ಮುಂಬೈ: ಹಲವು ವಾರಗಳಿಂದ ಚರ್ಚೆಯ ವಿಚಾರವಾಗಿದ್ದ ಭಾರತ ಕ್ರಿಕೆಟ್ ತಂಡದ ತವರು ಪಂದ್ಯಗಳ ನೇರಪ್ರಸಾರದ ಹಕ್ಕನ್ನು ವಯಾಕಾಮ್ 18 ಪಡೆದುಕೊಂಡಿದೆ. ಆಗಸ್ಟ್ 31 ಮುಂದಿನ ಐದು ವರ್ಷಗಳ ಕಾಲ ಭಾರತೀಯ ಕ್ರಿಕೆಟ್ ತಂಡದ ತವರು ಪಂದ್ಯಗಳಿಗೆ ಟಿವಿ ಮತ್ತು ಡಿಜಿಟಲ್ ಹಕ್ಕುಗಳನ್ನು ವಯಾಕಾಮ್ 18 ತನ್ನ ಪಾಲಿಗೆ ಪಡೆದಿದೆ.
ಭಾರತದ 88 ತವರು ಪಂದ್ಯಗಳಿಗೆ ಪ್ರತ್ಯೇಕ ಟೆಲಿವಿಷನ್ ಮತ್ತು ಡಿಜಿಟಲ್ ಹಕ್ಕುಗಳ ಮಾರಾಟದಿಂದ ಒಟ್ಟು ಆದಾಯದಲ್ಲಿ ಒಂದು ಬಿಲಿಯನ್ ಯುಎಸ್ ಡಾಲರ್ (8200 ಕೋಟಿ ರೂ) ಬಿಸಿಸಿಐ ಪಡೆಯುವ ನಿರೀಕ್ಷೆಯಿದೆ ಎಂದು ಪಿಟಿಐ ವರದಿ ಮಾಡಿದೆ.
ಈ ಐದು ವರ್ಷಗಳ ಅವಧಿಯು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳ ಸರಣಿಯನ್ನು ಒಳಗೊಂಡಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತವು ಆಸ್ಟ್ರೇಲಿಯಾ ವಿರುದ್ಧ 21 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ, ಇದರಲ್ಲಿ ಐದು ಟೆಸ್ಟ್ ಪಂದ್ಯಗಳು, ಆರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು ಹತ್ತು ಟ್ವೆಂಟಿ 20 ಅಂತಾರಾಷ್ಟ್ರೀಯ ಪಂದ್ಯಗಳು ಸೇರಿವೆ.
ಇಂಗ್ಲೆಂಡ್ ವಿರುದ್ಧ 18 ಪಂದ್ಯಗಳು ನಡೆಯಲಿದೆ. ಇದಲ್ಲಿ ಹತ್ತು ಟೆಸ್ಟ್‌ಗಳು, ಮೂರು ಏಕದಿನ ಪಂದ್ಯಗಳು ಮತ್ತು ಐದು ಟಿ20 ಗಳು ಸೇರಿವೆ. ಈ ಅವಧಿಯಲ್ಲಿ ಭಾರತವು ಒಟ್ಟು 25 ಟೆಸ್ಟ್ ಗಳು, 27 ಏಕದಿನಗಳು ಮತ್ತು 36 ಟಿ20 ಪಂದ್ಯಗಳನ್ನು ಆಡುವುದು ಈಗಾಗಲೇ ನಿಗದಿಯಾಗಿದೆ.
ಟಿವಿ ಮತ್ತು ಡಿಜಿಟಲ್ ಹಕ್ಕು ಪಡೆಯುವ ರೇಸ್ ನಲ್ಲಿ ವಯಾಕಾಮ್ 18 ಜೊತೆಗೆ ಸ್ಟಾರ್ ಸ್ಪೋರ್ಟ್ಸ್ ಮತ್ತು ಸೋನಿ ಸ್ಪೋರ್ಟ್ಸ್ ಗಳಿದ್ದವು. ಇದುವರೆಗೆ ಭಾರತದ ತವರಿನ ಪಂದ್ಯಗಳ ಹಕ್ಕು ಸ್ಟಾರ್ ಸ್ಪೋರ್ಟ್ಸ್ ಬಳಿಯಿತ್ತು.