ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಗೂ ಮುನ್ನ “ಬೊಲ್ಯಾಂಡ್ ಪಾರ್ಕ್’ನಲ್ಲಿ ನಡೆಯಬೇಕಿದ್ದ ಟೀಮ್ ಇಂಡಿಯಾದ ಅಭ್ಯಾಸ ಪಂದ್ಯ ರದ್ದಾದ ಬಳಿಕ ಬಿಸಿಸಿಐ ಮತ್ತೂಂದು ಯೋಜನೆ ಹಾಕಿಕೊಂಡಿದೆ. ಕೊಹ್ಲಿ ಪಡೆಯ ಟೆಸ್ಟ್ ತಯಾರಿಗಾಗಿ ವೇಗದ ಟ್ರ್ಯಾಕ್ ಹೊಂದಿರುವ ಅಂಗಳವನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಿದೆ!
ಸಾಮಾನ್ಯವಾಗಿ ಪ್ರವಾಸಿ ತಂಡಗಳಿಗೆ ಆತಿಥೇಯ ಕ್ರಿಕೆಟ್ ಮಂಡಳಿಯೇ ಅಭ್ಯಾಸಕ್ಕಾಗಿ ಸೂಕ್ತ ಅಂಗಳ ಹಾಗೂ ಮೂಲಭೂತ ಸೌಲಭ್ಯವನ್ನು ಒದಗಿಸಬೇಕಾದುದು ವಾಡಿಕೆ. ಆದರೆ ಬಿಸಿಸಿಐ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರವಾಸಿ ನಾಡಿನಲ್ಲಿ ಅಂಗಳವನ್ನೇ ಬಾಡಿಗೆಗೆ ಪಡೆಯಲು ನಿರ್ಧರಿಸಿದೆ!
ಇದು ತಂಡದ ಆಡಳಿತ ಮಂಡಳಿಯ ಕೋರಿಕೆ ಎನ್ನಲಾಗುತ್ತಿದೆ. ಭಾರತದ ಬ್ಯಾಟ್ಸ್‌ಮನ್‌ಗಳ ಅಭ್ಯಾಸಕ್ಕೆ ಇಲ್ಲಿಂದಲೇ ನಾಲ್ವರು ಸೀಮ್ ಬೌಲರ್‌ಗಳನ್ನು ಕರೆದೊಯ್ಯುವ ಆಡಳಿತ ಮಂಡಳಿಯ ಬೇಡಿಕೆಯನ್ನು ಬಿಸಿಸಿಐ ಈಗಾಗಲೇ ಈಡೇರಿಸಿದೆ. ಮುಂದಿನದು ಬಾಡಿಗೆ ಅಂಗಳದ ಸರದಿ.
ಆರೇಳು ದಿನಗಳ ಅಭ್ಯಾಸ
ಭಾರತ ತಂಡ ಡಿ. 27ರ ಮಧ್ಯರಾತ್ರಿ ಮುಂಬಯಿಂದ ದಕ್ಷಿಣ ಆಫ್ರಿಕಾಕ್ಕೆ ವಿಮಾನವೇರಲಿದ್ದು, ಡಿ. 28ರಂದು ಕೇಪ್‌ಟೌನ್ ತಲುಪಲಿದೆ. ಇಲ್ಲಿನ “ನ್ಯೂಲ್ಯಾಂಡ್ಸ್ ಸ್ಟೇಡಿಯಂ’ನಲ್ಲಿ ಸರಣಿಯ ಮೊದಲ ಟೆಸ್ಟ್ ಜ. 5ರಿಂದ ಆರಂಭವಾಗಲಿದೆ. ಈ ನಡುವಿನ ಆರೇಳು ದಿನಗಳ ಅಭ್ಯಾಸಕ್ಕಾಗಿ ಕೇಪ್‌ಟೌನ್‌ನಲ್ಲಿ ಅಂಗಳವೊಂದನ್ನು ಬಾಡಿಗೆಗೆ ಪಡೆಯುವುದು ಬಿಸಿಸಿಐ ಯೋಜನೆ. “ಸೆಂಟರ್ ವಿಕೆಟ್’ ಹೊಂದಿರುವ, ವೇಗದ ಬೌಲಿಂಗಿಗೆ ನೆರವು ನೀಡುವ ಮೈದಾನವನ್ನು ಮಂಡಳಿ ಬಯಸುತ್ತಿದೆ.
ವರದಿಯೊಂದರ ಪ್ರಕಾರ, ಭಾರತದ ಸೂಚನೆ ಮೇರೆಗೆ 2 ದಿನಗಳ ಅಭ್ಯಾಸ ಪಂದ್ಯವನ್ನು ರದ್ದುಗೊಳಿಸಲಾಗಿದೆ. “ಈ ಅಭ್ಯಾಸ ಪಂದ್ಯದಿಂದ ಪ್ರಯೋಜನವಾದರೂ ಏನು? ಆಫ್ರಿಕಾದವರು ಈ ಪಂದ್ಯವನ್ನು ಫ್ಲ್ಯಾಟ್ ಟ್ರ್ಯಾಕ್‌ನಲ್ಲಿ ಆಡಿಸುತ್ತಾರೆ. ಮಧ್ಯಮ ವೇಗಿಗಳನ್ನು ದಾಳಿಗಿಳಿಸುತ್ತಾರೆ. ಈ ಅಭ್ಯಾಸ ಟೆಸ್ಟ್ ಸರಣಿಗೆ ಯಾವುದೇ ರೀತಿಯಲ್ಲಿ ನೆರವಾಗದು. ಇದರ ಬದಲು ನಮ್ಮ ಅಭ್ಯಾಸ ಹಾಗೂ ಸಿದ್ಧತೆಗಳನ್ನು ನಾವೇ ಮಾಡಿಕೊಂಡರೆ ಲಾಭವಿದೆ’ ಎಂಬುದು ಮಂಡಳಿಯ ಅಧಿಕಾರಿಯೊಬ್ಬರ ಹೇಳಿಕೆ.