ಮುಂಬೈ: ಐಸಿಸಿ ಏಕದಿನ ವಿಶ್ವಕಪ್ 2023ರ ಆಯೋಜನೆಯಲ್ಲಿ ನಿರತವಾಗಿರುವ ಬಿಸಿಸಿಐ ಇದರ ನಡುವೆಯೇ ಮುಂದಿನ ಐಪಿಎಲ್ ಗೆ ತಯಾರಿ ನಡೆಸುತ್ತಿದೆ. ಡಿಸೆಂಬರ್ ತಿಂಗಳಲ್ಲಿ ಮುಂದಿನ ಐಪಿಎಲ್ ನ ಹರಾಜು ಆಯೋಜನೆ ನಡೆಸಲು ಬಿಸಿಸಿಐ ಮತ್ತು ಐಪಿಎಲ್ ಮಂಡಳಿ ಯೋಜನೆ ಹಾಕಿದೆ.
ಕಳೆದ ವರ್ಷದ ಐಪಿಎಲ್ ಹರಾಜು ಕೊಚ್ಚಿಯಲ್ಲಿ ನಡೆದಿತ್ತು. ಆದರೆ ಈ ಬಾರಿಯ ಹರಾಜು ಕಾರ್ಯಕ್ರಮ ದೇಶದ ಹೊರಗೆ ನಡೆಸಲು ಬಿಸಿಸಿಐ ಯೋಚಿಸುತ್ತಿದೆ. ಈ ಬಾರಿ ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಲಿದೆ. ಡಿಸೆಂಬರ್ 15ರಿಂದ 19ರೊಳಗೆ ಹರಾಜು ನಡೆಯಬಹುದು ಎಂದು ಕ್ರಿಕ್ ಬಜ್ ವರದಿ ಮಾಡಿದೆ.
ಇದಕ್ಕೂ ಮೊದಲು ವನಿತಾ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್) ಹರಾಜು ನಡೆಯಲಿದೆ. ಬಹುತೇಕ ಡಿ.9 ರಂದು ಭಾರತದಲ್ಲಿಯೇ ಡಬ್ಲ್ಯೂಪಿಎಲ್ ನಡೆಯಲಿದೆ ಎಂದು ವರದಿಯಾಗಿದೆ. ಎಲ್ಲಿ ನಡೆಯಲಿದೆ ಎನ್ನುವುದು ಇದುವರೆಗೆ ಖಚಿತವಾಗಿಲ್ಲ.
ಫ್ರಾಂಚೈಸಿಗಳಿಗೆ ಯಾವುದೇ ಅದಿಕೃತ ಅಧಿಸೂಚನೆಯನ್ನು ಕಳುಹಿಸಲಾಗಿಲ್ಲವಾದರೂ, ದುಬೈನಲ್ಲಿ ಐಪಿಎಲ್ ಹರಾಜಿನ ಕುರಿತು ಚರ್ಚೆ ನಡೆಯುತ್ತಿದೆ. ಡಿಸೆಂಬರ್ 18 ಅಥವಾ 19 ರಂದು ನಡೆಯಬಹುದು ಎನ್ನಲಾಗಿದೆ.
ಕಳೆದ ವರ್ಷದ ಹರಾಜನ್ನು ಬಿಸಿಸಿಐ ಇಸ್ತಾಂಬುಲ್ ನಲ್ಲಿ ನಡೆಸಲು ಯೋಜನೆ ಹಾಕಿತ್ತು ಆದರೆ ಅಂತಿಮವಾಗಿ ಕೊಚ್ಚಿಯಲ್ಲಿ ಹರಾಜು ನಡೆಸಲಾಗಿತ್ತು. ಇದನ್ನು ಗಮನಿಸಿದರೆ ದುಬೈ ಯೋಜನೆಯು ತಾತ್ಕಾಲಿಕವಾಗಿರಬಹುದು, ಆದರೆ ಎಲ್ಲಾ ಐಪಿಎಲ್ ಫ್ರಾಂಚೈಸಿಗಳಿಗೆ ಗಲ್ಫ್ ನಗರವನ್ನು ಹರಾಜು ಸ್ಥಳವಾಗಿ ಪರಿಗಣಿಸುವ ಬಗ್ಗೆ ತಿಳಿಸಲಾಗಿದೆ ಎಂದು ವರದಿಯಾಗಿದೆ.
ಆಟಗಾರರ ಟ್ರೇಡಿಂಗ್ ವಿಂಡೋ ಪ್ರಸ್ತುತ ತೆರೆದಿದೆ, ಆದರೆ ಇದುವರೆಗೆ ಐಪಿಎಲ್ ಫ್ರಾಂಚೈಸಿಗಳ ನಡುವೆ ಆಟಗಾರರ ವಿನಿಮಯದ ಬಗ್ಗೆ ಯಾವುದೇ ವರದಿಯಾಗಿಲ್ಲ.