Advertisement

ಹಾಸ್ಟೆಲ್‌ ಮಲಿನ ನೀರು ರಸ್ತೆ ಬದಿಗೆ; ವ್ಯಾಪಿಸಿದ ದುರ್ನಾತ

01:05 AM Jan 25, 2020 | Sriram |

ಕುಂದಾಪುರ: ನಗರದಲ್ಲಿ ಬಿಸಿಎಂ ಹಾಸ್ಟೆಲ್‌ ಎಲ್ಲಿದೆ ಎಂದು ಕೇಳಿದರೆ ಸಿಗುವ ಉತ್ತರ ಬಹಳ ಸುಲಭದ್ದು. ಇಲ್ಲಿನ ತಾಲೂಕು ಪಂಚಾಯತ್‌ ಬಳಿಯ ರಸ್ತೆಯಲ್ಲಿ ಹೋಗುವಾಗ ಹೊಚ್ಚಹೊಸ ದೊಡ್ಡ ಕಟ್ಟಡ ಕಾಣುತ್ತದೆ. ಅಲ್ಲಿಂದ ಮುಂದೆ ಸಾಗಿದಾಗ ವಾಸನೆ ಮೂಗಿಗೆ ಅಡರುತ್ತದೆ. ಹಾಗೆ ಮೂಗು ಮುಚ್ಚಿಕೊಂಡು ಹೋದರೆ ಸಿಗುವುದೇ ಬಿಸಿಎಂ ಹಾಸ್ಟೆಲ್‌!

Advertisement

ಅವ್ಯವಸ್ಥೆ
ಇದು ಹಾಸ್ಟೆಲ್‌ ಮಕ್ಕಳ ತಪ್ಪಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ಹಾಸ್ಟೆಲ್‌ನಲ್ಲಿ ಮಿತಿಗಿಂತ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು. ಹಳೆ ಹಾಸ್ಟೆಲ್‌ ಕಟ್ಟಡದಲ್ಲಿ 100 ಮಕ್ಕಳ ಸಾಮರ್ಥ್ಯ ಇದ್ದು ಅಲ್ಲಿ ಈಗ 200 ಮಕ್ಕಳನ್ನು ತುಂಬಿಸಲಾಗಿದೆ. ಅಷ್ಟೂ ಮಂದಿ ಇರುವ ಜಾಗದಲ್ಲೇ ಅದೇ ಶೌಚಾಲಯ, ಸ್ನಾನದ ಕೋಣೆ, ಬಟ್ಟೆ ಒಗೆಯುವ ಸ್ಥಳವನ್ನು ಬಳಸಿಕೊಂಡು ಉಳಕೊಳ್ಳಬೇಕಾಗಿದೆ.

ವಾಸನೆ
ಸ್ನಾನಗೃಹದ, ಬಟ್ಟೆ ಒಗೆದ ನೀರು ರಸ್ತೆ ಬದಿಯ ಚರಂಡಿ ಸೇರುತ್ತದೆ. ಇದು ಅಸಾಧ್ಯ ವಾತಾವರಣ ಉಂಟು ಮಾಡುತ್ತದೆ. ಇಲ್ಲೇ ಸನಿಹದಲ್ಲಿ ಮಹಿಳಾ ಮಂಡಳಗಳ ಒಕ್ಕೂಟ, ಸಾಂತ್ವನ ಕೇಂದ್ರ, ರೋಟರಿ ಸಭಾಂಗಣ, ಅಂಬೇಡ್ಕರ್‌ ಸಭಾಭವನ ಇದ್ದು ಸಾರ್ವಜನಿಕರು ಬರುತ್ತಾರೆ. ಇಲ್ಲಿಗೆ ಬರುವವರೆಲ್ಲ ನೀರು ಹರಿವಾಗ ವಾಸನೆ ಸಹಿಸಿಕೊಳ್ಳಬೇಕಾದ್ದು ಅನಿವಾರ್ಯವಾಗಿದೆ.

ಭೇಟಿ
ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಅವರು ಇಲ್ಲಿಗೆ ಎರಡು ಬಾರಿ ಭೇಟಿ ನೀಡಿದ್ದು ಸ್ವಚ್ಛ ತೆಗೆ ಆದ್ಯತೆ ನೀಡಲು ಸೂಚನೆ ನೀಡಿದ್ದಾರೆ. ಕೊಳಕು ನೀರು ರ‌ಸ್ತೆ ಬದಿಯ ಚರಂಡಿ ಸೇರುವುದನ್ನು ಮನಗಂಡು ಜಿ.ಪಂ. ವತಿಯಿಂದ ಅನುದಾನ ನೀಡಿ ಶೌಚಾಲಯ ನಿರ್ಮಾಣಕ್ಕೆ ಆದೇಶಿಸಿದ್ದಾರೆ. ಪುರಸಭೆಯೂ ಅನುದಾನ ಕಾಯ್ದಿರಿಸಿದೆ. ಆದರೆ ಅದಾಗಿ ವರ್ಷಗಳಾಗುತ್ತಾ ಬಂದರೂ ಬಿಸಿಎಂ ಇಲಾಖೆ ತುಟಿಪಿಟಕ್‌ ಎನ್ನಲಿಲ್ಲ. ಶೌಚಾಲಯಗಳನ್ನು ಕಟ್ಟಿಸಲಿಲ್ಲ. ನೀರು ರಸ್ತೆ ಬದಿ ಚರಂಡಿ ಸೇರದಂತೆ ಮಾಡಲೇ ಇಲ್ಲ.

