ಮುಂಬಯಿ: ರಕ್ತದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಭಾರತ ತಂಡದ ಮಾಜಿ ಆರಂಭಕಾರ, ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗೆ ಬಿಸಿಸಿಐ ಒಂದು ಕೋಟಿ ರೂ. ಆರ್ಥಿಕ ನೆರವು ಘೋಷಿಸಿದೆ.
ಮಾಜಿ ಕ್ರಿಕೆಟಿಗರಾದ ಕಪಿಲ್‌ದೇವ್, ಸಂದೀಪ್ ಪಾಟೀಲ್ ಮೊದಲಾದವರ ಮನವಿ ಹಾಗೂ ಕಳಕಳಿಗೆ ಕೆಲವೇ ಗಂಟೆಗಳಲ್ಲಿ ಸ್ಪಂದಿಸಿದ ಬಿಸಿಸಿಐ ಈ ಮಾನವೀಯ ನಿರ್ಧಾರಕ್ಕೆ ಮುಂದಾಗಿದೆ.
“ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಂಶುಮಾನ್ ಗಾಯಕ್ವಾಡ್ ಅವರ ಚಿಕಿತ್ಸೆಗೆ ಕೂಡಲೇ ಒಂದು ಕೋಟಿ ರೂ. ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸೂಚಿಸಿದ್ದಾರೆ’ ಎಂಬುದಾಗಿ ಬಿಸಿಸಿಐ ಅಪೆಕ್ಸ್ ಕೌನ್ಸಿನ್ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. 71 ವರ್ಷದ ಗಾಯಕ್ವಾಡ್ ಈಗ ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
“ಇಂಥ ಸಂದರ್ಭದಲ್ಲಿ ಮಂಡಳಿಯು ಗಾಯಕ್ವಾಡ್ ನೆರವಿಗೆ ಬದ್ಧವಾಗಿರುತ್ತದೆ. ಗಾಯಕ್ವಾಡ್ ಕುಟುಂಬದವರೊಂದಿಗೆ ಮಾತಾಡಿದ್ದು, ಯಾವುದೇ ಸಹಾಯಕ್ಕೂ ಸಿದ್ಧ ಎಂಬುದಾಗಿ ಜಯ್ ಶಾ ಭರವಸೆ ನೀಡಿದ್ದಾರೆ’ ಎಂಬುದಾಗಿ ಬಿಸಿಸಿಐ ತಿಳಿಸಿದೆ.
ಭಾರತ ತಂಡದ ಮಾಜಿ ನಾಯಕರಾಗಿದ್ದ ದತ್ತಾಜಿರಾವ್ ಗಾಯಕ್ವಾಡ್ ಅವರ ಪುತ್ರನಾಗಿರುವ ಅಂಶುಮಾನ್ ಗಾಯಕ್ವಾಡ್, 1975 -1985ರ ಅವಧಿಯಲ್ಲಿ ಭಾರತದ ಪರ 40 ಟೆಸ್ಟ್ ಆಡಿದ್ದರು. ಮಧ್ಯಮ ಕ್ರಮಾಂಕದಲ್ಲಿ ಟೆಸ್ಟ್ ಬದುಕು ಆರಂಭಿಸಿದ ಗಾಯಕ್ವಾಡ್, ಬಳಿಕ ಆರಂಭಿಕನಾಗಿ ಭಡ್ತಿ ಪಡೆದಿದ್ದರು. ಸುನೀಲ್ ಗಾವಸ್ಕರ್ ಅವರೊಂದಿಗೆ ಅನೇಕ ಉತ್ತಮ ಜತೆಯಾಟ ನಡೆಸಿದ್ದರು.