Advertisement

ಬಿಡಿ ಮನೆ ನಿರ್ಮಾಣಕ್ಕೆ ಮುಂದಾದ ಬಿಡಿಎ

12:15 PM Aug 10, 2018 | |

ಬೆಂಗಳೂರು: ಪರಿಸರ ಸ್ನೇಹಿ ವಿಲ್ಲಾಗಳತ್ತ ಚಿತ್ತಹರಿಸಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದೀಗ ಬಿಡಿ ಮನೆಗಳ (ಇಂಡಿಪೆಂಡೆಂಟ್‌ ಹೌಸ್‌) ನಿರ್ಮಾಣಕ್ಕೆ ಮುಂದಾಗಿದೆ.

Advertisement

ಆಲೂರಿನಲ್ಲಿ ನಿರ್ಮಿಸಿದ್ದ ವಿಲ್ಲಾಗಳಿಗೆ ಭಾರಿ ಬೇಡಿಕೆ ಬಂದಿದ್ದರಿಂದ ಮತ್ತಷ್ಟು ಉತ್ತೇಜನಗೊಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಗ್ರಾಹಕರ ಕೋರಿಕೆ ಮೆರೆಗೆ ಬಿಡಿ ಮನಗೆಳ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಈ ಬಗ್ಗೆ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಮುಂದಿನ ದಿನಗಳಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಮನೆಗಳು ತಲೆಎತ್ತಲಿವೆ.

ಆಲೂರಿನಲ್ಲಿ ಬಿಡಿಎ ಈ ಹಿಂದೆ 450 ವಿಲ್ಲಾಗಳನ್ನು ನಿರ್ಮಾಣ ಮಾಡಿತ್ತು. ಇದರಲ್ಲಿ 410 ಮಾರಾಟವಾಗಿವೆ. ಆಷಾಢದ ನಂತರ ಉಳಿದ ವಿಲ್ಲಾಗಳು ಮಾರಾಟವಾಗುವ ನಿರೀಕ್ಷೆ ಇದೆ. ಕಣಮಿಣಿಕೆ ಮತ್ತು ಕೋಮಘಟ್ಟಗಳಲ್ಲಿ ಬಿಡಿಎ ನಿರ್ಮಿಸಿದ್ದ ಅಪಾರ್ಟ್‌ ಮೆಂಟ್‌ಗಳಿಗೆ ಬೇಡಿಕೆ ಬಂದಿದ್ದು, ಇದರಿಂದಾಗಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬಿಡಿ ಮನೆಗಳ ನಿರ್ಮಾಣಕ್ಕೆ ಬಿಡಿಎ ಮುಂದಡಿ ಇರಿಸಿದೆ. 

ತುಮಕೂರು ರಸ್ತೆ ಬಳಿ ದಾಸನಪುರ ಹೋಬಳಿಯ ಹುನ್ನಿಗೆರೆಯಲ್ಲಿನ 20 ಎಕರೆ ಪ್ರದೇಶದಲ್ಲಿ ನವೀನ ಮಾದರಿಯ 600 ಮನೆಗಳನ್ನು ನಿರ್ಮಿಸಲು ಪ್ರಾಧಿಕಾರ ತೀರ್ಮಾನಿಸಿದೆ. ಇಲ್ಲಿ ಒಂದು ಬಿಎಚ್‌ಕೆಯ 300, 3 ಬಿಎಚ್‌ಕೆಯ 200 ಮತ್ತು 4 ಬಿಎಚ್‌ಕೆಯ 100 ಮನೆಗಳ ನಿರ್ಮಾಣ ಮಾಡಲಿದೆ.

ಕಳೆದೆರಡು ವರ್ಷಗಳಲ್ಲಿ ಕಟ್ಟಡ ಸಾಮಗ್ರಿಗಳ ದರ ಹೆಚ್ಚಾಗಿದೆ. ಭೂಮಿ ಮೌಲ್ಯವೂ ದುಬಾರಿಯಾಗಿದೆ. ಹೀಗಾಗಿ ಆಲೂರಿಗಿಂತ ಇಲ್ಲಿ ದರ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯಕ್ಕೆ ದರ ಇನ್ನೂ ನಿಗದಿಯಾಗಿಲ್ಲ. ಬಡಾವಣೆಯ ಜಾಗದ ವೆಚ್ಚ ಹಾಗೂ ನಿರ್ಮಾಣ ವೆಚ್ಚ ಆಧರಿಸಿ ಬಿಡಿಎ ದರ ನಿಗದಿಪಡಿಸಲಿದೆ.

