ಬೆಂಗಳೂರು: ನಗರದ ಹಲವಡೆ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗಳಲ್ಲಿ ಮಾರಾಟವಾಗದ ಫ್ಲ್ಯಾಟ್‌ಗಳ ಹಂಚಿಕೆಗೆ ಸಂಬಂಧಪಟ್ಟಂತೆ ಪೊಲೀಸ್ ಇಲಾಖೆಯೊಂದಿಗೆ ಮಾತುಕತೆ ನಡೆಸಿರುವ ಬಿಡಿಎ ಇದೀಗ ಗೃಹ ರಕ್ಷಕ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯೊಂದಿಗೂ ಫ್ಲ್ಯಾಟ್ ಮಾರಾಟ ಸಂಬಂಧ ಮಾತುಕತೆ ಆರಂಭಿಸಿದೆ.
ಈ ಹಿಂದೆ ಇಲಾಖೆಗೆ ಅಗತ್ಯವಾದ ವಸತಿ ಸಮುಚ್ಚಯಗಳನ್ನು ಪೊಲೀಸ್ ಗೃಹ ನಿರ್ಮಾಣ ಮಂಡಳಿಯೇ ನಿರ್ಮಿಸುತ್ತಿತ್ತು. ಆದರೆ ಈಚಿನ ದಶಕಗಳಲ್ಲಿ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವುದರಿಂದ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಇತರೆ ಸಲಕರಣೆಗಳ ಬೆಲೆಯೂ ಗಗನ ಮುಖೀಯಾಗಿದೆ. ಜತೆಗೆ ಸೂಕ್ತ ಭೂಮಿಯ ಲಭ್ಯತೆ ಕೊರತೆಯೂ ಇರುವುದರಿಂದ ಗೃಹ ನಿರ್ಮಾಣ ಕಾರ್ಯಕ್ಕೆ ಹಿನ್ನಡೆಯಾಗಿದೆ.
ಆ ಹಿನ್ನೆಲೆಯಲ್ಲಿ ಗೃಹ ರಕ್ಷಕ ಮತ್ತು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು ತನ್ನ ಸಿಬ್ಬಂದಿಗೆ ಬಿಡಿಎ ನಿರ್ಮಿಸಿರುವ ವಸತಿ ಸಮುಚ್ಚಯಗಳನ್ನು ಖರೀದಿಸಲು ಚಿಂತನೆ ನಡೆಸಿದೆ. ಇನ್ನೊಂದೆಡೆ ಬಿಡಿಎ ಮೈಸೂರು ರಸ್ತೆಯ ಕಣ್‌ಮಿಣಿಕೆಯಲ್ಲಿ ಹಲವು ವಸತಿ ಸಮುಚ್ಚಯ ನಿರ್ಮಿಸಿದ್ದು, ಫ್ಲ್ಯಾಟ್‌ಗಳು ಮಾರಾಟವಾಗದೆ ಹಾಗೆ ಉಳಿದಿವೆ. ಈ ಫ್ಲ್ಯಾಟ್‌ಗಳನ್ನು ಗೃಹ ರಕ್ಷಕ ಮತ್ತು ಅಗಿ °ಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು ತನ್ನ ಸಿಬ್ಬಂದಿ ಬಳಕೆಗೆ ಖರೀದಿಸಲು ಚಿಂತನೆ ನಡೆಸಿದೆ.
ಎಲ್ಲೆಲ್ಲಿ ಅಪಾರ್ಟ್‌ಮೆಂಟ್‌ಗಳು: ಬಿಡಿಎ ಈಗಾಗಲೇ ನಗರದ ಬೇರೆ – ಬೇರೆ ಕಡೆಗಳಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸಿದೆ. ಆಲೂರು, ಗುಂಜೂರು, ಕಣ್‌ಮಿಣಿಕೆ, ಕೊಮ್ಮಘಟ್ಟ, ದೊಡ್ಡಬನಹಳ್ಳಿ, ವಡೇರಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಸುಸಜ್ಜಿತವಾದ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿದೆ. ಈಗಾಗಲೇ ಇಲಾಖೆಯ ಹಿರಿಯ ಅಧಿಕಾರಿಗಳು ಕಣ್‌ಮಿಣಿಕೆ, ವಡೇರಹಳ್ಳಿ ಸೇರಿದಂತೆ ಕೆಲವೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಸತಿ ಗೃಹಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗೃಹ ರಕ್ಷಕ ಮತ್ತು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗೂ ಅದರಕ್ಕೆ ಆದ ಪ್ರಕ್ರಿಯೆ ಇರುತ್ತವೆ. ಹೀಗಾಗಿ ಈ ಎಲ್ಲಾ ಪ್ರಕ್ರಿಯೆಗಳು ಅಂತಿಮಗೊಂಡ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ. ಹಿಂದೆ ಪೊಲೀಸ್ ಇಲಾಖೆ ತನ್ನ ಸಿಬ್ಬಂದಿಗಾಗಿ ಬಿಡಿಎ ಫ್ಲಾಟ್ ಖರೀದಿಗೆ ಮುಂದಾಗಿತ್ತು. ಬಳಿಕ ಕೆನರಾ ಬ್ಯಾಂಕ್ ಕೂಡ ಇದೇ ಹಾದಿ ಅನುಸರಿಸಿದ್ದನ್ನು ಸ್ಮರಿಸಬಹುದು.
ಸಭೆಯಲ್ಲಿ ಚರ್ಚೆ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಗೃಹ ಇಲಾಖೆಯ ಜತೆಗೆ ಬಿಡಿಎ ಅಧ್ಯಕ್ಷರೂ ಆಗಿದ್ದಾರೆ. ಹೀಗಾಗಿ, ಖರೀದಿ ಪ್ರಕ್ರಿಯೆ ಮತ್ತಷ್ಟು ಸುಲಭವಾಗಲಿದೆ. ಇತ್ತೀಚೆಗೆ ಬಿಡಿಎ ಕೇಂದ್ರ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲೂ ಈ ಬಗ್ಗೆ ಚರ್ಚೆ ನಡೆದಿದೆ.
ಮೈಸೂರು ರಸ್ತೆ ಸಮೀಪದ ಕಣ್‌ಮಿಣಿಕೆಯಲ್ಲಿ ಹಲವು ಫ್ಲ್ಯಾಟ್‌ಗಳು ಮಾರಾಟವಾಗದೆ ಉಳಿದಿವೆ. ಜತೆಗೆ ವಡೇರ ಹಳ್ಳಿಯ ವಸತಿಗೃಹಗಳಲ್ಲೂ ಇನ್ನೂ ಫ್ಲ್ಯಾಟ್‌ಗಳು ಮಾರಾಟಕ್ಕಿವೆ. ಈ ಫ್ಲ್ಯಾಟ್‌ಗಳನ್ನೇ ಇಲಾಖೆ ಖರೀದಿಸುವ ಸಾಧ್ಯತೆ ಇದೆ ಎಂದು ಬಿಡಿಎನ ಹಿರಿಯ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಇಲಾಖೆಯ ಸಿಬ್ಬಂದಿಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ ಫ್ಲ್ಯಾಟ್ ಖರೀದಿ ಸಂಬಂಧ ಮಾತುಕತೆ ನಡೆದಿದೆ. ಆದರೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.
-ಎಂ.ಎನ್.ರೆಡ್ಡಿ, ಪೊಲೀಸ್ ಮಹಾನಿರ್ದೇಶಕರು,