ಹೊಸ ಕಟ್ಟಡ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಡಿ. ದೇವರಾಜ ಅರಸು ಬಿಸಿಎಂ ಮೆಟ್ರಿಕ್‌ ಅನಂತರದ ಬಾಲಕಿಯರ ಹಾಸ್ಟೆಲ್‌2001ರಲ್ಲಿ ಮಂಜೂರಾಗಿದೆ. ಪ್ರಸ್ತುತ ಇರುವ ಕಟ್ಟಡದಲ್ಲಿ 100 ವಿದ್ಯಾರ್ಥಿನಿಯರ ಸಾಮರ್ಥ್ಯ ಎಂದಾದರೂ 200 ವಿದ್ಯಾರ್ಥಿನಿಯರಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಕಟ್ಟಡ ಮಂಜೂರಾಗಿತ್ತು. ಹಳೆ ಕಟ್ಟಡದ ಪಕ್ಕದಲ್ಲೇ 34 ಸೆಂಟ್ಸ್‌ ಜಾಗವಿದ್ದು 3.37 ಕೋ.ರೂ. ವೆಚ್ಚದಲ್ಲಿ ಹಾಸ್ಟೆಲ್‌ನ ಹೊಸ ಕಟ್ಟಡ ನಿರ್ಮಾಣವಾಗಿದೆ. ಇದರಲ್ಲಿ 100 ವಿದ್ಯಾರ್ಥಿನಿಯರಿಗೆ ತಂಗಲು ಅನುವಾಗುವಂತೆ 10 ಕೊಠಡಿಗಳಿವೆ.

Advertisement

ಎಷ್ಟು ಶೀಘ್ರ ಸಾಧ್ಯವೋ ಅಷ್ಟು ಶೀಘ್ರ ಹೊಸ ಕಟ್ಟಡ ಬಳಕೆಗೆ ದೊರೆತರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಪುರಸಭೆಗೆ ಕಪ್ಪುಚುಕ್ಕಿ
ಸ್ವಚ್ಛ ಕುಂದಾಪುರ, ಸುಂದರ ಕುಂದಾಪುರ ಎಂದು ಘೋಷಣೆ ಹಾಕುವ ಕುಂದಾಪುರ ಪುರಸಭೆಗೆ ಈ ಕೊಳಚೆಯಿಂದಾಗಿ ಕಪ್ಪುಚುಕ್ಕಿ ಇಟ್ಟಂತಾಗಿದೆ. ತಾಲೂಕು ಪಂಚಾಯತ್‌ ಸನಿಹ ದಾಟಿ ಬಂದವರಿಗೆಲ್ಲ ಈ ದುರ್ನಾತವೇ ಮೊದಲ ಸ್ವಾಗತವಾಗಿದೆ ಬಿಸಿಎಂ ಇಲಾಖೆ ಕೂಡಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಯೋಚಿಸಬೇಕಿದೆ.

ಶೀಘ್ರ ಕಾಮಗಾರಿ
ಈ ಕುರಿತು ಸಾಕಷ್ಟು ದೂರುಗಳು ಬಂದಿವೆ. ಜಿ.ಪಂ. ಸೂಚನೆಯಂತೆ ಅನುದಾನ ಮೀಸಲಿಡಲಾಗಿದೆ. ಅದಕ್ಕೂ ಮೊದಲು ಕಾಂಕ್ರೀಟ್‌ ಚರಂಡಿ ನಿರ್ಮಿಸಿ ಅದಕ್ಕೆ ಸ್ಲಾéಬ್‌ ಮುಚ್ಚಲು 8.5 ಲಕ್ಷ ರೂ. ಅಂದಾಜುಪಟ್ಟಿ ತಯಾರಿಸಲಾಗಿದೆ. ಏಕಕಾಲದಲ್ಲಿ ಅಷ್ಟು ಅನುದಾನ ಅಲಭ್ಯವಾದ ಕಾರಣ 3.5 ಲಕ್ಷ ರೂ.ಗಳ ಕಾಮಗಾರಿ ನಡೆಸಲಾಗುವುದು.
-ಗೋಪಾಲಕೃಷ್ಣ ಶೆಟ್ಟಿ, ಮುಖ್ಯಾಧಿಕಾರಿ, ಪುರಸಭೆ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next