆ ಕಾರಣವಾಗುತ್ತಿವೆ. ಕೆಲವು ಪ್ರಕರಣಗಳಲ್ಲಿ ನ್ಯಾಯಮೂರ್ತಿಗಳ ರೀತಿಯಲ್ಲೆ ತೀರ್ಪು ನೀಡುತ್ತವೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಪ್ರಜಾಪ್ರಭುತ್ವದ ನಾಲ್ಕನೇ ಅಂಗದಲ್ಲಿ ದುಡಿಯುತ್ತಿರುವವರು ತಮ್ಮ ಆತ್ಮ ಸಾಕ್ಷಿಯಂತೆ ಕಾರ್ಯನಿರ್ವಹಿಸಬೇಕು.ಉತ್ತಮ ಸಮಾಜ ಕಟ್ಟಲು ಹೆಜ್ಜೆಇರಿಸಬೇಕು ಎಂದರು.

ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಸಿದ್ಧರಾಜು ಮಾತನಾಡಿ,ಯುವ ಪತ್ರಕರ್ತರನ್ನು ಬೆಳೆಸುವ ನಿಟ್ಟಿನಲ್ಲಿ ಮಾಧ್ಯಮ ಕೆಲಸ ಮಾಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಯುವ ಪತ್ರಕರ್ತರಿಗೆ ಕಾರ್ಯಕ್ರಮ ರೂಪಿಸಲಾಗಿದ್ದು, ಈಗಾಗಲೇ ಫ‌ಲಾನುಭವಿಗಳಿಗೆ ಐಪ್ಯಾಡ್‌ ನೀಡಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ  ಎಚ್‌.ಬಿ.ದಿನೇಶ್‌, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಸಿ.ರೂಪ ಉಪಸ್ಥಿತರಿದ್ದರು. ಜೀವಮಾನದ ಸಾಧನೆಗೆ ವಿಶೇಷ ಪ್ರಶಸ್ತಿ ಪಡೆದ ಧರ್ಮಾವರಪು ಬಾಲಾಜಿ, ಚಿಕ್ಕಬಳ್ಳಾಪುರ ಜಿಲ್ಲೆಯ ಉದಣಿಯವಾಣಿ ವರದಿಗಾರ ಕಾಗತಿ ನಾಗರಾಜಪ್ಪ, ಕೆ.ಆರ್‌.ಪೇಟೆಯ ವರದಿಗಾರ ಮಂಜುನಾಥ್‌,

ಪತ್ರಕರ್ತರಾದ ಚೆನ್ನೇಗೌಡ,ದೊಡ್ಡ ಬೊಮ್ಮಯ್ಯ, ಜನಾರ್ಧನಾಚಾರಿ, ಪ್ರಕಾಶ್‌ ಕುಗ್ವೆ, ಕಂ.ಕ.ಮೂರ್ತಿ, ವಿಶ್ವನಾಥ್‌ ಸುವರ್ಣ, ಪ್ರೇಮಕುಮಾರ್‌ ಹರಿಯಬ್ಬೆ, ಬಿ.ಎಸ್‌.ಸತೀಶ್‌ಕುಮಾರ್‌, ರಾಮು ಪಾಟೀಲ, ದೇಶಾದ್ರಿ ಹೊಸಮನೆ, ಹರಿಪ್ರಸಾದ್‌ ಸೇರಿ 55 ಮಂದಿ ಪತ್ರಕರ್ತರಿಗೆ 2018ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next