ನವದೆಹಲಿ: ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳದ ನೂತನ ಮುಖ್ಯಸ್ಥರಾಗಿ ಮಾಜಿ ಐಪಿಎಸ್ ಅಧಿಕಾರಿ ಅಜಿತ್ ಸಿಂಗ್‌ರನ್ನು ನೇಮಕ ಮಾಡಲಾಗಿದೆ. ಆದರೆ ಈ ಬೆಳವಣಿಗೆಗೆ ಸ್ವತಃ ಬಿಸಿಸಿಐ ಮುಖ್ಯಸ್ಥ ಅಮಿತಾಭ್ ಚೌಧರಿಯವರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಪದಾಧಿಕಾರಿಗಳ ಗಮನಕ್ಕೆ ಬರದೇ ನಡೆದಿದೆ, ಇದಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಪದೇ ಪದೇ ಬಿಸಿಸಿಐ ಪದಾಧಿಕಾರಿಗಳು ಮತ್ತು ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಆಡಳಿತಾಧಿಕಾರಿಗಳ ನಡುವೆ ಪದೇಪದೇ ಚಕಮಕಿ ನಡೆಯುತ್ತಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಲೋಧಾ ಸಮಿತಿ ಶಿಫಾರಸನ್ನು ಅಳವಡಿಸಿಕೊಳ್ಳುವುದರಿಂದ ಶುರುವಾದ ಚಕಮಕಿ, ಆಟಗಾರರ ವೇತನ ಏರಿಕೆ, ಬೇರೆ ಬೇರೆ ನೇಮಕಗಳವರೆಗೆ ಮುಂದುವರಿದಿದೆ. ಇವೆಲ್ಲವೂ ಬಿಸಿಸಿಐ ನಿಯೋಜಿತ ಆಡಳಿತಾಧಿಕಾರಿಗಳಾದ ವಿನೋದ್ ರಾಯ್ ಅವರಿಂದ ನೇರವಾಗಿ ನಡೆಯುತ್ತಿದೆ. ಇದು ಪದಾಧಿಕಾರಿಗಳನ್ನು ರೊಚ್ಚಿಗೆಬ್ಬಿಸಿದೆ. ಕೆಲವು ದಿನಗಳ ಹಿಂದೆ ಪದಾಧಿಕಾರಿಗಳಿಗೆ ಕಠಿಣ ಸೂಚನೆ ರವಾನಿಸಿದ್ದ ಆಡಳಿತಾಧಿಕಾರಿಗಳು ಯಾವುದನ್ನು ಮಾಡಬೇಕು/ಮಾಡಬಾರದು ಎಂಬ ನೀತಿಸಂಹಿತೆಯನ್ನೇ ಜಾರಿ ಮಾಡಿದ್ದರು. ಇದು ಬಿರುಕು ಆಳವಾಗಲು ಕಾರಣವಾಗಿತ್ತು. ಈಗ ಮತ್ತೂಂದು ಸುತ್ತಿನ ಕದನ ಶುರುವಾಗಿದೆ.
ಯಾರು ಅಜಿತ್ ಸಿಂಗ್?: ರಾಜಸ್ಥಾನ ಪೊಲೀಸ್ ಇಲಾಖೆ ಮಹಾನಿರ್ದೇಶಕರಾಗಿದ್ದ ಅಜಿತ್ ಸಿಂಗ್, 2017 ನ.30ರಂದು ನಿವೃತ್ತರಾಗಿದ್ದರು. 4 ವರ್ಷಗಳ ಕಾಲ ರಾಜಸ್ಥಾನ ಭ್ರಷ್ಟಾಚಾರ ನಿಗ್ರಹದಳದ ಮುಖ್ಯಸ್ಥರಾಗಿಯೂ ಇದ್ದರು. à ಎಲ್ಲ ಅನುಭವಗಳನ್ನು ಆಧರಿಸಿ ಅವರ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದುವರೆಗೆ ಮುಖ್ಯಸ್ಥರಾಗಿದ್ದ ದೆಹಲಿ ಪೊಲೀಸ್ ಇಲಾಖೆ ಮಾಜಿ ಮಹಾ ನಿರ್ದೇಶಕ ನೀರಜ್ ಕುಮಾರ್ ಅವರು ಮೇ ಅಂತ್ಯದವರೆಗೆ ಸಲಹೆಗಾರರಾಗಿ ಮುಂದುವರಿಯಲಿದ್ದಾರೆ.