Advertisement

ಅರ್ಜುನ: ಧವನ್‌, ಸ್ಮತಿ ಶಿಫಾರಸು

06:00 AM Apr 26, 2018 | Team Udayavani |

ಹೊಸದಿಲ್ಲಿ: ಆರಂಭಿಕ ಆಟಗಾರ ಶಿಖರ್‌ ಧವನ್‌ ಮತ್ತು ವನಿತಾ ಆಟಗಾರ್ತಿ ಸ್ಮತಿ ಮಂಧನಾ ಅವರ ಹೆಸರನ್ನು ಈ ಬಾರಿಯ ಅರ್ಜುನ ಪ್ರಶಸ್ತಿಗೆ ಭಾರತೀಯ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಶಿಫಾರಸು ಮಾಡಿದೆ ಎಂದು ಬಿಸಿಸಿಐಯ ಪ್ರಭಾರ ಕಾರ್ಯದರ್ಶಿ ಅಮಿತಾಭ್‌ ಚೌಧರಿ ತಿಳಿಸಿದ್ದಾರೆ.

Advertisement

32ರ ಹರೆಯದ ಧವನ್‌ ಪ್ರಸ್ತುತ ಐಪಿಎಲ್‌ನಲ್ಲಿ ಸನ್‌ರೈಸರ್ ಹೈದರಾಬಾದ್‌ ತಂಡದ ಪರ ಆಡುತ್ತಿದ್ದಾರೆ. ಅವರು ಭಾರತ ಪರ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಆಡುತ್ತಿದ್ದಾರೆ. 2013ರಲ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್‌ಗೆ ಪಾದಾರ್ಪಣೆಗೈದ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಅವರು ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ.

21ರ ಹರೆಯದ ಸ್ಮತಿ ಮಂಧನಾ ವನಿತಾ ಕ್ರಿಕೆಟ್‌ ತಂಡವು ಕಳೆದ ವರ್ಷ ಐಸಿಸಿ ವನಿತಾ ವಿಶ್ವಕಪ್‌ನಲ್ಲಿ ಫೈನಲ್‌ ಹಂತಕ್ಕೇರಲು ಪ್ರಮುಖ ಪಾತ್ರ ವಹಿಸಿದ್ದರು. ಈ ವರ್ಷ ಶ್ರೇಷ್ಠ ನಿರ್ವಹಣೆ ನೀಡುತ್ತಿರುವ ಅವರು ಐಸಿಸಿ ವನಿತಾ ರ್‍ಯಾಂಕಿಂಗ್‌ನಲ್ಲಿ ತನ್ನ ಜೀವನಶ್ರೇಷ್ಠ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಕಳೆದ 9 ಇನ್ನಿಂಗ್ಸ್‌ ಗಳಲ್ಲಿ ಮಂಧನಾ ಐದು ಅರ್ಧಶತಕ ಸಹಿತ 531 ರನ್‌ ಗಳಿಸಿದ್ದಾರೆ. 

ವಿಶ್ವ ಇಲೆವೆನ್‌ ತಂಡದಲ್ಲಿ ಹಾರ್ದಿಕ್‌, ದಿನೇಶ್‌ 
ವಿಶ್ವ ಇಲೆವೆನ್‌ ತಂಡದಲ್ಲಿ ಭಾರತದ ಪ್ರತಿನಿಧಿಯಾಗಿ ಹಾರ್ದಿಕ್‌ ಪಾಂಡ್ಯ ಮತ್ತು ದಿನೇಶ್‌ ಕಾರ್ತಿಕ್‌ ಅವರ ಹೆಸರನ್ನು ಬಿಸಿಸಿಐ ನೀಡಿದೆ. ಲಾರ್ಡ್ಸ್‌ ನಲ್ಲಿ ಮೇ 31ರಂದು ನಡೆಯುವ ಸಹಾಯಾರ್ಥ ಟ್ವೆಂಟಿ20 ಪಂದ್ಯದಲ್ಲಿ ವಿಶ್ವ ಇಲೆವೆನ್‌ ತಂಡವು ವೆಸ್ಟ್‌ಇಂಡೀಸ್‌ ತಂಡವನ್ನು ಎದುರಿಸಲಿದೆ. ಕಳೆದ ವರ್ಷ ಕೆರಿಬಿಯನ್‌ನಲ್ಲಿ ಸಂಭವಿಸಿದ ಭೀಕರ ಸುಂಟರಗಾಳಿಯಿಂದ ಹಾನಿಗೊಳಗಾದ ಕ್ರೀಡಾಂಗಣಗಳನ್ನು ಪುನರ್‌ ನಿರ್ಮಿಸುವ ಉದ್ದೇಶದಿಂದ ನಿಧಿ ಸಂಗ್ರಹಕ್ಕಾಗಿ ಈ ಸಹಾಯಾರ್ಥ ಪಂದ್ಯವನ್ನು ಆಯೋಜಿಸಲಾಗಿದೆ.

ಹಾಲಿ ಟ್ವೆಂಟಿ20 ವಿಶ್ವ ಚಾಂಪಿಯನ್‌ ಆಗಿರುವ ವೆಸ್ಟ್‌ಇಂಡೀಸ್‌ ತಂಡವನ್ನು ಕಾರ್ಲೋಸ್‌ ಬ್ರಾತ್‌ವೇಟ್‌ ಮುನ್ನಡೆಸಲಿದ್ದಾರೆ. ಕ್ರಿಸ್‌ ಗೇಲ್‌, ಮಾರ್ಲಾನ್‌ ಸಾಮ್ಯುಯೆಲ್ಸ್‌, ಬದ್ರಿ, ಆ್ಯಂಡ್ರೆ ರಸೆಲ್‌ ಮುಂತಾದವರು ಆಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next