Advertisement

ಸೋಲಾರ್‌ ಪಾರ್ಕ್‌: ಬಿಡಿ ಮನೆಗಳ ನಿರ್ಮಾಣ ಪ್ರದೇಶದಲ್ಲಿ ಸೋಲಾರ್‌ ಪಾರ್ಕ್‌ ತಲೆ ಎತ್ತಲಿದೆ. ವಿದ್ಯುತ್‌ ಆಗಾಗ ಕೈ ಕೊಡುತ್ತಿರುವುದನ್ನು ಮನಗಂಡು ಸೋಲಾರ್‌ ಪಾರ್ಕ್‌ಗೆ ಆದ್ಯತೆ ನೀಡಲಾಗಿದೆ. ಜತೆಗೆ ಸುಸಜ್ಜಿತ ಪಾರ್ಕಿಂಗ್‌, ಆಟದ ಮೈದಾನ, ಉತ್ತಮ ರಸ್ತೆ ನಿರ್ಮಾಣಕ್ಕೂ ಒತ್ತು ನೀಡಲಾಗುತ್ತಿದೆ. ಗ್ರಾಹಕರಿಗೆ ಅಗತ್ಯ ವಸ್ತು ಕೊಳ್ಳಲು ತೊಂದರೆ ಆಗಬಾರದು ಎಂಬ ಉದ್ದೇಶದಿಂದ ನಿರ್ಮಾಣ ಪ್ರದೇಶದಲ್ಲಿ ಒಟ್ಟು 10 ಅಂಗಡಿಗಳನ್ನು ಬಿಡಿಎ ನಿರ್ಮಿಸಲಿದೆ.

ಎಲ್ಲ ವಸ್ತುಗಳು ಈ ಅಂಗಡಿಗಳಲ್ಲೇ ದೊರೆಯಲಿದ್ದು, ದಿನನಿತ್ಯದ ಆಗತ್ಯ ವಸ್ತುಗಳನ್ನು ಕೊಳ್ಳಲು ನಿವಾಸಿಗಳು ಬೇರೆಡೆ ಹೋಗುವ ಅಗತ್ಯ ಇರುವುದಿಲ್ಲ ಎಂದಿರುವ ಬಿಡಿಎ ಹಿರಿಯ ಅಧಿಕಾರಿಗಳು, ಎಲ್ಲ ವರ್ಗದವರಿಂದಲೂ ಬಿಡಿ ಮನೆಗಾಗಿ ಬೇಡಿಕೆ ಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಮನೆಗಳ ನಿರ್ಮಾಣ ಕಾರ್ಯಕ್ಕೆ ಸದಸ್ಯದಲ್ಲೆ ಚಾಲನೆ ಸಿಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದ್ದಾರೆ.

ಮೆಜೆಸ್ಟಿಕ್‌ನಿಂದ 24 ಕಿ.ಮೀ ದೂರ.: ಹುನ್ನಿಗೆರೆ ಪ್ರದೇಶವು ನೆಲಮಂಗಲದ ಆರ್‌ಟಿಒ ಕಚೇರಿಯಿಂದ 3.5 ಕಿ.ಮೀ, ಮೆಜೆಸ್ಟಿಕ್‌ ಬಸ್‌ ನಿಲ್ದಾಣದಿಂದ 24 ಕಿ.ಮೀ. ಹಾಗೂ ತುಮಕೂರು ರಸ್ತೆಯ ಅಗರವಾಲ್‌ ಭವನದಿಂದ 5 ಕಿ.ಮೀ. ಒಳಗೆ ಇದೆ. ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಿಂದ (ಬಿಐಇಸಿ) ಅಂದಾಜು 4 ಕಿ.ಮೀ ದೂರವಾಗಲಿದೆ. 

ಬಿಡಿ ಮನೆಗಳಿಗಾಗಿ ಗ್ರಾಹಕರಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಿನ ದಿನಗಳಲ್ಲಿ ಮನೆಗಳ ನಿರ್ಮಾಣಕ್ಕೆ ಮುಂದಾಗಲಿದೆ.
-ಎನ್‌.ಜಿ.ಗೌಡಯ್ಯ, ಬಿಡಿಎ ಅಭಿಯಂತರ ಅಧಿಕಾರಿ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next