ಮುಂಬೈ: ಬಿಸಿಸಿಐ ಬಹು ನಿರೀಕ್ಷಿತಸರ್ವಸದಸ್ಯರ ವಿಶೇಷ ಸಭೆ ಸೋಮವಾರ ನಡೆಯಲಿದೆ. ಒಂದು ರಾಜ್ಯಕ್ಕೆ ಒಂದು ಮತವನ್ನು ರದ್ದು ಮಾಡುವುದು, ಮೂವರು ಸದಸ್ಯರ ಬಿಸಿಸಿಐ ಆಯ್ಕೆ ಸಮಿತಿಯನ್ನು ಮತ್ತೆ ಐದಕ್ಕೇರಿಸುವುದು, 3 ವರ್ಷಗಳ ಕಡ್ಡಾಯ ವಿಶ್ರಾಂತಿಯನ್ನು ರದ್ದು ಮಾಡುವುದು ಸಭೆಯಲ್ಲಿ ಮುಖ್ಯ ಚರ್ಚಾ ವಿಷಯವಾಗಲಿದೆ. ಇದನ್ನು ಹೊರತುಪಡಿಸಿ ಇತ್ತೀಚೆಗೆ ಭಾರತೀಯ ಕ್ರಿಕೆಟ್ ಕೋಚ್ ಹುದ್ದೆಗೆ ರಾಜೀನಾಮೆ ನೀಡಿರುವ ಅನಿಲ್ ಕುಂಬ್ಳೆ ವಿವಾದವೂ ಚರ್ಚೆಗೊಳಗಾಗಲಿದೆ.
ಕುಂಬ್ಳೆ ವಿವಾದ ಸಭೆಯ ವಿಚಾರಸೂಚಿಯಲ್ಲಿಲ್ಲ. ಆದರೂ ಸದಸ್ಯರ ಪ್ರಶ್ನೆಗಳ ಮೇರೆಗೆ ಕುಂಬ್ಳೆ ವಿವಾದವನ್ನು ಪ್ರಸ್ತಾಪಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ಬಿಸಿಸಿಐ ತಿಳಿಸಿದೆ.
ಸಭೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಅನರ್ಹರಾಗಿರುವ ಎನ್.ಶ್ರೀನಿವಾಸನ್, ನಿರಂಜನ್ ಶಾ ಕೂಡ ಭಾಗವಹಿಸಲಿದ್ದಾರೆ. ಈಡೇರಬಹುದೇ ನಿರೀಕ್ಷೆ?: ಬಿಸಿಸಿಐ ಪದಾಧಿಕಾರಿಗಳು, ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸರ್ವೋಚ್ಚ ನ್ಯಾಯಾಲಯದ ಕೆಲವು ನಿರ್ದೇಶನಗಳ ಕುರಿತಂತೆ ತೀವ್ರ ಅಸಮಾಧಾನ ಹೊಂದಿವೆ. ಸರ್ವೋಚ್ಚ ನ್ಯಾಯಾಲಯದಿಂದ ನಿಯಮಿಸಲ್ಪಟ್ಟಿರುವ ಆಡಳಿತಾಧಿಕಾರಿಗಳ ಗಮನಕ್ಕೆ ಇದನ್ನು ತರಲು ಪದೇ ಪದೇ ಯತ್ನಿಸಿದ್ದಾರೆ. ಒಂದು ರಾಜ್ಯಕ್ಕೆ ಒಂದೇ ಮತ, 3 ವರ್ಷಗಳ ಕಡ್ಡಾಯ ವಿಶ್ರಾಂತಿ ರದ್ದು, ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರನ್ನು ಮತ್ತೆ 5ಕ್ಕೇರಿಸುವುದು ಪದಾಧಿಕಾರಿಗಳ ಮುಖ್ಯ ಆಗ್ರಹ. ಇದಕ್ಕೆ ಇದುವರೆಗೆ ಸುಪ್ರೀಂ ನಿಯೋಜಿತ ಆಡಳಿತಾಧಿಕಾರಿಗಳು ನಕಾರ ಸೂಚಿಸುತ್ತಲೇ ಬಂದಿದ್ದಾರೆ. ಆದರೂ ಕೆಲವು ತಿಂಗಳ ಹಿಂದೆ ಈ ಬಗ್ಗೆ ಪನಃ ಪರಿಶೀಲಿಸುವ ಒಂದು ಸುಳಿವನ್ನೂ ನೀಡಿದ್ದಾರೆನ್ನುವುದು ಗಮನಾರ್ಹ.
