ಮುಂಬಯಿ: ಭಾರತ ಕ್ರಿಕೆಟ್ ಮಾಜಿ ಬ್ಯಾಟಿಂಗ್ ತರಬೇತುದಾರ ಸಂಜಯ್ ಬಂಗಾರ್ ಅವರನ್ನು ಬಿಸಿಸಿಐ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಬಂಗಾರ್ ಇತ್ತೀಚೆಗೆ ಮುಗಿದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಯ್ಕೆ ಸಮಿತಿ ಸದಸ್ಯ ದೇವಾಂಗ್ ಗಾಂಧಿ ಅವರನ್ನು ಅವಮಾನಿಸಿದ್ದರು ಎನ್ನಲಾಗಿದೆ.
ಆದರೆ ಈ ಬಗ್ಗೆ ದೇವಾಂಗ್ ಗಾಂಧಿ, ತಂಡದ ವ್ಯವಸ್ಥಾಪಕರಾಗಿದ್ದ ಸುನೀಲ್ ಸುಬ್ರಹ್ಮಣಿಯನ್ ಅಥವಾ ತಂಡದ ತರಬೇತುದಾರ ರವಿಶಾಸ್ತ್ರಿಯಾ ಬಿಸಿಸಿಐಗೆ ಯಾವುದೇ ದೂರು ನೀಡಿಲ್ಲ. ಈಗಾಗಲೇ ಬಂಗಾರ್ ಬ್ಯಾಟಿಂಗ್ ಕೋಚ್ ಸ್ಥಾನ ಕಳೆದುಕೊಂಡಿರುವುದರಿಂದ, ವಿಚಾರಣೆಯಿಂದ ವಿನಾಯಿತಿ ನೀಡುವ ಸಾಧ್ಯತೆಯೂ ಇದೆ.
ಮೊನ್ನೆಯಷ್ಟೇ ಮುಗಿದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿದೆ. ಇದೇ ವೇಳೆ ಗಾಂಧಿ ಮತ್ತು ಬಂಗಾರ್ ನಡುವೆ ಹೊಟೇಲ್ ಕೊಠಡಿಯಲ್ಲಿ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ. ಯಾವ ಕಾರಣಕ್ಕೆ ಈ ಘಟನೆ ನಡೆದಿದೆ, ಏನು ನಡೆದಿದೆ ಎನ್ನುವುದು ಇನ್ನಷ್ಟೇ ಖಚಿತವಾಗಬೇಕು.
ಬ್ಯಾಟಿಂಗ್ ತರಬೇತುದಾರ ಸ್ಥಾನ ಕಳೆದುಕೊಂಡ ಸಿಟ್ಟಿನಲ್ಲಿ ಬಂಗಾರ್ ಹೀಗೆ ವರ್ತಿಸಿರಬಹುದು ಎಂದು ಊಹಿಸಲಾಗಿದೆ.