ಲಂಡನ್: ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಮೊದಲ ವಿಶ್ವಕಪ್ ಪಂದ್ಯದ ವೇಳೆ ಕೀಪರ್ ಮಹೇಂದ್ರ ಸಿಂಗ್ ಧೋನಿ ಧರಿಸಿದ ಗ್ಲೌಸ್‌ನಲ್ಲಿದ್ದ ಸೇನೆಯ ಲಾಂಛನಕ್ಕೆ ಐಸಿಸಿ ಬಲವಾದ ಆಕ್ಷೇಪ ವ್ಯಕ್ತಪಡಿಸಿ ಇದನ್ನು ಕಿತ್ತು ಹಾಕಲು ಸೂಚಿಸಿದೆ. ಇದರ ಬೆನ್ನಲ್ಲೇ ಬಿಸಿಸಿಐ ಧೋನಿ ಬೆಂಬಲಕ್ಕೆ ನಿಂತಿದೆ.
ಇದು ಸೇನೆಯ ಲಾಂಛನವಲ್ಲ, ಟೆರಿಟೋರಿಯಲ್ ಆರ್ಮಿ ಯ ಪ್ಯಾರಾಶೂಟ್ ರೆಜಿಮೆಂಟ್‌ನ ಲಾಂಛನದ ಒಂದು ಅಂಶ ಮಾತ್ರ. ಇದು ಐಸಿಸಿ ನಿಯಮವನ್ನು ಉಲ್ಲಂಘಿಸುವುದಿಲ್ಲ ಎಂಬ ಸಮಜಾಯಿಶಿ ನೀಡಿ ಲಾಂಛನವನ್ನು ಉಳಿಸಿಕೊಳ್ಳಲು ಬಿಸಿಸಿಐ ಪ್ರಯತ್ನಿಸುತ್ತಿದೆ.
ಐಸಿಸಿ ನಿಯಮದ ಪ್ರಕಾರ ಆಟಗಾರರು ಮೈದಾನದಲ್ಲಿ ಯಾವುದೇ ವಾಣಿಜ್ಯ, ಧಾರ್ಮಿಕ ಅಥವಾ ಸೇನೆಯ ಲಾಂಛನಗಳನ್ನು ಧರಿಸಬಾರದು.
ಧೋನಿಯ ಗ್ಲೌಸ್‌ನಲ್ಲಿದ್ದ ಕಠಾರಿ ಲಾಂಛನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕ ಮಂದಿ ಧೋನಿಯ ತಾಯ್ನಾಡಿನ ಪ್ರೇಮವನ್ನು ಮೆಚ್ಚಿಕೊಂಡಿದ್ದಾರೆ. ಆದರೆ ಇದು ನಿಯಮಕ್ಕೆ ವಿರುದ್ಧವಾಗಿರುವುದರಿಂದ ಮುಂದಿನ ಪಂದ್ಯದ ವೇಳೆ ಇರುವುದು ಅನುಮಾನ ಎನ್ನಲಾಗಿದೆ.
ಬಿಸಿಸಿಐ ಆಡಳಿತ ಸಮಿತಿಯ ಮುಖ್ಯಸ್ಥರಾಗಿರುವ ವಿನೋದ್ ರಾಯ್ ಲಾಂಛನವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಕ್ರೀಡಾ ಸಚಿವರ ಬೆಂಬಲ
ಕ್ರೀಡಾ ಸಚಿವ ಕಿರಣ್ ರಿಜಿಜು ಕೂಡ ಧೋನಿಯ ಬೆಂಬಲಕ್ಕೆ ನಿಂತಿದ್ದಾರೆ. ‘ಇದು ದೇಶದ ಭಾವನೆಗಳಿಗೆ ಸಂಬಂಧಿಸಿದ ವಿಚಾರ. ದೇಶದ ಹಿತಾಸಕ್ತಿಯನ್ನೂ ಗಮ ನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸಮಂಜಸ ತೀರ್ಮಾನವೊಂದನ್ನು ತೆಗೆದುಕೊಳ್ಳುವಂತೆ ಬಿಸಿಸಿಐಗೆ ಸೂಚಿಸಿದ್ದೇನೆ’ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.