ಹೊಸದಿಲ್ಲಿ : ಬಿಸಿಸಿಐ ಅಧ್ಯಕ್ಷ ಪದದಿಂದ ಅನುರಾಗ್ ಠಾಕೂರ್ ಅವರನ್ನು ಕಿತ್ತೆಸೆದ ಒಂದು ದಿನದ ತರುವಾಯ ಸುಪ್ರೀಂ ಕೋರ್ಟ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಹೊಸ ಆಡಳಿತಗಾರರ ಹೆಸರುಗಳನ್ನು ಶಿಫಾರಸು ಮಾಡಲಿದ್ದ ಎಫ್ ಎಸ್ ನಾರಿಮನ್ ಅವರನ್ನು ತೆಗೆದು ಅವರ ಸ್ಥಾನದಲ್ಲಿ ಹಿರಿಯ ವಕೀಲ ಅನಿಲ್ ದಿವಾನ್ ಅವರನ್ನು ನೇಮಿಸಿದೆ.
ನಾರಿಮನ್ ಅವರು ತಾನು ಬಿಸಿಸಿಐ ವಕೀಲನಾಗಿ ಪ್ರತಿನಿಧಿಸುತ್ತಿರುವುದರಿಂದ, ಮಂಡಳಿಗೆ ಹೊಸ ಆಡಳಿತಗಾರರ ಹೆಸರುಗಳನ್ನು ಶಿಫಾರಸು ಮಾಡುವ ಪ್ರಕ್ರಿಯೆಯಿಂದ ಹೊರಗುಳಿಯಲು ಬಯಸುವುದಾಗಿ ಹೇಳಿದ್ದರು.
ಈ ನಡುವೆ ಲೋಧಾ ಸಮಿತಿಯ ಎಲ್ಲ ಶಿಫಾರಸುಗಳ ಅನುಷ್ಠಾನವನ್ನು ವಿರೋಧಿಸುವುದಕ್ಕೆ ಐಸಿಸಿಯ ನೆರವನ್ನು ಯಾಚಿಸಿದ್ದ ಬಿಸಿಸಿಐ ಪದಚ್ಯುತ ಅಧ್ಯಕ್ಷ ಅನುರಾಗ್ ಠಾಕೂರ್ ಅವರಿಗೆ ಸುಪ್ರೀಂ ಕೋರ್ಟ್ ಶೋಕಾಸ್ ನೊಟೀಸ್ ಜಾರಿ ಮಾಡಿದೆ.
ಲೋಧಾ ಸಮಿತಿಯ ಮುಖ್ಯಸ್ಥರಾಗಿರುವ ಆರ್ ಎಂ ಲೋಧಾ ಅವರು ಸುಪ್ರೀಂ ಕೋರ್ಟಿನ ನಿನ್ನೆಯ ಆದೇಶವನ್ನು ಸ್ವಾಗತಿಸಿದ್ದು ಬಿಸಿಸಿಐ ಯನ್ನು ಸರಿದಾರಿಗೆ ತರುವಲ್ಲಿ ಇದು ತಕ್ಕುದಾದ ಕ್ರಮವಾಗಿದೆ ಎಂದು ಹೇಳಿದ್ದಾರೆ.
ಇದೇ ಜನವರಿ 19ರಂದು ಸುಪ್ರೀಂ ಕೋರ್ಟ್, ಬಿಸಿಸಿಐ ಆಡಳಿತ ಮಂಡಳಿಗೆ ನೇಮಕಗೊಳ್ಳಲು ಶಿಫಾರಸು ಮಾಡಲಾಗುವ ವ್ಯಕ್ತಿಗಳ ಹೆಸರುಗಳನ್ನು ಪರಿಶೀಲಿಸಲಿದೆ.