ಒಂದು ವೇಳೆ “ಒಂದು ರಾಜ್ಯಕ್ಕೆ ಒಂದೇ ಮತ’ ರದ್ದಾದರೆ ವಿದರ್ಭ, ಮಹಾರಾಷ್ಟ್ರ, ಮುಂಬೈ, ಸೌರಾಷ್ಟ್ರ, ಗುಜರಾತ್, ಬರೋಡಾ ಕ್ರಿಕೆಟ್ ಸಂಸ್ಥೆಗಳು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲಿವೆ. ಜೊತೆಗೆ
ರೈಲ್ವೇಸ್, ಸರ್ವೀಸಸ್‌ನಂತಹ ರಾಜ್ಯಗಳೇ ಅಲ್ಲದ ಕ್ರಿಕೆಟ್ ಸಂಸ್ಥೆಗಳೂ ಮತವನ್ನು ಉಳಿಸಿಕೊಳ್ಳುವ ಅವಕಾಶವಿದೆ.
ಬಿಸಿಸಿಐ ಆಯ್ಕೆ ಸಮಿತಿಯನ್ನು ನ್ಯಾಯ ಪೀಠ 3ಕ್ಕಿಳಿಸಿತ್ತು. ಆದರೆ ದೇಶೀಯ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಈ
ಸಂಖ್ಯೆ ಸಾಲುವುದಿಲ್ಲ, ಮತ್ತೆ ಐದಕ್ಕೇರಿಸಬಹುದೆನ್ನುವುದು ಬಿಸಿಸಿಐ ಆಗ್ರಹ. ಈ ಬಗ್ಗೆಯೂ ಒಮ್ಮತದ ನಿರ್ಧಾರ ಆಗುವ ಸಾಧ್ಯತೆಯಿದೆ.
ಬಿಸಿಸಿಐಗೆ ತೊಡಕಾಗಿರುವ ಮತ್ತೂಂದು ಮುಖ್ಯ ನಿರ್ಧಾರ ಪ್ರತಿ ಪದಾಧಿಕಾರಿಯ ಅವಧಿ ಮುಗಿದ ಮೇಲೆ 3 ವರ್ಷಗಳ
ಕಡ್ಡಾಯ ವಿಶ್ರಾಂತಿ ಪಡೆಯಬೇಕೆಂಬ ನ್ಯಾಯಪೀಠದ ನಿರ್ದೇಶನ. ಹೀಗಾದರೆ ಬಂಗಾಳ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಸೌರವ್ ಗಂಗೂಲಿ ಕೂಡ ತಮ್ಮ ಅವಧಿ ಮುಗಿದ ನಂತರ ವಿಶ್ರಾಂತಿ ಪಡೆಯಬೇಕಾಗಿ ಬರುತ್ತದೆ. ಇದನ್ನೂ ರದ್ದು ಮಾಡಿ ಎಂದು ಕೋರಿಕೊಳ್ಳುವ ಸಾಧ್ಯತೆಯಿದೆ.
ಶ್ರೀನಿ, ನಿರಂಜನ್ ಶಾ ಭಾಗವಹಿಸಬಹುದೇ?: ಸದ್ಯದ ಲೆಕ್ಕಾಚಾರಗಳ ಪ್ರಕಾರ ತಮಿಳುನಾಡು ಕ್ರಿಕೆಟ್ ಸಂಸ್ಥೆ ಪ್ರತಿನಿಧಿಯಾಗಿ ಸಭೆಯಲ್ಲಿ ಎನ್.ಶ್ರೀನಿವಾಸನ್ ಭಾಗವಹಿಸಲಿದ್ದಾರೆ. ಹಾಗೆಯೇ ಬಿಸಿಸಿಐ ಮಾಜಿ ಕಾರ್ಯದರ್ಶಿ ನಿರಂಜನ್ ಶಾ ಕೂಡ ಭಾಗವಹಿಸಲಿದ್ದಾರೆ. 70 ವರ್ಷ ಮೇಲ್ಪಟ್ಟಿರುವುದರಿಂದ ಇಬ್ಬರೂ ಸಭೆಯಲ್ಲಿ ಪಾಲ್ಗೊಳ್ಳಲು ಅನರ್ಹರಾಗಿದ್ದಾರೆ. ಆದರೆ ಸಭೆಗೆ ಯಾರು ಬರಬೇಕು, ಬರಬಾರದು ಎನ್ನುವುದನ್ನು ನಿರ್ಬಂಧಿಸುವುದು ನಮ್ಮ
ಜವಾಬ್ದಾರಿಯಲ್ಲ ಎಂದು ಆಡಳಿತಾಧಿಕಾರಿ ವಿನೋದ್ ರಾಯ್ ಹೇಳುವ ಮೂಲಕ ಶ್ರೀನಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.